ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಹಿಂದೂ ಧರ್ಮದ ಪ್ರತಿಯೊಂದು ಮಂತ್ರದ ಸಾರ ಸರ್ವರ ಒಳಿತನ್ನು ಸಾಧಿಸುವುದೇ ಆಗಿದೆ ಎಂದು ಉಪನ್ಯಾಸಕ ಪಟ್ಟಡ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.ಅವರು ಮದೆ ಗ್ರಾಮದ ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಹಿಂದೂ ಧರ್ಮ ಪ್ರತಿಯೊಬ್ಬರ ಭಾವನೆಗಳಿಗೆ ಬೆಲೆ ನೀಡಿ, ಅವರಿಗಿಷ್ಟ ಬಂದ ರೀತಿಯಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲು ಅವಕಾಶ ನೀಡಿದೆ, ಆದುದರಿಂದಲೇ ಇಲ್ಲಿ ಭಗವಂತನನ್ನು ಹಲವು ರೂಪದಲ್ಲಿ ಹಾಗೂ ಹಲವು ವಿಧಾನಗಳಲ್ಲಿ ಪೂಜಿಸುವ ಅವಕಾಶ ದೊರೆತಿದೆ ಎಂದರು.
ಪ್ರಸ್ತುತ ಜಗತ್ತಿನ ಸಮಸ್ಯೆಗಳನ್ನು ಬಗೆಹರಿಸಲು ಹಿಂದೂ ಸಂಸ್ಕೃತಿಗೆ ಮಾತ್ರ ಸಾಧ್ಯವಿದೆ, ಏಕೆಂದರೆ ಹಿಂದೂ ಸಂಸ್ಕೃತಿ ಜಗತ್ತಿನ ಸರ್ವರ ಕಲ್ಯಾಣವನ್ನು ಬಯಸುತ್ತದೆ, ವಸುದೈವ ಕುಟುಂಬಕಂ, ಅಂದರೆ ಇಡೀ ಜಗತ್ತು ಒಂದೇ ಕುಟುಂಬಕ್ಕೆ ಸೇರಿದ್ದು ಎಂಬ ಭಾವನೆಯನ್ನು ಹೊಂದಿರುವ ಹಿಂದೂ ಸಂಸ್ಕೃತಿ ಅತ್ಯಂತ ಶ್ರೇಷ್ಠ ಸಂಸ್ಕೃತಿ,. ಹಿಂದೂ ದೇವಾಲಯಗಳು ಹಾಗೂ ಮಠ ಮಂದಿರಗಳು ನಿತ್ಯ ನಿರಂತರವಾಗಿ ಅನ್ನದಾಸೋಹ, ಅಕ್ಷರ ದಾಸೋಹಗಳ ಮೂಲಕ ನಮ್ಮ ಸಮಾಜಕ್ಕೆ ಅನನ್ಯ ಕೊಡುಗೆ ನೀಡುತ್ತಾ ಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತದ ಸಮಾಜದಲ್ಲಿ ಕೆಲವು ಸಮಸ್ಯೆಗಳಿದ್ದದ್ದು ನಿಜ. ಆದರೆ ಅವುಗಳು ಸಾಮಾಜಿಕ ಸಮಸ್ಯೆಗಳು ಹೊರತು ಧಾರ್ಮಿಕ ಸಮಸ್ಯೆಗಳಲ್ಲ, ಆದುದರಿಂದಲೇ ಹಲವಾರು ಸಮಾಜ ಸುಧಾರಕರು ಸಮಾಜವನ್ನು ಸುಧಾರಿಸಿ, ಭಾರತೀಯ ಸಮಾಜಕ್ಕೆ ಮತ್ತಷ್ಟು ಹೊಳಪನ್ನು ನೀಡಿದ್ದಾರೆ. ನಮ್ಮ ದೇವಾಲಯಗಳು ಸಂಸ್ಕೃತಿ, ಕಲೆ, ಸಂಗೀತ ನೃತ್ಯಗಳಿಗೆ ಪ್ರಾಶಾಸ್ತ್ಯ ನೀಡಿ ಭಾರತದ ಸಾಂಸ್ಕೃತಿಕ ಮೌಲ್ಯವನ್ನು ಎತ್ತಿ ಹಿಡಿದಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಸ್ವಾಮಿ ವಿವೇಕಾನಂದರು ಇಡೀ ಜಗತ್ತು ಬೆಳಕಿಗಾಗಿ ಕಾಯುತ್ತಿದೆ ಮತ್ತು ಆ ಬೆಳಕನ್ನು ನೀಡಲು ಭಾರತ ಮಾತ್ರ ಶಕ್ತವಾಗಿದೆ ಎಂದಿದ್ದರು. ಭಾರತದ ನವ ಪೀಳಿಗೆ ಹಿಂದೂ ಸಂಸ್ಕೃತಿಯ ಒಳ್ಳೆಯ ಅಂಶಗಳನ್ನು ಮೈಗೂಡಿಸಿಕೊಂಡು ಸಂಸ್ಕಾರವನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಮತ್ತು ದೇಶಕ್ಕೆ ಯೋಗ್ಯ ಪ್ರಜೆಗಳಾಗಿ ವಿಶ್ವಕ್ಕೆ ಮಾದರಿಯಾಗಿ ಬೆಳೆಯಬೇಕೆಂದು ಅವರು ಕರೆ ನೀಡಿದರು. ಇತ್ತೀಚೆಗೆ ಹಲವಾರು ಹಳ್ಳಿಹಳ್ಳಿಗಳಲ್ಲಿ ಮಹಿಳೆಯರು ಪುರುಷರೆನ್ನದೆ ಭಜನಾ ತಂಡಗಳನ್ನು ಕಟ್ಟಿಕೊಳ್ಳುವ ಮೂಲಕ, ಮಕ್ಕಳಲ್ಲಿ ಸಂಸ್ಕಾರದ ಬೀಜವನ್ನು ಬಿತ್ತುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಹಿಂದೂ ಧರ್ಮವೆನ್ನುವುದು ಕೇವಲ ಧರ್ಮವಲ್ಲ ಅದೊಂದು ಜೀವನ ಸಂಸ್ಕೃತಿಯಾಗಿದೆ, ಪ್ರತಿಯೊಂದು ಜೀವಿಯಲ್ಲೂ ದೇವರನ್ನು ಕಾಣುವ ಈ ಸಂಸ್ಕೃತಿ ಪ್ರಕೃತಿಯನ್ನೇ ತಾಯಿಯ ರೂಪದಲ್ಲಿ ಅಂದರೆ ದೇವಿಯ ರೂಪದಲ್ಲಿ ಪೂಜಿಸುವ ಪದ್ಧತಿಯನ್ನು ಅನುಸರಿಸುತ್ತಿದೆ, ಇದು ಭಾರತೀಯ ಸಂಸ್ಕೃತಿಯೂ ಆಗಿದ್ದು, ಇಂದು ವಿಶ್ವದ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಆದುದರಿಂದ ಈ ಸಂಸ್ಕೃತಿಯಲ್ಲಿ ಹುಟ್ಟಿದ್ದಕ್ಕೆ ನಾವು ಹೆಮ್ಮೆ ಪಟ್ಟುಕೊಂಡು ಭಾರತವನ್ನು ವಿಶ್ವ ಗುರುವಾಗಿಸುವತ್ತ ಮುನ್ನಡೆಸಬೇಕೆಂದು ನೆರೆದ ಭಕ್ತಾದಿಗಳಿಗೆ ಮನವಿ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದೇನಾಡು ಕಾಫಿ ಲಿಂಕ್ಸ್ ಉದ್ಯಮಿ ಬಿ. ಸಿ. ಕೀರ್ತಿ ಕುಮಾರ್ ವಹಿಸಿದ್ದ ವೇದಿಕೆಯಲ್ಲಿ ಜೋಡು ಪಾಲ ಗೌರಿ ಗಣೇಶ ಸಮಿತಿ ಅಧ್ಯಕ್ಷ ದೀಕ್ಷಿತ್, 2ನೇ ಮೊಣ್ಣಂಗೇರಿ ಯ ಬಿ. ಎಂ. ಬಾಬು, ಬೆಂಗಳೂರಿನ ಲೋಕನಾಥ್ ಮುಳ್ಯ, ಜೋಡುಪಾಲದ ಜಸ್ಮಿತಾರಾಜು, ಭವ್ಯ ಸಣ್ಣಮನೆ ಉಪಸ್ಥಿತರಿದ್ದರು.ಚಾಮುಂಡೇಶ್ವರಿ ದೇವಸ್ಥಾನ ಮಂಡಳಿಯ ಉಪಾಧ್ಯಕ್ಷ ಕೆ. ಆರ್. ರಾಜು ಸ್ವಾಗತಿಸಿ ಧರ್ಮಸ್ಥಳ ಜನಜಾಗೃತಿ ಸಮಿತಿ ಉಪಾಧ್ಯಕ್ಷ ಆಗೋಳಿಕಜೆ ಧನಂಜಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.