ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಸಮನ್ವಯದೊಂದಿಗೆ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಭೂಮಿ ಮಂಜೂರಾತಿ ಮಾಡದೆ ಸಬೂಬು ಹೇಳುತ್ತಿದೆ. ಬರಿ ಮಾತಿನಲ್ಲಿ ಜಮೀನು ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ನಿಯಮಾನುಸಾರ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಅನುಸರಿಸಿ ಅಗತ್ಯ ಭೂಮಿ ನೀಡಲು ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸರ್ಕಾರ ಬಿಡುತ್ತಿಲ್ಲ. ಕೈಗಾರಿಕೆಗಳ ಸ್ಥಾನೆಗೆ ಜಮೀನು ನೀಡಲು ವಿಳಂಬ ಮಾಡುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ಆರೋಪಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿ, 3-4 ಕೈಗಾರಿಕೆಗಳನ್ನು ಮಂಡ್ಯ ಜಿಲ್ಲೆಗೆ ತರಲು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಆದರೆ, ಜಿಲ್ಲೆಗೆ ಕಾರ್ಖಾನೆಗಳು ಬಂದು ಬಿಟ್ಟರೆ ಅವರಿಗೆ ಹೆಸರು ಬರುತ್ತೆ ಎಂಬ ಒಂದೇ ಕಾರಣಕ್ಕಾಗಿ ಜಮೀನು ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಸಮನ್ವಯದೊಂದಿಗೆ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಭೂಮಿ ಮಂಜೂರಾತಿ ಮಾಡದೆ ಸಬೂಬು ಹೇಳುತ್ತಿದೆ. ಬರಿ ಮಾತಿನಲ್ಲಿ ಜಮೀನು ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ನಿಯಮಾನುಸಾರ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಅನುಸರಿಸಿ ಅಗತ್ಯ ಭೂಮಿ ನೀಡಲು ವಿಫಲವಾಗಿದೆ. ಜಿಲ್ಲೆಯ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನುದಾನದ ಬಗ್ಗೆ ಅಸಮಾಧಾನ:

ವಿರೋಧ ಪಕ್ಷದ ಶಾಸಕನಾದ ನನಗೆ ಸರ್ಕಾರ ತಾಲೂಕಿನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡದೆ ವಂಚನೆ ಮಾಡುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಾಕಷ್ಟು ಅನುದಾನ ನೀಡಿ ಕೆ.ಆರ್‌ಪೇಟೆ ತಾಲೂಕನ್ನು ಮಲತಾಯಿಯಂತೆ ಕಡೆಗಣಿಸಲಾಗುತ್ತಿದೆ. ಇದರ ಹಿಂದಿನ ಉದ್ದೇಶ ನಾನೊಬ್ಬ ಜೆಡಿಎಸ್ ಶಾಸಕ ಎಂಬ ಏಕೈಕ ಕಾರಣ ಎಂದು ಕಿಡಿಕಾರಿದರು.

ಅನುದಾನ ತಾರತಮ್ಯದ ಬಗ್ಗೆ ಮುಖ್ಯಮಂತ್ರಿಯವರಿಗೂ ಸಂಬಂಧಿಸಿದಂತೆ ಸಚಿವರಿಗೂ ಗಮನಕ್ಕೆ ತಂದಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಹೀಗಿದ್ದರೂ ಲಭ್ಯವಿರುವ ಅನುದಾನವನ್ನು ಬಳಸಿ ತಾಲೂಕಿನ ಎಲ್ಲಾ ಗ್ರಾಮಗಳಿಗೂ 10-50 ಲಕ್ಷಗಳವರೆಗೆ ಅನುದಾನ ಹಂಚಿಕೆಮಾಡಿ ಸರಿದೂಗಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ನಾಳೆ ಎಚ್ಡಿಕೆ ವಿ.ಸಿ.ಫಾರ್ಮ್‌ಗೆ:

ಮಾ.14 ರಂದು ಮಂಡ್ಯದ ವಿಸಿ ಫಾರಂ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸುವ ಭೂಮಿಪೂಜೆ ಹಾಗೂ ವಿಕಲಚೇತನರಿಗೆ ಎಲೆಕ್ಟ್ರಿಕ್ ಸ್ಕೂಟರ್ ವಿತರಿಸುವ ಬೃಹತ್ ಕಾರ್ಯಕ್ರಮಕ್ಕೆ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದು, ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಈ ವೇಳೆ ತಾಪಂ ಮಾಜಿ ಸದಸ್ಯ ಹುಲ್ಲೇಗೌಡ, ಜೆಡಿಎಸ್ ಕಾನೂನು ಘಟಕದ ಕುರುಬಳ್ಳಿ ನಾಗೇಶ್, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಮೀಸೆ ಮಹಾದೇವೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಲ್ಲೇನಹಳ್ಳಿ ರಾಮಚಂದ್ರ, ನಾಗರಾಜೇಗೌಡ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಟಿಎಪಿಸಿಎಂಎಸ್ ನಿರ್ದೇಶಕರಾದ ಮಂಜುನಾಥ, ದಿಲೀಪ್ ಕುಮಾರ, ಪುರಸಭೆ ಮಾಜಿ ಸದಸ್ಯರಾದ ಹೇಮಂತ್‌ಕುಮಾರ್, ಗಿರೀಶ್, ಮುಖಂಡರಾದ ತೋಟಪ್ಪಶೆಟ್ಟಿ ವಕೀಲ ಧನಂಜಯಕುಮಾರ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸುಜೇಂದ್ರಕುಮಾರ್, ಕೊರಟಿಕೆರೆ ದಿನೇಶ್, ಬೇಲದಕೆರೆ ನಂಜಪ್ಪ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.