ಕುಷ್ಟಗಿ: ತಾಲೂಕಿನ ಗುಮಗೇರಾ ಗ್ರಾಮದ ಜಮೀನಿನಲ್ಲಿ ಹೈಟೆನ್ಷನ್ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ವೇಳೆ ಪರಿಹಾರ ಮತ್ತು ಅನುಮತಿ ವಿವಾದ ಹಿಂಸಾತ್ಮಕ ಘರ್ಷಣೆಗೆ ತಿರುಗಿದ ಹಿನ್ನೆಲೆಯಲ್ಲಿ ಕಂಪನಿ ಸಿಬ್ಬಂದಿ ಮತ್ತು ರೈತರ ನಡುವೆ ಪರಸ್ಪರ ವಾಗ್ವಾದ, ಘರ್ಷಣೆ ಮತ್ತು ಮಾರಾಮಾರಿ ನಡೆದಿದ್ದು, ಮೂವರು ರೈತರು ಕೆಲ ಕಂಪನಿ ಸಿಬ್ಬಂದಿಗಳು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಈ ಘಟನೆ ಕುರಿತಂತೆ 18 ಜನರ ವಿರುದ್ಧ ದೂರು ದಾಖಲಾಗಿದೆ. ರೈತರ ಆರೋಪದಂತೆ ತಮ್ಮ ಜಮೀನಿನಲ್ಲಿ ಅನುಮತಿ ಪಡೆಯದೇ ಹಾಗೂ ಸೂಕ್ತ ಪರಿಹಾರ ನೀಡದೇ ಖಾಸಗಿ ಕಂಪನಿಯವರು ಹೈಟೆನ್ಷನ್ ವಿದ್ಯುತ್ ಲೈನ್ ಅಳವಡಿಕೆ ಕಾಮಗಾರಿ ಆರಂಭಿಸಿದ್ದರು. ಇದನ್ನು ಪ್ರಶ್ನಿಸಿದ ರೈತರು, ಸೂಕ್ತ ಪರಿಹಾರ ಮತ್ತು ಕಾನೂನುಬದ್ಧ ಅನುಮತಿ ದೊರೆಯುವ ವರೆಗೆ ಯಾವುದೇ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.ಈ ವೇಳೆ ರೈತರು ಮತ್ತು ಕಂಪನಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ಕೆಲವೇ ಕ್ಷಣಗಳಲ್ಲಿ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆಗೆ ಕಾರಣವಾಯಿತು ಎಂದು ತಿಳಿದು ಬಂದಿದೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕುಷ್ಟಗಿ ಪೊಲೀಸ ಠಾಣೆಯ ಪಿಎಸೈ ಹನುಮಂತಪ್ಪ ತಳವಾರ ಹಾಗೂ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದು ಪರಿಶೀಲನೆ ನಡೆಸಿದರು.ಘಟನೆಯಲ್ಲಿ ಗಾಯಗೊಂಡವರನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
18 ಜನರ ಮೇಲೆ ಪ್ರಕರಣ ದಾಖಲು: ರೈತರು ಮತ್ತು ಖಾಸಗಿ ಕಂಪನಿಯ ಸಿಬ್ಬಂದಿಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ ರೈತರು ಕಂಪನಿಯಲ್ಲಿ ಕೆಲಸ ಮಾಡುವ 16 ಸಿಬ್ಬಂದಿಗಳು ಹಾಗೂ ಇಬ್ಬರು ಮೇಲ್ವಿಚಾರಕರ ವಿರುದ್ಧ ದೂರು ದಾಖಲಿಸಿದ್ದಾರೆ.
ರೈತರ ಮೇಲೆ ಹಲ್ಲೆ ಖಂಡನೀಯ: ಗುಮಗೇರಾ ಗ್ರಾಮದಲ್ಲಿ ನಡೆದಿರುವ ರೈತರ ಮೇಲಿನ ಹಲ್ಲೆ ಖಂಡನೀಯ, ತಪ್ಪಿತಸ್ಥ ಕಂಪನಿ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತಪರ ಸಂಘಟನೆ ಮುಖಂಡರಾದ ಮಲ್ಲಿಕಾರ್ಜುನ ದೋಟಿಹಾಳ, ಹನುಮೇಶ ಶಾಖಾಪೂರ, ಶರಣಪ್ಪ ಮೇಗೂರು, ಹೊನ್ನಪ್ಪ ತಳವಾರ ಹಾಗೂ ಶರೀಫಸಾಬ ಕುಷ್ಟಗಿ ಆಗ್ರಹಿಸಿದರು.
ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದಲ್ಲಿ ರೈತರು ಮತ್ತು ವಿದ್ಯುತ್ ಕಾಮಗಾರಿ ಸಿಬ್ಬಂದಿ ನಡುವೆ ನಡೆದ ಘರ್ಷಣೆಯ ಹಿನ್ನೆಲೆ ಕಂಪನಿಯ 18 ಜನರ ಮೇಲೆ ದೂರು ದಾಖಲಾಗಿದೆ. ಮುಂದಿನ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕುಷ್ಟಗಿ ಪಿಎಸೈ ಹನುಮಂತಪ್ಪ ತಳವಾರ ತಿಳಿಸಿದ್ದಾರೆ.ನಮ್ಮ ಜಮೀನಿನಲ್ಲಿ ಅನುಮತಿ ಪಡೆಯದೇ ಪರಿಹಾರ ನೀಡದೆ ವಿದ್ಯುತ್ ಲೈನ್ ಕಾಮಗಾರಿ ನಡೆಸಲು ಮುಂದಾದರು. ನಾವು ತಕರಾರು ಮಾಡಿದಾಗ ಮಾತಿಗೆ ಮಾತು ಬೆಳೆದು ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಗಾಯಾಳು ರೈತರಾದ ರಾಮಣ್ಣ ಭಜಂತ್ರಿ, ಹನಮೇಶ ಭಜಂತ್ರಿ, ಹನಮಂತಪ್ಪ ಭಜಂತ್ರಿ ತಿಳಿಸಿದ್ದಾರೆ.