ಸಾರಾಂಶ
ನಗರ ಪಾಲಿಕೆಗಳು, ಪುರಸಭೆ, ಪಟ್ಟಣ ಪಂಚಾಯ್ತಿಯಂತಹ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮರ ಪ್ರಾಧಿಕಾರ ರಚಿಸಲು 5 ತಿಂಗಳ ಕಾಲಾವಕಾಶ ನೀಡಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಆದೇಶವನ್ನು ಸರ್ಕಾರ ಪಾಲನೆ ಮಾಡಬೇಕು ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘ ಒತ್ತಾಯಿಸಿದೆ.
ಮಂಗಳೂರು : ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976ರ ಪ್ರಕಾರ ರಾಜ್ಯದ ಎಲ್ಲ ನಗರ ಪಾಲಿಕೆಗಳು, ಪುರಸಭೆ, ಪಟ್ಟಣ ಪಂಚಾಯ್ತಿಯಂತಹ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮರ ಪ್ರಾಧಿಕಾರ ರಚಿಸಲು 5 ತಿಂಗಳ ಕಾಲಾವಕಾಶ ನೀಡಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಆದೇಶವನ್ನು ಸರ್ಕಾರ ಪಾಲನೆ ಮಾಡಬೇಕು ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಕುರಿತು ಮಾತನಾಡಿದ ಸಂಘದ ಕಾರ್ಯದರ್ಶಿ ಬೆನೆಡಿಕ್ಟ್ ಫರ್ನಾಂಡಿಸ್, ಸರ್ಕಾರದ ಅಧಿಸೂಚನೆ ಮೂಲಕ ಮರ ಪ್ರಾಧಿಕಾರ ರಚಿಸಬೇಕು ಎನ್ನುವುದು ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ಪ್ರಮುಖ ಉದ್ದೇಶವಾಗಿತ್ತು. ಆದರೆ ಕಾಯ್ದೆ ಜಾರಿಯಾಗಿ 46 ವರ್ಷಗಳೇ ಕಳೆದರೂ ಹೆಚ್ಚಿನ ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರಾಧಿಕಾರ ರಚಿಸಿಲ್ಲ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಧಿಕಾರವನ್ನು ರಚಿಸಲಾಗಿದ್ದರೂ ಕಾಯ್ದೆಯ ನಿಯಮಗಳ ಪ್ರಕಾರ ಮಾಡಿಲ್ಲ ಎಂದು ಆರೋಪಿಸಿದರು.
ಈ ಕುರಿತು ಸಂಘದ ವತಿಯಿಂದ 2024ರ ಫೆಬ್ರವರಿ 26ರಂದು ರಾಜ್ಯಪಾಲರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮರ ಪ್ರಾಧಿಕಾರ ರಚಿಸಲು ಮನವಿ ಮಾಡಲಾಗಿತ್ತು. ಯಾವುದೇ ಕ್ರಮ ಕೈಗೊಳ್ಳದ ಕಾರಣ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದೆವು. ಇದೀಗ ಏ.4ರಂದು ಹೈಕೋರ್ಟ್ ಆದೇಶ ಹೊರಡಿಸಿದ್ದು, ಮರ ಪ್ರಾಧಿಕಾರ ರಚನೆಗೆ 5 ತಿಂಗಳ ಗಡುವು ನೀಡಿದೆ. ಇನ್ನಾದರೂ ಕಾಯ್ದೆ ಪ್ರಕಾರ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಬೇಕು ಎಂದು ಬೆನೆಡಿಕ್ಟ್ ಫರ್ನಾಂಡಿಸ್ ಆಗ್ರಹಿಸಿದರು.
ಭಾರತದ ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಪರಿಸರ ಸ್ಥಿರತೆ ಕಾಪಾಡಿಕೊಳ್ಳಲು ಒಟ್ಟು ಭೌಗೋಳಿಕ ಪ್ರದೇಶದ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಪ್ರಸ್ತುತ ದೇಶದಲ್ಲಿ ಶೇ.24.62 ಮಾತ್ರವೇ ಅರಣ್ಯ ಇದೆ. ಆದರೆ ಇದರಲ್ಲಿ ತೋಟಗಾರಿಕಾ ಬೆಳೆ ಪ್ರದೇಶಗಳೂ ಸೇರಿವೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಂತೂ ಈ ಪ್ರಮಾಣ ಇರುವುದು ಕೇವಲ ಶೇ.6.4 ಮಾತ್ರ ಎನ್ನುವುದು ಡೀಮ್ಡ್ ವಿವಿ ಪ್ರಾಧ್ಯಾಪಕರು ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಮರ ಪ್ರಾಧಿಕಾರ ರಚಿಸಿದರೆ ಖಾಸಗಿ ಅಥವಾ ಸರ್ಕಾರಿ ಭೂಮಿಯ ಮಾಲೀಕರು ತಮ್ಮ ಜಮೀನಿನ ಆವರಣದೊಳಗೆ ಮರ ಅಧಿಕಾರಿಯ ನೇತೃತ್ವದಲ್ಲಿ ಅಗತ್ಯವಿರುವ ಮರಗಳನ್ನು ನೆಡಬೇಕಾಗುತ್ತದೆ. ಹವಾಮಾನ ವೈಪರೀತ್ಯ ಕಾಪಾಡಲು ತುರ್ತಾಗಿ ಈ ಕ್ರಮ ಅನುಸರಿಸರಿಸಬೇಕು ಎಂದು ಬೆನೆಡಿಕ್ಟ್ ಫರ್ನಾಂಡಿಸ್ ಒತ್ತಾಯಿಸಿದರು.
ಸಂಘಟನೆ ಪ್ರಮುಖರಾದ ಅಶ್ವಿನಿ ಭಟ್, ಆರ್ಯ ಅಶೋಕ್, ಆರತಿ ಅಶೋಕ್, ಸರೋಜಾ ಪ್ರಕಾಶ್ ಇದ್ದರು.