8ಕ್ಕೆ ಹಿಂದು ಜಾಗೃತಿ ಸಮಾವೇಶ

| Published : Dec 01 2024, 01:30 AM IST

ಸಾರಾಂಶ

ಈ ತಿಂಗಳ 8ರಂದು ನಗರದ ಸಾಯಿ ಸ್ಕೂಲ್‌ ಮೈದಾನದಲ್ಲಿ ಹಿಂದು ರಾಷ್ಟ್ರೀಯ ಜಾಗರಣಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಆಧರಿಸಿ ಭಾರತವನ್ನು ಹಿಂದು ರಾಷ್ಟ್ರ ಎಂದು ಘೋಷಿಸಬೇಕೆಂಬ ಸಂತರ ಹಾಗೂ ಸನಾತನಿಗಳ ಬೇಡಿಕೆ ಮುಂದಿಟ್ಟುಕೊಂಡು ಬೃಹತ್ ಹಿಂದು ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರಾದ ಶಂಕರ ಪಾಟೀಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಈ ತಿಂಗಳ 8ರಂದು ನಗರದ ಸಾಯಿ ಸ್ಕೂಲ್‌ ಮೈದಾನದಲ್ಲಿ ಹಿಂದು ರಾಷ್ಟ್ರೀಯ ಜಾಗರಣಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಆಧರಿಸಿ ಭಾರತವನ್ನು ಹಿಂದು ರಾಷ್ಟ್ರ ಎಂದು ಘೋಷಿಸಬೇಕೆಂಬ ಸಂತರ ಹಾಗೂ ಸನಾತನಿಗಳ ಬೇಡಿಕೆ ಮುಂದಿಟ್ಟುಕೊಂಡು ಬೃಹತ್ ಹಿಂದು ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರಾದ ಶಂಕರ ಪಾಟೀಲ್‌ ಹೇಳಿದರು.ಅವರು ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಸನಾತನ ಹಿಂದು ಬೋರ್ಡ್‌ ಸ್ಥಾಪಿಸಬೇಕು, ನಮ್ಮ ದೇವಸ್ಥಾನದ ಖಜಾನೆ ನಮ್ಮ ಹಕ್ಕು ಯೋಜನೆ ಅಡಿ ಹಿಂದು ದೇವಾಲಯಗಳಿಂದ ಬರುವ ಆದಾಯ ಕೇವಲ ಹಿಂದು ಧರ್ಮದ ಕಾರ್ಯಗಳಿಗೆ ಮಾತ್ರ ಸೀಮಿತವಾಗಬೇಕು, ಗೋ ಹತ್ಯೆ ನಿಷೇಧ ಕಾನೂನು ಕಠಿಣ ರೂಪದಲ್ಲಿ ಜಾರಿಯಾಗಬೇಕು. ದೇವಸ್ಥಾನಗಳು, ಮಠ, ಮಂದಿರಗಳು ಸೇರಿದಂತೆ ಹಿಂದುಗಳಿಗೆ ಸೇರಿದ ಎಲ್ಲ ಆಸ್ತಿ ಪಾಸ್ತಿಗಳನ್ನು ವಕ್ಫ್‌ ಬೋರ್ಡ್‌ನಿಂದ ರಕ್ಷಿಸಬೇಕು, ವಕ್ಫ್ ಬೋರ್ಡ್ ಸಂಪೂರ್ಣ ರದ್ದಾಗಬೇಕು, ಏಕ ನಾಗರಿಕ ಸಂಹಿತೆ ಜಾರಿಯಾಗಬೇಕು, ಲವ್‌ ಜಿಹಾದ್‌ ಹಾಗೂ ಮತಾಂತರ ನಿಷೇಧ ಕಾಯ್ದೆ ಸಂಸತ್ತಿನಲ್ಲಿ ಮಂಡಿಸಬೇಕು, ಹಿಂದುಗಳ ಮೇಲೆ ನಿತ್ಯ ನಿರಂತರ ನಡೆಯುತ್ತಿರುವ ದೌರ್ಜನ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ಭಾರತವನ್ನು ಒಂದು ಹಿಂದು ರಾಷ್ಟ್ರವನ್ನಾಗಿ ಘೋಷಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಈ ಬೃಹತ್‌ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಪಾಟೀಲ್‌ ವಿವರಿಸಿದರು.ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಸ್ವರಸಿಂಗ್‌ ಠಾಕೂರ್‌ ಮಾತನಾಡಿ, ಈ ತಿಂಗಳ 8ರಂದು ನಡೆಯಲಿರುವ ಈ ಬೃಹತ್‌ ಕಾರ್ಯಕ್ರಮದಲ್ಲಿ ಹೈದ್ರಾಬಾದ್‌ ಲೋಕಸಭೆ ಚುನಾವಣೆಯಲ್ಲಿ ಒವೈಸಿ ಸಹೋದರಿಗೆ ಭಾರಿ ಪ್ರತಿಸ್ಪರ್ಧೆ ನೀಡಿದ್ದ ಮಾಧವಿ ಲತಾ, ಗುಜರಾತಿನ ಸೌರಾಷ್ಟ್ರದ ಕಾಜಲ್‌ ಹಿಂದುಸ್ತಾನಿ ಹಾಗೂ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ ಸೇರಿದಂತೆ ಇತರರು ಸಮಾವೇಶವನ್ನುದ್ದೇಶಿಸಿ ಮಾತನಾಡುವರು. ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್‌ ವಿಭಾಗೀಯ ಪ್ರಮುಖರಾದ ರಾಮಕೃಷ್ಣನ್‌ ಸಾಳೆ, ಬಸವರಾಜ ಸ್ವಾಮಿ ಹಾಗೂ ಸೋಮಶೇಖರ ಪಾಟೀಲ್‌ ಗಾದಗಿ ಮಾತನಾಡಿದರು. ನಾಗರಾಜ ನೇಳಗೆ, ಸ್ವಾಮಿದಾಸ ಕೆಂಪೆನೋರ್‌, ಅಮಿತ ಚಿಂಚೋಳೆ ಹಾಗೂ ಇತರರು ಸುದ್ದಿಗೋಷ್ಟಿಯಲ್ಲಿದ್ದರು.