ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ

| Published : Oct 02 2024, 01:02 AM IST

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕನ್ನಡವೇ ಮಾತೃಭಾಷೆ. ಹೀಗೆ ಉರ್ದು ಕಡ್ಡಾಯ ಮಾಡಿ ಕನ್ನಡಿಗರನ್ನು ಅವಮಾನ ಮಾಡುತ್ತಿರುವುದು ಕಂಡುಬರುತ್ತಿದೆ ಎಂದು ಹಿಂದೂ ಜಾಗೃತಿ ಸಮಿತಿ ಸದಸ್ಯರು ಆರೋಪಿಸಿದರು.

ಹಳಿಯಾಳ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ಮಾಡಿರುವುದನ್ನು ರದ್ದುಗೊಳಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.ಮಂಗಳವಾರ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ಹಾಗೂ ಇತರೆ ಸಂಘಟನೆಗಳ ನಿಯೋಗವು ತಾಲೂಕಾಡಳಿತ ಸೌಧಕ್ಕೆ ತೆರಳಿ ರಾಜ್ಯ ಸರ್ಕಾರಕ್ಕೆ ಬರೆದ ಮನವಿಯನ್ನು ಶಿರಸ್ತೇದಾರ ಹನುಮಂತ ಪರೋಡಕರ ಅವರಿಗೆ ಸಲ್ಲಿಸಿದರು.ಅಂಗನವಾಡಿ ಕಾರ್ಯಕರ್ತೆಯರ ಅಥವಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಉರ್ದು ಭಾಷೆಯನ್ನು ಆಯ್ಕೆ ಮಾಡದಿದ್ದರೆ ಅರ್ಜಿಯ ಮುಂದಿನ ಪ್ರಕ್ರಿಯೆಯು ಮಾಡಲು ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರ ಇಂತಹ ನಿಯಮಗಳನ್ನು ವಿಧಿಸಿ ಹಿಂದೂಗಳಿಗೆ ಮತ್ತು ಕ್ರೈಸ್ತರಿಗೆ ಅನ್ಯಾಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕನ್ನಡವೇ ಮಾತೃಭಾಷೆ. ಹೀಗೆ ಉರ್ದು ಕಡ್ಡಾಯ ಮಾಡಿ ಕನ್ನಡಿಗರನ್ನು ಅವಮಾನ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಹುದ್ದೆಯನ್ನು ಪಡೆಯಲು ಉರ್ದು ಭಾಷೆ ಕಲಿಯುವುದನ್ನು ಅನಿವಾರ್ಯ ಮಾಡಿ ಉರ್ದು ಭಾಷೆಯ ವೈಭವಿಕರಣವನ್ನು ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಆದೇಶವನ್ನು ಹಿಂಪಡೆದು ಸಂಬಂಧಿತ ಜಾಲತಾಣದಲ್ಲಿ ಅವಶ್ಯಕ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಚಿತ್ರನಟರು ನಟಿಸಿದ ದ ಲೆಜೆಂಡ್ ಆಫ್‌ ಮೌಲಾ ಜಟ್ಟ ಚಿತ್ರವನ್ನು ಭಾರತದಲ್ಲಿ ನಿಷೇಧಿಸಲು ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಯಿತು.ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ವಿಠೋಬಾ ಮಾಳ್ಸೆಕರ, ಪೂಜಾ ಧೂಳಿ, ಕಾಂಚನಾ ರಜಪೂತ, ಉಮೇಶ ದೇಶಪಾಂಡೆ, ಶಿವಾನಂದ ಶೆಟ್ಟರ, ಬಸವರಾಜ ಬೆಂಡಿಗೇರಿಮಠ, ಸಂತೋಷ ಘಟಕಾಂಬ್ಳೆ, ರಾಘವೇಂದ್ರ ಚಲವಾದಿ, ಅಪ್ಪಾರಾವ್ ಪೂಜಾರಿ, ಸುರೇಶ ಕೋಕಿತರಕರ, ವಿನೋದ ಘಿಂಡೆ, ಮಂಜುನಾಥ ಮೊರೆ, ಸುಧಾ ಶೆಟ್ಟಿ, ನಿತಿನ ಡಾಂಗೆ, ಗಜಾನನ ಪಾಲಕರ್ ಇತರರು ಇದ್ದರು.

ಒಪಿಎಸ್ ಜಾರಿಗೆ ರಾಜ್ಯ ಸರ್ಕಾರಕ್ಕೆ ಮನವಿ

ಭಟ್ಕಳ: ಎನ್‌ಪಿಎಸ್ ರದ್ದುಡಿಸಿ ಒಪಿಎಸ್ ಜಾರಿ ಮಾಡುವಂತೆ ಆಗ್ರಹಿಸಿ ಇಲ್ಲಿನ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ ರಾಜ್ಯ ಸರ್ಕಾರ ಈ ಹಿಂದೆ ನೀಡಿದ ಭರವಸಯಂತೆ ಎನ್‌ಪಿಎಸ್ ನೌಕರರಿಗೆ ಒಪಿಎಸ್ ಜಾರಿ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಎನ್‌ಪಿಎಸ್ ನೌಕರರು ನೋ ಎನ್‌ಪಿಎಸ್ , ನೋ ಯುಪಿಎಸ್, ಒನ್ಲಿ ಒಪಿಎಸ್ ಎಂದು ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ಹಿಂಪಡೆಯಬೇಕು. ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ವ್ಯವಸ್ಥೆಯನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಯಿತು. ತಹಸೀಲ್ದಾರ್‌ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಪ್ರವೀಣಕುಮಾರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ಉತ್ತರಕನ್ನಡ ಜಿಲ್ಲಾಧ್ಯಕ್ಷ ಗಣೇಶ ಹೆಗಡೆ, ತಾಲೂಕು ಅಧ್ಯಕ್ಷ ಶೇಖರ ಪೂಜಾರಿ, ಜಿಪಿಟಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹೇಶ ನಾಯ್ಕ, ಕಾರ್ಯದರ್ಶಿ ವಿಜಯ ನೇರ್ವೆಕರ್, ಸರ್ವೇ ಇಲಾಖೆಯ ವಾಸುದೇವ ಮೊಗೇರ ಹಾಗೂ ವಿವಿಧ ಇಲಾಖೆಗಳ ಎನ್‌ಪಿಎಸ್ ನೌಕರರು ಇದ್ದರು.