ಕನ್ನಡಪ್ರಭವಾರ್ತೆ ನಾಪೋಕ್ಲು

ಬೆಳೆಗಾರರು ಜೇನು ಸಾಕಣೆ ಮಾಡುವುದರಿಂದ ಅಧಿಕ (ಫಸಲು) ಇಳುವರಿ ಜೊತೆಗೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಕೆಂಚಾರೆಡ್ಡಿ ಹೇಳಿದರು.

ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಉತ್ಸವದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜೇನು ಕೃಷಿ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೊಡಗಿನ ಜೇನಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ ಉತ್ತಮ ದರ್ಜೆಯ ಜೇನು ಲಭಿಸುತ್ತಿಲ್ಲ. ಇತರೆಡೆಗಳಿಂದ ಜೇನನ್ನು ತಂದು ಕೊಡಗಿನ ಜೇನು ಹೆಸರಿನಲ್ಲಿ ಮಾರಾಟ ಮಾಡುತ್ತಿರುವುದರಿಂದ ಜೇನು ಕಲಬೆರಕೆಯಾಗುತ್ತಿದೆ. ಇದನ್ನು ತಪ್ಪಿಸಲು ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಕೊಡಗಿನ ಜೇನನ್ನು ಉತ್ಪಾದನೆ ಮಾಡಬೇಕು ಎಂದರು. ಕೊಡಗಿನಲ್ಲಿ ಜೇನು ಕೃಷಿಗೆ ವಿಪುಲ ಅವಕಾಶವಿದೆ. ಜೇನುಸೇವನೆಯಿಂದ ಆರೋಗ್ಯಕ್ಕೆ ಒಳಿತು. ಜೇನನ್ನು ಔಷಧಿಯಾಗಿಯೂ ಬಳಸುತ್ತಿರುವುದರಿಂದ ಗುಣಮಟ್ಟದ ಜೇನಿಗೆ ಸಾಕಷ್ಟು ಬೇಡಿಕೆ ಇದ್ದು ಗುಣಮಟ್ಟದ ಜೇನಿಗೆ ಉತ್ತಮ ಬೇಡಿಕೆ ಇದೆ. ಆದರೆ ಉತ್ಪಾದನೆ ಇಲ್ಲ.

ಜೇನಿನ ಉತ್ಪಾದನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಜೇನು ಕುಟುಂಬಗಳ ಸಾಕಣೆ ಮತ್ತು ನಿರ್ವಹಣೆ, ಮುನ್ನೆಚ್ಚರಿಕೆ ಕ್ರಮ, ಜೇನು ಸಾಕಣೆಯಿಂದ ಆಗುವ ಲಾಭ ಸೇರಿದಂತೆ ಸಮಗ್ರ ಮಾಹಿತಿಯನ್ನು ಸ್ಲೈಡ್ ಚಿತ್ರಗಳ ಮೂಲಕ ನೀಡಿ ರೈತರಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಿದರು.