ಹಿಂದೂ ಸಮಾಜದ ಹಿತಚಿಂತಕ ರೆವರಂಡ್‌ ಉತ್ತಂಗಿ

| Published : Nov 01 2025, 02:45 AM IST

ಸಾರಾಂಶ

ರೆ. ಉತ್ತಂಗಿ ಚನ್ನಪ್ಪನವರು ಭಾರತೀಯ ಕ್ರೈಸ್ತರಾದರೂ ಲಿಂಗಾಯತ ಕ್ರೈಸ್ತರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿ, ಹಿಂದೂ ಸಮಾಜದ ಹಿತ ಚಿಂತಕರೆನಿಸಿಕೊಂಡರು.

ಧಾರವಾಡ:

ರೆವರಂಡ ಉತ್ತಂಗಿ ಚನ್ನಪ್ಪನವರು ಸರ್ವಜ್ಞನ ವಚನಗಳನ್ನು ಶಾಸ್ತ್ರೀಯ ಅಧ್ಯಯನ ಮಾಡಿ ಎಲ್ಲರ ಮನೆ-ಮನಗಳಿಗೆ ಮುಟ್ಟಿಸಿದರು ಎಂದು ಹುಬ್ಬಳ್ಳಿಯ ಶ್ರೀಗುರುಬಸವ ಟ್ರಸ್ಟ್ ಸಂಚಾಲಕ ಶಶಿಧರ ಕರವೀರಶೆಟ್ಟರ ತಿಳಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ರೆ. ಚನ್ನಪ್ಪ ಉತ್ತಂಗಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ‘ಉತ್ತಂಗಿ ಚೆನ್ನಪ್ಪನವರ ಬದುಕು ಮತ್ತು ಸಂದೇಶ’ ಕುರಿತು ಉಪನ್ಯಾಸ ನೀಡಿದರು.

ರೆ. ಉತ್ತಂಗಿ ಚನ್ನಪ್ಪನವರು ಭಾರತೀಯ ಕ್ರೈಸ್ತರಾದರೂ ಲಿಂಗಾಯತ ಕ್ರೈಸ್ತರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿ, ಹಿಂದೂ ಸಮಾಜದ ಹಿತ ಚಿಂತಕರೆನಿಸಿಕೊಂಡರು. ಅವರಿಗೆ ಯೇಸು ಕ್ರಿಸ್ತನ ಬಗ್ಗೆ ಅಪಾರ ಶ್ರದ್ಧೆ-ಭಕ್ತಿ ಇತ್ತು. ವೃತ್ತಿಯಿಂದ ಕ್ರೈಸ್ತ ಧರ್ಮದ ಪ್ರಚಾರಕರಾದರೂ ಪ್ರವೃತ್ತಿಯಿಂದ ಕನ್ನಡದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ ಕನ್ನಡದ ಕಟ್ಟಾಳು. ಚಿಕಿತ್ಸಕ ಬುದ್ಧಿಯ ಅವರು ಎಲ್ಲವನ್ನು ಒರೆಗೆ ಹಚ್ಚಿ ಸತ್ಯಾಸತ್ಯತೆ ಅರಿಯುತ್ತಿದ್ದರು ಎಂದರು.

ಗ್ರಂಥಾಲಯ ವಿಜ್ಞಾನಿ ಡಾ. ಎಸ್. ಆರ್. ಗುಂಜಾಳ ಮಾತನಾಡಿ, ರೆ. ಉತ್ತಂಗಿ ಅವರು ಲಿಂಗಾಯತ -ಕ್ರೈಸ್ತ ಧರ್ಮದ ಬಗ್ಗೆ ಮಹತ್ವದ ಕೃತಿ ರಚಿಸಿದ ಮಹಾನುಭಾವರು ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿಯ ಬಸವಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ ಮಾತನಾಡಿ, ಲಿಂಗಾಯತ ಧರ್ಮವನ್ನು ನಮ್ಮವರಿಗಿಂತ ಹೊರಗಿನವರೇ ಹೆಚ್ಚು ತಿಳಿದಿದ್ದಾರೆ. ಉತ್ತಂಗಿ ಚನ್ನಪ್ಪನವರು ಬಸವಣ್ಣವರ ಅಂತರಂಗದ ಭಕ್ತರು ಎಂದು ಹೇಳಿದರು.

ಈ ವೇಳೆ ಶಿವಾನಂದ ಬಾವಿಕಟ್ಟಿ, ಡಾ. ಧನವಂತ ಹಾಜವಗೋಳ, ಗುರು ಹಿರೇಮಠ, ವೀರಣ್ಣ ಒಡ್ಡೀನ, ಶಂಕರ ಕುಂಬಿ ಇದ್ದರು.