ಸಾರಾಂಶ
ನಗರದ ಕಾವಲ್‌ಬೈರಸಂದ್ರದ ದಾರುಲ್ ಉಲೂಮ್ ಸಯಿದಿಯಾ ಮುಸ್ಲಿಂ ಅನಾಥಾಲಯ ಹಾಗೂ ಮದರಸಾವನ್ನು ಅಕ್ರಮವಾಗಿ ಪ್ರವೇಶಿಸಿದ ಮತ್ತು ಅಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿ ಮಾನನಷ್ಟ ಉಂಟುಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನುಂಗೋ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಕಾವಲ್‌ಬೈರಸಂದ್ರದ ದಾರುಲ್ ಉಲೂಮ್ ಸಯಿದಿಯಾ ಮುಸ್ಲಿಂ ಅನಾಥಾಲಯ ಹಾಗೂ ಮದರಸಾವನ್ನು ಅಕ್ರಮವಾಗಿ ಪ್ರವೇಶಿಸಿದ ಮತ್ತು ಅಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿ ಮಾನನಷ್ಟ ಉಂಟುಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನುಂಗೋ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.ಪ್ರಕರಣ ಸಂಬಂಧ ತಮ್ಮ ವಿರುದ್ಧ ದೇವರಜೀವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಪ್ರಿಯಾಂಕ್ ಕಾನುಂಗೋ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ದಾರುಲ್ ಉಲೂಮ್ ಸಯಿದಿಯಾ ಮುಸ್ಲಿಂ ಅನಾಥಾಲಯ ಮತ್ತು ಮದರಸಾದ ಕಾರ್ಯದರ್ಶಿ ಅಶ್ರಫ್ ಖಾನ್ ಅವರು ಅರ್ಜಿದಾರರ ವಿರುದ್ಧ 2023ರ ನ.21ರಂದು ದೇವರಜೀವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಾವು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದವರು ಎಂದು ಹೇಳಿಕೊಂಡು ಅರ್ಜಿದಾರರು ಹಾಗೂ ಇತರ ಕೆಲವರು ಅನುಮತಿಯಿಲ್ಲದೆ ಮದರಸಾದೊಳಗೆ ಪ್ರವೇಶ ಮಾಡಿ ತಪಾಸಣೆ ನಡೆಸಿದ್ದಾರೆ. ನಂತರ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡು ಹೋಗಿ ಮದರಸಾದಲ್ಲಿ ತಾಲಿಬಾನ್ ರೀತಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಮಧ್ಯಾಹ್ನದ ನಂತರ ಮಕ್ಕಳು ನೆಲದ ಮೇಲೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಅದನ್ನೇ ದೊಡ್ಡ ವಿಷಯವನ್ನಾಗಿ ಬಿಂಬಿಸಿ ಮಾನನಷ್ಟ ಉಂಟು ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು.ಅರ್ಜಿದಾರರು ಮಾಡಿದ್ದ ಟ್ವೀಟ್ ಅನ್ನು ಪರಿಶೀಲಿಸಿದ ನ್ಯಾಯಪೀಠ, ‘ತಾಲಿಬಾನ್ ಜೈಸೆ ಜೀವನ್ ಜೀ ರಹೆ ಹೈ’ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ತಾಲಿಬಾನ್ ರೀತಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿಲ್ಲ. ಆತಂಕವಾದ ಎಂಬ ಪದ ಬಳಸಿಲ್ಲ. ಅಷ್ಟಕ್ಕೂ ತಾಲಿಬಾನ್ ಜೈಸೆ ಜೀ ರಹೆ ಹೈ’ ಅಂತ ಹೇಳುವುದಕ್ಕೂ ಆತಂಕವಾದಕ್ಕೂ ಏನು ಸಂಬಂಧ. ತಾಲಿಬಾನ್ ಜೈಸೆ ಜಿ ರಹೆ ಹೈ ಎನ್ನುವುದನ್ನು ರೂಪಕದ ಅರ್ಥದಲ್ಲಿ ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆಯಲ್ಲೂ ರೂಪಕ ಪ್ರಮುಖ ಅಪರಾಧವಾಗುವುದಿಲ್ಲ. ದೂರು ಹಾಗೂ ಟ್ವೀಟ್ ಅನ್ನು ತಪ್ಪಾಗಿ ಅನುವಾದಿಸಲಾಗಿದೆ ಎಂದು ಹೇಳಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿತು.