ಸಾರಾಂಶ
ಉದ್ಯಮದಲ್ಲಿ ವಂಚನೆ ಆರೋಪ ಪ್ರಕರಣದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಪುತ್ರ ಡಾ। ಅರುಣ್ ಸೋಮಣ್ಣಗೆ ರಿಲೀಫ್ ಸಿಕ್ಕಿದೆ. ತನಿಖೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಉದ್ಯಮದಲ್ಲಿ ವಂಚನೆ ಆರೋಪ ಪ್ರಕರಣದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಪುತ್ರ ಡಾ। ಅರುಣ್ ಸೋಮಣ್ಣಗೆ ರಿಲೀಫ್ ಸಿಕ್ಕಿದೆ. ತನಿಖೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿದೆ.ತಮ್ಮ ವಿರುದ್ಧ ದಾಖಲಾಗಿರುವ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ಅರುಣ್ ಸೋಮಣ್ಣ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ವಿಚಾರಣೆ ನಡೆಸಿದರು.
ಈ ಪ್ರಕರಣದ ದೂರು ಉತ್ತಮವಾದುದು ಎನ್ನಿಸಿದರೂ ಮೇಲ್ನೋಟಕ್ಕೆ ಇದು ಹಣವನ್ನು ಹಿಂಪಡೆಯುವ ಉದ್ದೇಶ ಹಾಗೂ ಶುದ್ಧ ವಾಣಿಜ್ಯ ವಹಿವಾಟಿನಿಂದ ಕೂಡಿದ್ದು, ಅಪರಾಧದ ಬಣ್ಣ ನೀಡಲಾಗಿದೆ. ಹೀಗಾಗಿ ಮುಂದಿನ ವಿಚಾರಣೆವರೆಗೆ ತನಿಖೆ ಸೇರಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮುಂದಿನ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಲಾಗಿದೆ ಎಂದು ಹೇಳಿರುವ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದೆ.ಏನಿದು ಪ್ರಕರಣ?:
ಹಣಕಾಸು ವಿವಾದ ಸಂಬಂಧ ಸಂಜಯನಗರ ನಿವಾಸಿ ತೃಪ್ತಿ ಎನ್. ಹೆಗಡೆ ದೂರು ಆಧರಿಸಿ ಸಚಿವರ ಪುತ್ರ ಅರುಣ್ ಹಾಗೂ ಜೀವನ್ ಕುಮಾರ್, ಪ್ರಮೋದ್ ರಾವ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ‘ನೇಬರ್ ಹುಡ್ ಬೆಂಗಳೂರು’ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ವ್ಯವಹಾರ ಸಂಬಂಧ ತೃಪ್ತಿ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಸಂಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.