ಸಾರಾಂಶ
ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಎರಡನೇ ವರ್ಷದ ಹಿಂದೂ ಮಹಾ ಗಣಪತಿ ಗಣೇಶೋತ್ಸವಕ್ಕೆ ಮಾಗಡಿಯಲ್ಲಿ ಅದ್ಧೂರಿ ತೆರೆ ಬಿದ್ದಿತು.
ಮಾಗಡಿ: ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಎರಡನೇ ವರ್ಷದ ಹಿಂದೂ ಮಹಾ ಗಣಪತಿ ಗಣೇಶೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿತು.
ಪಟ್ಟಣದ ಡೂಮ್‌ಲೈಟ್ ವೃತ್ತದಲ್ಲಿ ಕಳೆದ ಐದು ದಿನಗಳಿಂದಲೂ ಗಣಪತಿ ಪ್ರತಿಷ್ಠಾಪನೆ ಮಾಡಿ ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆಚರಿಸಿ ಐದನೇ ದಿನ ವಿಸರ್ಜನೆ ಮಾಡಲಾಯಿತು. 12 ಅಡಿ ಎತ್ತರದ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್‌ನಲ್ಲಿ ಕೂರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರಮ್ಮನ ಕೆರೆಯಲ್ಲಿ ವಿಸರ್ಜಿಸಲಾಯಿತು.ಶೋಭಾಯಾತ್ರೆಗೆ ಚಾಲನೆ:
ಪಟ್ಟಣದ ಡೂಮ್ ಲೈಟ್ ವೃತ್ತದಿಂದ ಬೃಹತ್ ಶೋಭಾಯಾತ್ರೆಗೆ ಮಂಗಳೂರಿನ ಪ್ರಸಿದ್ಧ ತಂಡದಿಂದ ತ್ರಿಶೂಲ್ ನಾಸಿಕ್ ಡೋಲು, ಸುಪ್ರಸಿದ್ಧ ತಮಟೆ, ಡಿಜೆ ಮ್ಯೂಸಿಕ್‌ಗೆ ಭಕ್ತರು ಕುಣಿದು ಕುಪ್ಪಳಿಸಿದರು.ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಮರು:
ಹಿಂದೂ ಮಹಾಗಣಪತಿ ಶೋಭಾಯಾತ್ರೆ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ನೀರಿನ ಬಾಟಲ್ ವಿತರಿಸಿದರು. ಮಸೀದಿ ಮುಂದೆ ಗಣೇಶನ ಭಕ್ತರು ಡಿಜೆ ನಿಲ್ಲಿಸಿ ಮೆರವಣಿಗೆ ನಡೆಸಿದರು.ಶಾಸಕ ಬಾಲಕೃಷ್ಣ ಪಾಲ್ಗೊಂಡು ಮಾತನಾಡಿ, ಮಳೆಗಾಲದಲ್ಲಿ ಗಣೇಶ ಹಬ್ಬ ಆಚರಿಸುತ್ತೇವೆ. ತಾಲೂಕಿನ ಕೆರೆ-ಕಟ್ಟೆಗಳು ತುಂಬಿ ಸಮೃದ್ಧ ಬೆಳೆಯಾಗಿ ನಾಡು ಸುಭಿಕ್ಷವಾಗಿರುವಂತೆ ಗಣಪತಿ ಕೃಪೆ ತೋರಲಿ ಎಂದು ಹೇಳಿದರು.
ಮಾಜಿ ಶಾಸಕ ಮಂಜುನಾಥ್ ಮಾತನಾಡಿ, ಹಿಂದೂ ಮಹಾ ಗಣಪತಿ ಉತ್ಸವವನ್ನು ಎಲ್ಲರೂ ಸೇರಿ ಅದ್ಧೂರಿಯಾಗಿ ಆಚರಿಸುತ್ತಿದ್ದು ಮುಂದಿನ ಪೀಳಿಗೆಗೂ ಮುಂದುವರೆಸಬೇಕು. ಗಣಪತಿ ಕೃಪೆಯಿಂದ ಎಲ್ಲರಿಗೂ ಆರೋಗ್ಯ ಭಾಗ್ಯ ನೀಡಲಿ ಎಂದು ತಿಳಿಸಿದರು. ಗಣೇಶೋತ್ಸವ ಸಮಿತಿಯಿಂದ ಲಕ್ಕಿ ಡ್ರಾ ಮೂಲಕ ಮಾಗಡಿಯ ನ್ಯೂ ಗಣೇಶ್ ದರ್ಶನ್ ಮಾಲೀಕರಿಗೆ ದ್ವಿಚಕ್ರ ವಾಹನ ಮೊದಲ ಬಹುಮಾನ ಸಿಕ್ಕಿತು.