ಸಾರಾಂಶ
ಯಾವುದೇ ಉದ್ಯೋಗಗಳಿಗೆ ಈಗ ಕೇವಲ ಆ ವಿಷಯಕ್ಕೆ ಸಂಬಂಧಿಸಿದಂತೆ ಓದಿದರೆ ಮಾತ್ರ ಸಾಕಾಗುವುದಿಲ್ಲ. ಜೊತೆಗೆ ಇತರೆ ವಿಷಯಗಳು ಬೇಕಾಗುತ್ತದೆ. ಉದಾಹರಣೆಗೆ ಇಂಜಿನಿಯರಿಂಗ್ ಓದಿದ ಒಬ್ಬ ವಿದ್ಯಾರ್ಥಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಕಲಾಶಾಸ್ತ್ರದ ಅರಿವು ಇರಬೇಕಾಗುತ್ತದೆ. ಒಟ್ಟು ಕೌಶಲ್ಯದ ಮೇಲೆ ಆತನಿಗೆ ಉದ್ಯೋಗ ದೊರೆಯುತ್ತದೆ ಹೊರತು ಕೇವಲ ಸಂಬಂಧ ಪಟ್ಟ ಒಂದು ವಿಷಯದ ಅಧ್ಯಯನದಿಂದ ಅದು ಸಾಧ್ಯವಿಲ್ಲ .
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಉನ್ನತ ಶಿಕ್ಷಣ ಸಂಸ್ಥೆಗಳು ಅಂತರಶಿಸ್ತೀಯತೆ ಕಾಪಾಡಿಕೊಳ್ಳಬೇಕು ಎಂದು ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಹೇಳಿದರು.ನಗರದ ಆರ್ಯ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮಕ್ಕಳಿಗೆ ಮತ್ತು ಪೋಷಕರಿಗೆ ಆಯೋಜಿಸಿದ್ದ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜುಗಳಲ್ಲಿ ಬೋಧಿಸುವ ಎಲ್ಲಾ ವಿಷಯಗಳು ಪ್ರಮುಖವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಅಧ್ಯಯನಗಳು ವಿಭಿನ್ನತೆಯನ್ನು ಪಡೆದುಕೊಂಡಿವೆ. ಅದು ಒಂದು ವಿಷಯಕ್ಕೆ ಸೀಮಿತವಾಗಬಾರದು. ಒಂದು ಚಟುವಟಿಕೆಯೇ ಕೇಂದ್ರೀಕೃತವಾಗಿರಬಾರದು. ಶೈಕ್ಷಣಿಕ ಎಲ್ಲಾ ವಿಭಾಗಗಳ ಸಂಯೋಜನೆಯನ್ನು ಒಳಗೊಂಡಿರಬೇಕಾಗುತ್ತದೆ ಎಂದರು.
ಯಾವುದೇ ಉದ್ಯೋಗಗಳಿಗೆ ಈಗ ಕೇವಲ ಆ ವಿಷಯಕ್ಕೆ ಸಂಬಂಧಿಸಿದಂತೆ ಓದಿದರೆ ಮಾತ್ರ ಸಾಕಾಗುವುದಿಲ್ಲ. ಜೊತೆಗೆ ಇತರೆ ವಿಷಯಗಳು ಬೇಕಾಗುತ್ತದೆ. ಉದಾಹರಣೆಗೆ ಇಂಜಿನಿಯರಿಂಗ್ ಓದಿದ ಒಬ್ಬ ವಿದ್ಯಾರ್ಥಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಕಲಾಶಾಸ್ತ್ರದ ಅರಿವು ಇರಬೇಕಾಗುತ್ತದೆ. ಒಟ್ಟು ಕೌಶಲ್ಯದ ಮೇಲೆ ಆತನಿಗೆ ಉದ್ಯೋಗ ದೊರೆಯುತ್ತದೆ ಹೊರತು ಕೇವಲ ಸಂಬಂಧ ಪಟ್ಟ ಒಂದು ವಿಷಯದ ಅಧ್ಯಯನದಿಂದ ಅದು ಸಾಧ್ಯವಿಲ್ಲ ಎಂದು ಹೇಳಿದರು.ಶಿಕ್ಷಣ ಕ್ಷೇತ್ರದಲ್ಲಿ ಏನು ಕಲಿತರು ಅದು ವ್ಯರ್ಥವಾಗುವುದಿಲ್ಲ. ಶಿಕ್ಷಕರು, ಬೋಧಕರು ಯೋಚನಾಶಕ್ತಿಯನ್ನು ಬೆಳೆಸುವಂತಹ ವಾತಾವರಣವನ್ನು ರೂಪಿಸಬೇಕಾಗುತ್ತದೆ. ಮಕ್ಕಳು ಕೂಡ ಪ್ರಶ್ನೆ ಮಾಡುವುದನ್ನು ಮತ್ತು ವಿಮರ್ಶಾತ್ಮಕವಾಗಿ ವಿಶ್ಲೇಷಣೆ ಮಾಡುವುದನ್ನು ಕಲಿಯಬೇಕಾಗುತ್ತದೆ ಎಂದರು.
ಶರಾವತಿ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಎನ್.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಕರಿಗೆ ಮತ್ತು ಮಕ್ಕಳಿಗೆ ಮುಂದಿನ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಪ್ರಮುಖರಾದ ಡಾ. ಪರಮೇಶ್ವರ್, ಸುನೀತಾದೇವಿ, ಡಾ. ರಾಧಿಕಾದೇವಿ, ಪ್ರದೀಪ್ ನವೀನ್ ಇದ್ದರು.