ಹಿಂದೂ ಯುವಕನಿಗೆ ಬಲವಂತದಿಂದ ನಮಾಜ್‌: ಆರೋಪ

| Published : Jul 16 2025, 12:45 AM IST

ಸಾರಾಂಶ

ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ ಹಿಂದೂ ಯುವಕನಿಗೆ ಬಲವಂತವಾಗಿ ನಮಾಜ್ ಮಾಡಿಸಲಾಗುತ್ತಿದೆ ಎಂದು ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಆರೋಪಿಸಿದರು.

ಗದಗ: ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ ಹಿಂದೂ ಯುವಕನಿಗೆ ಬಲವಂತವಾಗಿ ನಮಾಜ್ ಮಾಡಿಸಲಾಗುತ್ತಿದೆ ಎಂದು ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ವಿಶಾಲ್ ಗೋಕಾವಿ ದಿನಕ್ಕೆ ಐದು ಹೊತ್ತು ನಮಾಜ್ ಮಾಡಬೇಕು. ಮಾಡದಿದ್ದರೆ ನಿನ್ನ ಮೇಲೆ ಕೇಸ್ ದಾಖಲಿಸುವುದಾಗಿ ಕೈ ಹಿಡಿದ ಹೆಂಡತಿಯೇ ಹೆದರಿಸಿ ಮುಳಗುಂದ ನಾಕಾದ ಹತ್ತಿರದ ಮಸೀದಿಗೆ ಕರೆದುಕೊಂಡು ಹೋಗಿ ನಮಾಜ್ ಮಾಡಿಸುತ್ತಾಳೆ ಎಂದು ಕಿಡಿಕಾರಿದರು.

ಗೋಷ್ಠಿಯಲ್ಲಿದ್ದ ವಿಶಾಲ್ ಗೋಕಾವಿ ಎಂಬಾತ, ನಮಾಜ್ ಮಾಡುವ ದೃಶ್ಯವನ್ನು ಸೆರೆ ಹಿಡಿದು ತನ್ನ ಹೆಂಡತಿಯ ವ್ಯಾಟ್ಸಪ್ ಗೆ ಕಳುಹಿಸಬೇಕಿತ್ತು. ಈ ಕೆಲಸವನ್ನು ಹೆಂಡತಿಯ ಸೋದರ ಮಾವ ಮಾಡುತ್ತಿದ್ದ ಎಂದು ಅಳಲು ತೋಡಿಕೊಂಡ.

ಮದುವೆಯಾದ ತಕ್ಷಣ ತನಗೆ ತಿಳಿಯದಂತೆ ತನ್ನ ಹೆಸರನ್ನು ವಿರಾಜ್‌ಸಾಬ್‌ ಎಂದು ಬದಲಾಯಿಸಲಾಗಿದೆ. ಹುಡುಗಿಯ ಮನೆಯವರು ತನಗೆ ತಿಳಿಯದಂತೆ ಈ ಕೆಲಸವನ್ನು ಮಾಡಿದ್ದಾರೆ. ಅಲ್ಲದೇ ತನಗೆ ಮುಂಜಿವಿ ಶಾಸ್ತ್ರ ಸಹ ಮಾಡಿ ಮೋಸ ಮಾಡಿದ್ದಾರೆ ಎಂದು ವಿಶಾಲ್‌ ಅಲವತ್ತುಕೊಂಡ. ಆದರೆ, ಈ ಕುರಿತಂತೆ ಆತ ಪೊಲೀಸರಿಗೆ ದೂರು ನೀಡಿಲ್ಲವಂತೆ.

ಇನ್ನೊಂದು ಪ್ರಕರಣದಲ್ಲಿ ಹಿಂದೂ ಯುವಕನನ್ನು ಹಿಂದೂ ಸಂಪ್ರದಾಯದಂತೆ ಮುಸ್ಲಿಂ ಹುಡುಗಿಯ ಜೊತೆ ಮದುವೆ ಮಾಡಿಸಿ, ಅವರಿಗೆ ಜನಿಸಿದ ಮಕ್ಕಳಿಗೆ ಮುಸ್ಲಿಂ ಧರ್ಮದ ಹೆಸರು ಇಡಲಾಗಿದೆ. ತಂದೆಗೆ ತಿಳಿಯದೇ ಮಕ್ಕಳಿಗೆ ಮುಂಜವಿ ಕೂಡ ಮಾಡಲಾಗಿದೆ ಎಂದು ಖಾನಪ್ಪನವರ ಆರೋಪಿಸಿದರು. ಆದರೆ ಇಲ್ಲೂ ದೂರು ದಾಖಲಾಗಿಲ್ಲ.

ರಾಜು ಡಮಾಮ್, ಮಹೇಶ್ ರೋಖಡೆ, ಕುಮಾರ ನಡಗೇರಿ, ರಾಚೋಟಿ ಕಾಡಪ್ಪನವರ, ಕಿರಣ್ ಹಿರೇಮಠ, ಸತೀಶ್ ಕುಂಬಾರ, ಶಿವಯೋಗಿ ಹಿರೇಮಠ, ಅರುಣಕುಮಾರ ಬಜಿ, ಮಂಜುನಾಥ ಬೆಂತೂರ ಇದ್ದರು.