ಕಟ್ಟಕಡೆಯ ವ್ಯಕ್ತಿಯನ್ನು ಮೇಲೆತ್ತಲು ಶ್ರಮಿಸಿ

| Published : Aug 05 2024, 12:34 AM IST

ಸಾರಾಂಶ

ಜಿಲ್ಲಾಮಟ್ಟದಲ್ಲಿ ಬಸವ ಭವನ, ತಾಲೂಕು ಮಟ್ಟದಲ್ಲಿ ಬಸವ ಭವನಗಳನ್ನು ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ರಾಜ್ಯದಲ್ಲಿ ಅಭಿವೃದ್ಧಿಯತ್ತ ಮುನ್ನಡೆಯಬೇಕು. ವಿದ್ಯೆ ಮತ್ತು ಅನ್ನ ದಾಸೋಹ ನಮ್ಮ ಸಮಾಜದ ಒಂದು ಕಾಯಕ. ಇದರ ಮೂಲಕ ಸಮಾಜದ ಉಳ್ಳವರು ಕಟ್ಟ ಕಡೆಯ ವ್ಯಕ್ತಿಗಳನ್ನು ಮೇಲೆತ್ತಲು ಶ್ರಮಿಸಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹಿನಕಲ್ ಬಸವರಾಜ್ ತಿಳಿಸಿದ್ದಾರೆ.

ತಾಲೂಕಿನ ಬೆಟ್ಟದಪುರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲಾಮಟ್ಟದಲ್ಲಿ ಬಸವ ಭವನ, ತಾಲೂಕು ಮಟ್ಟದಲ್ಲಿ ಬಸವ ಭವನಗಳನ್ನು ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ ಮಾತನಾಡಿ, ಸಮಾಜವನ್ನು ಮೇಲೆತ್ತಲು ಪ್ರತಿ ಗ್ರಾಮದಲ್ಲಿ ಪ್ರತಿ ತಾಲೂಕು ಮಟ್ಟದಲ್ಲಿ ಬಸವ ಬಳಗ ಸೌಹಾರ್ದ ಬ್ಯಾಂಕ್ ತೆರೆದು ಅದರಿಂದ ವಿದ್ಯಾಭ್ಯಾಸ, ವ್ಯವಸಾಯ, ವಾಣಿಜ್ಯ ವ್ಯವಹಾರಕ್ಕೆ ಸಾಲ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಿದರೆ ಸಮಾಜ ಒಂದು ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯ ಎಂದು ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಹಿಟ್ನಲ್ಲಿ ಪರಮೇಶ್ ಮಾತನಾಡಿ, ಹಲವು ವರ್ಷಗಳ ಹಿಂದೆ ಇದ್ದಂತಹ ರಾಜಕಾರಣಿಗಳ ಬೇಜವಾಬ್ದಾರಿ ತನದಿಂದ ನಮ್ಮ ಸಮಾಜಕ್ಕೆ ತಾಲೂಕು ಮಟ್ಟಗಳಲ್ಲಿ ನಿವೇಶನಗಳಾಗಲಿ ಯಾವುದೇ ಸಮುದಾಯ ಭವನ ಕಟ್ಟಲು ಮುಂದಾಲೋಚನೆ ಮಾಡದೆ ಈಗಿನ ಸಮಾಜ ಪರಿತಪಿಸುವ ಹಂತಕ್ಕೆತಲುಪಿದೆ ಎಂದರು.

ಇನ್ನು ಮುಂದಿನ ದಿನಗಳಲ್ಲಿ ತಾಲೂಕು, ಜಿಲ್ಲಾ ಮಟ್ಟದ ಸಮಾಜದ ಬಂಧುಗಳು ಒಗ್ಗಟ್ಟಿನಿಂದ ಅದಕ್ಕೆ ಬೇಕಾದ ಸೌಲತ್ತು ನೀಡಿದರೆ ಸಮಾಜಕ್ಕೆ ಒಂದು ಗೌರವ ಸಿಗುತ್ತದೆ ಎಂದರು.

ಹುಣಸೂರು ತಾಲೂಕು ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಬಸವಣ್ಣನವರ ಆದರ್ಶ ಮತ್ತು ಸಮಾಜಕ್ಕೆ ಸಂಸ್ಕಾರ ಮತ್ತು ಒಗ್ಗಟ್ಟನ್ನು ಕಲಿತರೆ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಬೆಟ್ಟದಪುರ ಅಧ್ಯಕ್ಷ ಶಿವದೇವ, ನಮ್ಮ ನಮ್ಮಲ್ಲಿ ಹಲವಾರು ಸಂಘಗಳು ಉದ್ಭವವಾಗುತ್ತಿದ್ದು, ಅವುಗಳು ಸಮಾಜದ ಏಳಿಗೆಗೆ ದುಡಿಯಬೇಕೆ ಹೊರತು ಕೇವಲ ಸಂಘಗಳ ಹಿತ ಶಕ್ತಿಗೆ ದುಡಿಯುವುದರಿಂದ ಸಮಾಜಕ್ಕೆ ಹುಚ್ಚಿನ ಅನುಕೂಲವಾಗುವುದಿಲ್ಲ ಎಂದರು.

ಹಿನಕಲ್‌ ಬಸವರಾಜು ಮತ್ತು ನಿರ್ದೇಶಕರನ್ನು ಅಭಿನಂದಿಸಲಾಯಿತು. ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ದಿಂಡಗಾಡ್ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಿರಿಯಾಪಟ್ಟಣ ಅಧ್ಯಕ್ಷ ಹಿಟ್ನಳ್ಳಿ ಪರಮೇಶ್, ಸೋಮಶೇಖರ್, ವಿರಾಜಪೇಟೆ ಅಧ್ಯಕ್ಷ ರಾಜು, ಅರಕಲಗೂಡು ತಾಲೂಕು ಅಧ್ಯಕ್ಷ ಸುರೇಶ್, ತಾಲೂಕಿನ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ಅಭಿನಂದಿಸಲಾಯಿತು.