ಸುಳ್ಳು ಕೇಸಲ್ಲಿ 8 ವರ್ಷ ಜೈಲಲ್ಲಿದ್ದವಗೆ ಹೈ ರಿಲೀಫ್‌!

| Published : Sep 22 2025, 01:00 AM IST

ಸುಳ್ಳು ಕೇಸಲ್ಲಿ 8 ವರ್ಷ ಜೈಲಲ್ಲಿದ್ದವಗೆ ಹೈ ರಿಲೀಫ್‌!
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಇಚ್ಛೆಯಿಂದ ಯುವಕನೊಂದಿಗೆ ಮನೆಬಿಟ್ಟು ಹೋದ ಯುವತಿ, ಒಂದೂವರೆ ವರ್ಷ ಬಳಿಕ ಪೊಲೀಸರ ಮುಂದೆ ಅತ್ಯಾಚಾರದ ಆರೋಪ ಮಾಡುತ್ತಾಳೆ. ಇದೇ ಸತ್ಯವೆಂದು ನಂಬಿ ಅಧೀನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದರಿಂದ ಯುವಕ ಎಂಟು ವರ್ಷದಿಂದ ಜೈಲಿನಲ್ಲಿ ಕೊಳೆಯುತ್ತಿದ್ದ. ಇದೀಗ ಯುವತಿ ಹೇಳಿಕೆ ವಿಶ್ವಾಸಾರ್ಹವಾಗಿಲ್ಲ ಎಂದು ತೀರ್ಮಾನಿಸಿರುವ ಹೈಕೋರ್ಟ್‌ ಯುವಕನ ಬಿಡುಗಡೆಗೆ ಆದೇಶಿಸಿದೆ.

ವೆಂಕಟೇಶ್ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ವಇಚ್ಛೆಯಿಂದ ಯುವಕನೊಂದಿಗೆ ಮನೆಬಿಟ್ಟು ಹೋದ ಯುವತಿ, ಒಂದೂವರೆ ವರ್ಷ ಬಳಿಕ ಪೊಲೀಸರ ಮುಂದೆ ಅತ್ಯಾಚಾರದ ಆರೋಪ ಮಾಡುತ್ತಾಳೆ. ಇದೇ ಸತ್ಯವೆಂದು ನಂಬಿ ಅಧೀನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದರಿಂದ ಯುವಕ ಎಂಟು ವರ್ಷದಿಂದ ಜೈಲಿನಲ್ಲಿ ಕೊಳೆಯುತ್ತಿದ್ದ. ಇದೀಗ ಯುವತಿ ಹೇಳಿಕೆ ವಿಶ್ವಾಸಾರ್ಹವಾಗಿಲ್ಲ ಎಂದು ತೀರ್ಮಾನಿಸಿರುವ ಹೈಕೋರ್ಟ್‌ ಯುವಕನ ಬಿಡುಗಡೆಗೆ ಆದೇಶಿಸಿದೆ.

ಆ ಮೂಲಕ ಜೀವಾವಧಿ ಶಿಕ್ಷೆಗೆ ಒಳಗಾಗಿ ಕಳೆದ ಎಂಟು ವರ್ಷಗಳಿಂದ ಜೈಲಿನಲ್ಲಿದ್ದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣ ನಿವಾಸಿ ಶಂಕರ್‌ ನಾಯ್ಕಗೆ ‘ಹೊಸ ಜೀವನ’ ಕರುಣಿಸಿದೆ.

ಅತ್ಯಾಚಾರ ಅಪರಾಧದಡಿ ದೋಷಿಯೆಂದು ತೀರ್ಮಾನಿಸಿ, ಜೀವಾವಧಿ ಶಿಕ್ಷೆ, 90 ಸಾವಿರ ರು. ದಂಡ ವಿಧಿಸಿದ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್‌ ಮತ್ತು ಜಿಲ್ಲಾ ನ್ಯಾಯಾಲಯದ ಆದೇಶ ರದ್ದುಕೋರಿ ಶಂಕರ್‌ ನಾಯ್ಕ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದ. ಅದನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ.ಎಸ್‌.ಮುದಗಲ್‌ ಅವರ ನೇತೃತ್ವದ ವಿಭಾಗೀಯ ಪೀಠ, ಪ್ರಕರಣದಲ್ಲಿ ಯುವತಿ ಮತ್ತು ಯುವಕನ ಸಂಬಂಧ ಸಮ್ಮತಿಯದ್ದು ಎಂದು ತೀರ್ಮಾನಿಸಿ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿದೆ.

ಪ್ರಕರಣವೇನು?:

ಚಿತ್ರದುರ್ಗ ಠಾಣಾ ಪೊಲೀಸರು 2015ರ ಜು.7ರಂದು ಸಂತ್ರಸ್ತೆ ತಂದೆ ಚಳ್ಳಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿ, ನನ್ನ ಮಗಳನ್ನು ಶಂಕರ್‌ ನಾಯ್ಕ ಬಲವಂತವಾಗಿ ಮದುವೆಯಾಗಲು ಅಪಹರಿಸಿದ್ದಾನೆಂದು ಆರೋಪಿಸಿದ್ದರು. ಪೊಲೀಸರು ಶಂಕರ್‌ ವಿರುದ್ಧ ಅಪಹರಣ, ಮದುವೆಗೆ ಬಲವಂತಪಡಿಸಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದರು. ತನಿಖೆ ವೇಳೆ 2017ರ ಜ.22ರಂದು ಸಂತ್ರಸ್ತೆ ನೀಡಿದ್ದ ಹೇಳಿಕೆ ಆಧರಿಸಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿ, ಶಂಕರ್‌ ವಿರುದ್ಧ ಐಪಿಸಿ ಸೆಕ್ಷನ್‌ 376(2)(ಎನ್‌) ಮತ್ತು ಪೋಕ್ಸೋ ಕಾಯ್ದೆ-2012ರ ಸೆಕ್ಷನ್‌ 4, 6, ಮತ್ತು 8 ಅನ್ನು ಸೇರ್ಪಡೆಗೊಳಿಸಿದ್ದರು.

ಅಧೀನ ನ್ಯಾಯಾಲಯ ಶಂಕರ್‌ ಗೆ ಮಹಿಳೆ ಮೇಲೆ ಪದೇ ಪದೆ ಅತ್ಯಾಚಾರ ನಡೆಸಿದ ಅಪರಾಧದಡಿ (ಐಪಿಸಿ ಸೆಕ್ಷನ್‌ 376(2)(ಎನ್‌) ಜೀವಾವಧಿ ಶಿಕ್ಷೆ, 30 ಸಾವಿರ ರು. ದಂಡ ವಿಧಿಸಿ 2018ರ ಮೇ 4ರಂದು ಆದೇಶಿಸಿತ್ತು. ಇನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಕ್ಕೆ ಪೋಕ್ಸೋ ಕಾಯ್ದೆ-2012ರ ಸೆಕ್ಷನ್‌ 4, 6 ಮತ್ತು 8ಕ್ಕೆ ಅಪರಾಧ ಕೃತ್ಯಕ್ಕೆ ತಲಾ 10 ವರ್ಷ ಜೈಲು, 10 ಸಾವಿರ ರು. ದಂಡ ವಿಧಿಸಿತ್ತು. ಇದರಿಂದ ಹೈಕೋರ್ಟ್‌ಗೆ 2018ರಲ್ಲಿ ಮೇಲ್ಮನವಿ ಸಲ್ಲಿಸಿದ್ದ ಶಂಕರ್‌, ಅಧೀನ ನ್ಯಾಯಾಲಯ ತೀರ್ಪು ಹೊರಬಿದ್ದ ದಿನದಿಂದಲೂ ಜೈಲಿನಲ್ಲಿದ್ದ.

ಕೋರ್ಟ್‌, ಪೊಲೀಸರ ಎದುರು ಭಿನ್ನ ಹೇಳಿಕೆಸಂತ್ರಸ್ತೆ 2015ರ ಜು.23ರಂದು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಸ್ವಇಚ್ಛೆ ಹೇಳಿಕೆ ದಾಖಲಿಸಿದ್ದಳು. ಆರೋಪಿ ತನ್ನನ್ನು ಬಲವಂತವಾಗಿ ಕರೆದೊಯ್ದ ಅಥವಾ ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ಏನೂ ಹೇಳಿರಲಿಲ್ಲ. ಆದರೆ, 2017ರ ಜ.22ರದು ಪೊಲೀಸರ ಮುಂದೆ ಹೇಳಿಕೆ ದಾಖಲಿಸುವಾಗ, ಹಲವು ಬಾರಿ ತನ್ನ ಮೇಲೆ ಶಂಕರ್‌ ಲೈಂಗಿಕ ದೌರ್ಜನ್ಯ (ಹಲ್ಲೆ) ನಡೆಸಿರುವುದಾಗಿ ಹೇಳಿದ್ದಳು ಎಂದು ಪೀಠ ಆಕ್ಷೇಪಿಸಿದೆ.

ಅಲ್ಲದೆ, ಆರೋಪಿಯೊಂದಿಗೆ ಸಂತ್ರಸ್ತೆ ಚಳ್ಳಕರೆಯಿಂದ ಚಿತ್ರದುರ್ಗ, ಚಿತ್ರದುರ್ಗದಿಂದ ಚಳ್ಳಕೆರೆಗೆ ಬಸ್‌ನಲ್ಲಿ ಪ್ರಯಾಣಿಸಿದ್ದಳು. ಈ ವೇಳೆ ಶಂಕರ್‌ ತನ್ನನ್ನು ಬಲವಂತಾಗಿ ಕರೆದೊಯ್ಯುತ್ತಿರುವ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲು ಯಾವುದೇ ಪ್ರಯತ್ನ ಮಾಡಿಲ್ಲ. 2025ರ ಜು.1ರಿಂದ 22ರವರೆಗೆ ಆರೋಪಿ ಸಂಬಂಧಿಕರ ಮನೆಯಲ್ಲಿದ್ದಾಗಲೂ ತಪ್ಪಿಸಿಕೊಳ್ಳಲು ಯತ್ನಿಸಿಲ್ಲ. ಆಕೆಯ ದೇಹ, ಗುಪ್ತಾಂಗದ ಮೇಲೆ ಬಾಹ್ಯ ಗಾಯಗಳಿಲ್ಲ ಎಂದು ವೈದ್ಯರು ಸಾಕ್ಷ್ಯ ನುಡಿದಿದ್ದಾರೆ. ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದಳು ಎನ್ನುವುದನ್ನು ಪೊಲೀಸರು ಸಾಬೀತುಪಡಿಸಿಲ್ಲ. ಈ ಎಲ್ಲಾ ಸನ್ನಿವೇಶಗಳಿಂದ ಸಂತ್ರಸ್ತೆ ಹಾಗೂ ಆರೋಪಿ ನಡುವಿನ ಸಂಬಂಧ ಸಹಮತದಿಂದ ಕೂಡಿತ್ತು. ಸಂತ್ರಸ್ತೆ ಹೇಳಿಕೆ ವಿಶ್ವಾಸರ್ಹಾವಾಗಿಲ್ಲ ಎಂದು ತೀರ್ಮಾನಿಸಬಹುದು. ಆದ್ದರಿಂದ ಆರೋಪಿಗೆ ಅಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸಲಾಗುತ್ತಿದ್ದು, ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆದೇಶಿಸಿದೆ. ಮೇಲ್ಮನವಿದಾರನ ಪರ ವಕೀಲ ಸಿ.ಎನ್‌. ರಾಜು ವಾದ ಮಂಡಿಸಿದ್ದರು.