ಆರೋಗ್ಯ ಸಚಿವ ಯು.ಟಿ. ಖಾದರ್ ಹೋಟೆಲ್ಗಳ ಮೇಲೆ ದಾಳಿ ನಡೆಸಿ ಕಲಬೆರಕೆ ಆಹಾರ ಪದಾರ್ಥಗಳ ಬಳಕೆ ಪತ್ತೆ ಹಚ್ಚಿರುವುದು ಉತ್ತಮ ಬೆಳವಣಿಗೆ
ಬಳ್ಳಾರಿ: ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಾಗುತ್ತಿರುವ ವಿಚಾರ ಆತಂಕಕಾರಿ ಎಂದು ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಯೋಗಾಲಯ ಪರೀಕ್ಷೆಗಳ ಪ್ರಕಾರ, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಶೇ. 20ರಷ್ಟು ಎಥೆನಾಲ್ ಮಿಶ್ರಣದ ಮಿತಿಗೆ ಬದಲಾಗಿ ಪೆಟ್ರೋಲ್ನಲ್ಲಿ ಶೇ. 31ರಷ್ಟು ಎಥೆನಾಲ್ ಬಳಕೆಯಾಗುತ್ತಿರುವುದನ್ನು ಸಚಿವ ಹರ್ಷದ್ ರಿಜ್ವಾನ್ ಬಹಿರಂಗಪಡಿಸಿದ್ದಾರೆ. ಈ ಕುರಿತು ಸಂಬಂಧಪಟ್ಟವರು ಸೂಕ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.ಆರೋಗ್ಯ ಸಚಿವ ಯು.ಟಿ. ಖಾದರ್ ಹೋಟೆಲ್ಗಳ ಮೇಲೆ ದಾಳಿ ನಡೆಸಿ ಕಲಬೆರಕೆ ಆಹಾರ ಪದಾರ್ಥಗಳ ಬಳಕೆ ಪತ್ತೆ ಹಚ್ಚಿರುವುದು ಉತ್ತಮ ಬೆಳವಣಿಗೆಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿಯೂ ಅಧಿಕಾರಿಗಳು ವಿವಿಧ ಹೋಟೆಲ್ಗಳ ಮೇಲೆ ದಾಳಿ ನಡೆಸಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೀದಿಬದಿ ಹೋಟೆಲ್ಗಳ ಮೇಲೆಯೂ ತಪಾಸಣೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಡಿ.15ರವರೆಗೆ ನೀರು ಹರಿಸಲಿ: ತುಂಗಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗಳಿಗೆ ಡಿ.15ರವರೆಗೆ ನಿರಂತರವಾಗಿ ನೀರು ಹರಿಸುವ ಮೂಲಕ ರೈತರ ಬೆಳೆ ರಕ್ಷಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ರೈತರು ಭತ್ತ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆ ನಾಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗದಿದ್ದರೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಬೆಳೆಗಳು ಕೈಗೆ ಬರುವ ಹಂತದಲ್ಲಿ ನೀರಿನ ಕೊರತೆಯಾದರೆ ರೈತರ ಶ್ರಮ ವ್ಯರ್ಥವಾಗಲಿದೆ. ಹೀಗಾಗಿ, ಡಿ. 15ರವರೆಗೆ ಕಾಲುವೆಗಳಿಗೆ ನೀರು ಹರಿಸುವ ಅನಿವಾರ್ಯತೆ ಇದೆ. ಈ ಕುರಿತು ರಾಜ್ಯ ಸರ್ಕಾರ ಆಂಧ್ರಪ್ರದೇಶ ಸರಕಾರದೊಂದಿಗೆ ಸಮನ್ವಯ ಸಾಧಿಸಬೇಕು. ಆನ್ ಆ್ಯಂಡ್ ಆಫ್ ಪದ್ಧತಿಯಲ್ಲಿ ನೀರು ಪೂರೈಸುವ ಮೂಲಕ ಎರಡೂ ರಾಜ್ಯಗಳ ರೈತರ ಹಿತ ಕಾಪಾಡಬೇಕು. ಇದರಿಂದ ಬೆಳೆಗಳಿಗೆ ಅಗತ್ಯ ನೀರು ದೊರೆಯಲಿದ್ದು, ರೈತರು ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.