ಜೆಜೆಎಂ ಕಳಪೆ ಕಾಮಗಾರಿ ಉನ್ನತ ಮಟ್ಟದ ತನಿಖೆಗೆ ಆದೇಶ

| Published : Jun 25 2024, 12:37 AM IST / Updated: Jun 25 2024, 12:38 AM IST

ಸಾರಾಂಶ

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಸೋಮವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಕೈಗೊಂಡ ಜೆಜೆಎಂ ಯೋಜನೆಯಡಿ ಮಾಡಿದ ಕಾಮಗಾರಿಗಳು ( ಜಲಜೀವನ್‌ ಮಿಷನ್) ಸಂಪೂರ್ಣ ಕಳಪೆಯಾಗಿದ್ದು, ಈ ಹಿಂದೆ ಕಾಮಗಾರಿಗಳ ಕುರಿತು ಸಚಿವರ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಿ ಸುಧಾರಣೆಗೆ ಅವಕಾಶ ನೀಡಿದ್ದರೂ ಸಹ ಕಾಮಗಾರಿಗಳಲ್ಲಿನ ಲೋಪ, ಹಣ ಬಿಡುಗಡೆ, ಅಂದಾಜು ಸಮಿತಿಗೆ ತಪ್ಪು ಮಾಹಿತಿ ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಅಂತಿಮವಾಗಿ ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ತನಿಖೆ ಕೈಗೊಳ್ಳಲು ನಿರ್ಧರಿಸಲಾಯಿತು.

ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಸಚಿವರು ಉಸ್ತುವಾರಿ ಕಾರ್ಯದರ್ಶಿಗಳಿಗೆ ಪ್ರಕರಣದ ಗಂಭೀರತೆ ತಿಳಿಸಿ ತಕ್ಷಣವೇ ಜಿಲ್ಲೆಯಲ್ಲಿ ಕೈಗೊಂಡ ಜೆಜೆಎಂ ಕಾಮಗಾರಿಗಳ ತನಿಖೆ ಜೊತೆಗೆ ಅಪೂರ್ಣಗೊಂಡ ಕಾಮಗಾರಿಗಳ ತಪಾಸಣೆ ಹಾಗೂ ಆಗಿರುವ ಲೋಪಗಳ ಕುರಿತು ಸಮಗ್ರ ತನಿಖೆಗೆ ಆದೇಶಿಸಿದರು.

ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಸೇರಿದಂತೆ ಇತರರಿಗೆ ಬಿಡುಗಡೆ ಮಾಡಲಾದ ಹಣದ ವಿವರ ನೀಡಲು ಸಂಬಂಧಿಸಿದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಪುರೋಹಿತ ಅವರಿಗೆ ಸಚಿವ ತಿಮ್ಮಾಪುರ ಮಾಹಿತಿ ಕೇಳಿದಾಗ ಸಮಂಜಸ ಉತ್ತರ ಅವರಿಂದ ಬರಲಿಲ್ಲ. ಸಾಲದೆಂಬಂತೆ ಕಳಪೆ ಕಾಮಗಾರಿ ಕುರಿತು ಕಳೆದ ಸಭೆಯಲ್ಲಿನ ಮಾಹಿತಿ ಅಪೂರ್ಣವಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ತಕ್ಷಣವೆ ಸಮಗ್ರ ಮಾಹಿತಿಗೆ ಮುಂದಾದಾಗ ಆಗಿರುವ ಲೋಪಗಳನ್ನು ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ. ಪಾಟೀಲ ಸಹ ಪ್ರಸ್ತಾಪಿಸಿ, ನಾನು ಸದಸ್ಯನಾಗಿರುವ ವಿಧಾನ ಮಂಡಳದ ಅಂದಾಜು ಸಮಿತಿಯೂ ಸಹ ತಪ್ಪು ಮಾಹಿತಿ ನೀಡಲಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿ ಪುರೋಹಿತ ಅವರನ್ನು ಅಮಾನತುಗೊಳಿಸಲು ಒತ್ತಾಯಿಸಿದರು.

ಸಮಗ್ರ ಚರ್ಚೆಯ ನಂತರ ಜಲಜೀವನ್‌ ಮಿಷನ್‌ ಜಿಲ್ಲೆಯ ಒಟ್ಟು ಕಾಮಗಾರಿಯ ಎಲ್ಲ ಹಂತದ ಕಳಪೆ ಕಾಮಗಾರಿಯ ತನಿಖೆಗೆ ರಾಜ್ಯ ಮಟ್ಟದ ತನಿಖಾ ಸಂಸ್ಥೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ ಸಚಿವರು, ತಪ್ಪಿತಸ್ಥ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ತಿಳಿಸಿದರು.

ಗಣಿ ಅಧಿಕಾರಿಗೂ ತಟ್ಟಿದ ಬಿಸಿ:

ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ಪಡೆಯದೆ ನಡೆಸುವ ಕಾಮಗಾರಿಗಳು, ಸಭೆಗೆ ಸೂಕ್ತ ಮಾಹಿತಿ ನೀಡದೆ ಇರುವುದು, ಬಿಡುಗಡೆಯಾದ ಅನುದಾನದ ಕುರಿತು ಮಾಹಿತಿ ನೀಡದ ಜಿಲ್ಲೆಯ ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿ ಮುತ್ತಪ್ಪ ಎಂಬುವವರ ವಿರುದ್ಧ ಸಭೆಯಲ್ಲಿ ಹುನಗುಂದ ಹಾಗೂ ಬೀಳಗಿ ಕ್ಷೇತ್ರದ ಶಾಸಕರು ಎತ್ತಿದ ಕರ್ತವ್ಯಲೋಪದ ಮಾತಿಗೆ ಧ್ವನಿಯಾದ ಸಚಿವ ತಿಮ್ಮಾಪುರ ತಕ್ಷಣವೇ ಆ ಅಧಿಕಾರಿಯನ್ನು ಜಿಲ್ಲೆಯಿಂದ ಹೊರಹಾಕಲು ಸೂಚಿಸಿದರು.

ಯಾರೂ ಹೊಲಕ್ಕೆ ಹೋಗಿಲ್ಲ:

ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಇಲಾಖೆಯ ಕಾರ್ಯವೈಖರಿಯ ಹಲವು ಮುಖಗಳನ್ನು ಶಾಸಕ ಜೆ.ಟಿ. ಪಾಟೀಲ ಸಭೆಗೆ ತೆರೆದಿಟ್ಟರು. ಬೀಜ, ರಸಗೊಬ್ಬರ ಹಂಚಿಕೆಯಲ್ಲಿನ ತಾರತಮ್ಯ, ಕಳಪೆ ಬೀಜ ಹಾಗೂ ಗೊಬ್ಬರದಿಂದಾಗಿ ರೈತರಿಗಾದ ಹಾನಿ, ಅನಧಿಕೃತವಾಗಿ ಮಾರಾಟ ಮಾಡುವವರ ವ್ಯವಹಾರದ ಕುರಿತು ಮಾತನಾಡಿದ ಅವರು, ಹೆಸರಿಗೆ ಕೃಷಿ ಇಲಾಖೆ ಯಾವ ಅಧಿಕಾರಿಯೂ ಸಹ ಯಾರೊಬ್ಬರ ಹೊಲಕ್ಕೂ ಹೋಗಿ ವಾಸ್ತವಿಕತೆ ಅರಿಯುವುದಿಲ್ಲವೆಂದು ತಿಳಿಸಿದರು.

ಸಚಿವ ತಿಮ್ಮಾಪುರ ಸಹ ಕೃಷಿ ಇಲಾಖೆಯಲ್ಲಿನ ಲೋಪವನ್ನು ಪಟ್ಟಿ ಮಾಡಿದರಲ್ಲದೆ, ನೆಪ ಮಾತ್ರಕ್ಕೆ ಇಲಾಖೆ ಕಾರ್ಯನಿರ್ವಹಿಸುವಂತೆ ಆಗಬಾರದು ಎಂದು ಸಲಹೆ ನೀಡಿದರು. ಶಾಸಕ ಎಚ್.ವೈ ಮೇಟಿ ಮಾತನಾಡಿ, ಕೃಷಿ ಕೇಂದ್ರದಲ್ಲಿ ಹೆಸರಿನ ಬೀಜ ಕೇಳಿದರೆ ಸಜ್ಜೆ ಬೀಜ ಕೊಡುತ್ತಾರೆ ಎಂದು ಹೇಳುವ ಮೂಲಕ ಇಲಾಖೆಯಲ್ಲಿನ ಲೋಪ ತೆರೆದಿಟ್ಟರು.

ಸಭೆಯಲ್ಲಿ ಆರೋಗ್ಯ, ತೋಟಗಾರಿಕೆ, ಪಶುಸಂಗೋಪನೆ, ಲೋಕೋಪಯೊಗಿ, ರಾಷ್ಟ್ರೀಯ ಹೆದ್ದಾರಿ, ಪಂಚಾಯತ್ ರಾಜ್ ಸೇರಿದಂತೆ ಇತರ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಾಯಿತು.

ನಿರ್ಮಿತಿ ಕೇಂದ್ರದ ಅಧಿಕಾರಿ ಬಿಡುಗಡೆ:

ಬಹಳ ವರ್ಷಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೂಗಿ ಕಾರ್ಯವೈಖರಿ ಹಾಗೂ ಅವರ ಮೇಲಿನ ಅಪಾಧನೆಗಳ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವ ತಿಮ್ಮಾಪುರ, ತಕ್ಷಣವೇ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಇಲಾಖಾ ವಿಚಾರಣೆ ಆರಂಭಿಸಲು ಸೂಚಿಸಿದರು.

ಹಲವು ಆಪಾದನೆಗಳನ್ನು ಹಾಗೂ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಶಂಕರಲಿಂಗ ಗೂಗಿ ವಿರುದ್ಧ ಕೇಳಿ ಬಂದ ದೂರುಗಳನ್ನು ಪ್ರಸ್ತಾಪಿಸಿದ ಸಚಿವರು, ತಕ್ಷಣವೇ ಕರ್ತವ್ಯದಿಂದ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಅವರ ಕುರಿತು ಕೇಳಿಬಂದ ಆಪಾದನೆಗಳ ತನಿಖೆ ಆರಂಭಿಸಲು ತಿಳಿಸಿದರು.

ಸಭೆಯ ಸ್ವಾರಸ್ಯಗಳು:

-ಜಿಲ್ಲಾ ಕೇಂದ್ರದಲ್ಲಿರುವ ನವನಗರದ ಜಿಲ್ಲಾ ಆಸ್ಪತ್ರೆಗೆ ಎರಡು ಬಾರಿ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಅಲ್ಲಿನ ಜಿಲ್ಲಾ ಸರ್ಜನ್ ಅವರ ದರ್ಶನವೇ ಆಗಿಲ್ಲ. ಕಾರಣ ಕೇಳಿದರೆ ನಾನು ಮಸಾಜ್ ಮಾಡಿಸಿಕೊಳ್ಳುತ್ತಿದ್ದೆ, ಮತ್ತೊಮ್ಮೆ ಬೇರೆ ಊರಿಗೆ ಹೋಗಿದ್ದೆ ಎಂಬ ಮಾತು ಕೇಳಿ ಬಂದಿದೆ.

-ಇಂದಿನ ಕೆಡಿಪಿ ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ.ಪ್ರಕಾಶ ಸಜ್ಜನ ಅವರ ಕಾರ್ಯವೈಖರಿ ಪ್ರಸ್ತಾಪಿಸಿದ ಸಚಿವ ತಿಮ್ಮಾಪುರ, ನಾನು ಬಂದಾಗ ನೀವೇ ನಿಮ್ಮ ಟ್ರಿಟ್ಮೆಂಟ್‌ಗೆ ಕುಳಿತರೆ ರೋಗಿಗಳಿಗೆ ಟ್ರಿಟ್ಮೆಂಟ್ ನೀಡುವವರು ಯಾರು ಎಂದು ಪ್ರಶ್ನಿಸಿದರು, ನೀವು ಸುಧಾರಿಸದಿದ್ದರೆ ನಾವು ನಿಮ್ಮನ್ನು ಸುಧಾರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

-ಕೆಡಿಪಿ ಸಭೆಯಲ್ಲಿ ಬಿಜೆಪಿಯ ತೇರದಾಳ ಶಾಸಕರು ಪದೇ ಪದೆ ಗುತ್ತಿಗೆದಾರರ ಬಿಲ್ ಪಾವತಿಯಾಗಿಲ್ಲ ಎಂದು ಹೇಳಲು ಆರಂಭಿಸಿದಾಗ ಸಚಿವ ತಿಮ್ಮಾಪುರ ಹಾಗೂ ಶಾಸಕ ಜೆ.ಟಿ. ಪಾಟೀಲ ಅವರು ಕೆಡಿಪಿ ಸಭೆಯಲ್ಲಿ ರಾಜಕಾರಣ ಬೇಡ, ಯಾರ ಅವಧಿಯಲ್ಲಿ ಎಷ್ಟು ಬಿಲ್‌ ಪಾವತಿ ಬಾಕಿ ಇದೆ ಎಂಬುದನ್ನು ಬಹಿರಂಗಪಡಿಸಲೇ ಎಂದು ಗುಡುಗಿದಾಗ ತೇರದಾಳ ಶಾಸಕರು ತಣ್ಣಗಾದರು.

-ಕೃಷಿ ಇಲಾಖೆಯ ಲೋಪಗಳ ಕುರಿತು ನಡೆದ ಚರ್ಚೆಯಲ್ಲಿ ಶಾಸಕ ಎಚ್.ವೈ. ಮೇಟಿ ಬಾಗಲಕೋಟೆ ತಾಲೂಕಿನ ರಾಂಪುರ ಕೃಷಿ ಕೇಂದ್ರದಲ್ಲಿ ನಮ್ಮ ಮನೆಯವರು ಹೆಸರು ಬಿತ್ತನೆ ಮಾಡಲು ಹೆಸರಿನ ಬೀಜ ಕೇಳಲು ಹೋದರೆ ಹೆಸರು ಬೀಜ ಇಲ್ಲ ಸಜ್ಜಿ ತೆಗೆದುಕೊಳ್ಳಿ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದನ್ನು ಸ್ವಾರಸ್ಯವಾಗಿ ವಿವರಿಸಿದಾಗ ಸಭೆ ನಗೆಗಡಲಿನಲ್ಲಿ ತೇಲಿತು.