ಪದವಿಯಲ್ಲಿ 3ನೇ ವರ್ಷ ಇಂಟರ್ನ್‌ ಶಿಫ್‌ ಜಾರಿಗೆ ಚಿಂತನೆ

| Published : Mar 04 2024, 01:21 AM IST

ಸಾರಾಂಶ

ಎಇಡಿಪಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಇಂಟರ್ನ್‌ ಶಿಪ್‌ ನೀಡಿ, ಮಾಸಿಕವಾಗಿ 11 ಸಾವಿರದಿಂದ 17 ಸಾವಿರ ರು. ತರಬೇತಿ ಭತ್ಯೆ ನೀಡಲಾಗುತ್ತದೆ ಎಂದು ಹೇಳಿದರು.ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹಲವಾರು ಬದಲಾವಣೆ ತರಲು ನಮ್ಮ ಸರ್ಕಾರ ಯೋಜನೆ ರೂಪಿಸಿದೆ. ಅದರಂತೆ ಯುಎಸ್‌‍ಎಯ ರಮೇಶ್‌ ವಾಗ್ವನಿ ಫೌಂಡೇಷನ್‌ ಜೊತೆ 3 ಬಿಲಿಯನ್‌ ಡಾಲರ್‌ಮೊತ್ತದ ಯೋಜನೆಗೆ ಒಡಂಬಡಿಕೆಗೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಎಲ್ಲಾ ವಿಶ್ವವಿದ್ಯಾನಿಲಯಗಳ ಭೋದಕರು ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿಪರತೆ ಬಗ್ಗೆ ತರಬೇತಿ ನೀಡಲಾಗುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ಮೂರು ವರ್ಷದ ಪದವಿ ಕೋರ್ಸ್‌ ಗಳಲ್ಲಿ ಕೊನೆಯ ವರ್ಷ ಕೌಶಲಾಧಾರಿತ ವಿಷಯಗಳ ತರಬೇತಿ ನೀಡಲು ವಿದ್ಯಾರ್ಥಿಗಳಿಗೆ ಇಂಟರ್ನ್‌ ಶಿಫ್‌ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ತಿಳಿಸಿದರು.

ಕ್ರಾಫರ್ಡ್‌ ಭವನದಲ್ಲಿ ಭಾನುವಾರ ನಡೆದ ಮೈಸೂರು ವಿವಿ 104ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಕೇಂದ್ರ ಮತ್ತು ರಾಜ್ಯಗಳ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಇರುವ ಐಎಎಸ್‌‍ ಅಧಿಕಾರಿಗಳ ತಂಡ ಸ್ಥಾಪನೆ ಮಾಡಿಕೊಂಡಿರುವ ಕ್ರಿಸ್‌ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

ಎಇಡಿಪಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಇಂಟರ್ನ್‌ ಶಿಪ್‌ ನೀಡಿ, ಮಾಸಿಕವಾಗಿ 11 ಸಾವಿರದಿಂದ 17 ಸಾವಿರ ರು. ತರಬೇತಿ ಭತ್ಯೆ ನೀಡಲಾಗುತ್ತದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹಲವಾರು ಬದಲಾವಣೆ ತರಲು ನಮ್ಮ ಸರ್ಕಾರ ಯೋಜನೆ ರೂಪಿಸಿದೆ. ಅದರಂತೆ ಯುಎಸ್‌‍ಎಯ ರಮೇಶ್‌ ವಾಗ್ವನಿ ಫೌಂಡೇಷನ್‌ ಜೊತೆ 3 ಬಿಲಿಯನ್‌ ಡಾಲರ್‌ಮೊತ್ತದ ಯೋಜನೆಗೆ ಒಡಂಬಡಿಕೆಗೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಎಲ್ಲಾ ವಿಶ್ವವಿದ್ಯಾನಿಲಯಗಳ ಭೋದಕರು ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿಪರತೆ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದರು.

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆಯಲ್ಲಿ ಪಾಂಡಿತ್ಯ ಪಡೆದುಕೊಳ್ಳಲು ತರಬೇತಿ ಕೊಡಲಾಗುತ್ತದೆ. ಮೊದಲಿಗೆ ಬೆಂಗಳೂರಿನ ಆರ್‌.ಸಿ ಕಾಲೇಜಿನಲ್ಲಿ ಪ್ರಾರಂಭಿಸಲಾಗುತ್ತದೆ. ಬಳಿಕ ಮೈಸೂರು, ಮಂಗಳೂರು ವಿವಿಗೂ ವಿಸ್ತರಣೆ ಮಾಡಲಾಗುತ್ತದೆ. ಇಲ್ಲಿ ಸಾಧಕ- ಬಾಧಕಗಳನ್ನು ನೋಡಿ ಮುಂದೆ ಗುಲ್ಬರ್ಗ, ಧಾರವಾಡ, ಶಿವಮೊಗ್ಗಕ್ಕೂ ವಿಸ್ತರಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.