ಆ್ಯಕ್ಷನ್‌ಗೆ ಹಿಂದೂಗಳೂ ರಿಯಾಕ್ಷನ್‌ ಕೊಡಿ: ಪ್ರತಾಪಸಿಂಹ

| Published : Sep 22 2024, 01:53 AM IST

ಸಾರಾಂಶ

Hindus also react to the action: Pratapasimha

- ಹಿಂದೂಗಳಲ್ಲಿರುವ ದರಿದ್ರ ಜಾತೀಯ ಮನಸ್ಥಿತಿ ಹೋಗಿ ಒಗ್ಗಟ್ಟಾಗಬೇಕು

- ನಾಗಮಂಗಲ ಗಲಾಟೆ ಪ್ರಕರಣ ಕುರಿತು ಮಾಜಿ ಸಂಸದ ಪ್ರತಾಪಸಿಂಹ ಪ್ರತಿಕ್ರಿಯೆ

ಕನ್ನಡಪ್ರಭ ವಾರ್ತೆ ಯಾದಗಿರಿ/ಶಹಾಪುರ

ನಾಗಮಂಗಲ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪಸಿಂಹ, ನಾವೂ (ಹಿಂದೂಗಳು) ಆ್ಯಕ್ಷನ್‌ಗೆ ವಾಪಸ್‌ ರಿಯಾಕ್ಷನ್‌ ಕೊಡಬೇಕು, ಆ ಕೆಲಸವನ್ನೂ ನಾವು ಮಾಡಬೇಕು ಎಂದು ಕಿಡಿ ಕಾರಿದ್ದಾರೆ.

ಜಿಲ್ಲೆಯ ಶಹಾಪುರ ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಶನಿವಾರ ನಗರಕ್ಕಾಗಮಿಸಿದ್ದ ಅವರು, ಇಲ್ಲಿನ ಡಾ. ಸುಬೇದಾರ್ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

‘ಮುಸಲ್ಮಾನರು ಪೆಟ್ರೋಲ್ ಬಾಂಬ್ ಬಿಸಾಡ್ತಾರೆ ಅಂತೇಳಿ ಹೇಳಿದ್ರೆ, ಅವರಿಗೇನು ಹೂಗುಚ್ಚ ಕೊಡೋಕಾಗಲ್ಲ, ಅವರು (ಮುಸಲ್ಮಾನರು) ಕಲ್ಲು ಬಿಸಾಡ್ತಾರೆ ಅಂದರೆ ಕೆಳಗಡೆ ನಾವು ಹಣ್ಣು ಹಾಕಲಿಕ್ಕೆ ಮಾವಿನ ಮರವಲ್ಲ. ನಾವೂ (ಹಿಂದೂಗಳು) ವಾಪಸ್‌ ಆ್ಯಕ್ಷನ್‌ಗೆ ರಿಯಾಕ್ಷನ್ ಕೊಡಬೇಕಾಗುತ್ತೆ, ಆ ಕೆಲಸವನ್ನೂ ನಾವು ಮಾಡಬೇಕಾಗುತ್ತೆ’ ಎಂದು ಕಿಡಿ ಕಾರಿದ್ದಾರೆ.

ನಾಗಮಂಗಲ ಘಟನೆಯ ನಂತರವೂ ಕೂಡ, ಈ ರೀತಿ ಕಲ್ಲು ತೂರಾಟ ಮಾಡುವಂತಹ ಪ್ರಕರಣಗಳು ಸಂಭವಿಸುತ್ತವೆ ಅಂತಂದರೆ, ರಾಜ್ಯ ಸರ್ಕಾರ ಭದ್ರತೆ ಕೊಡಬೇಕಾಗುತ್ತದೆ. ಆದರೆ, ಕನಿಷ್ಠ ಜವಾಬ್ದಾರಿಯೂ ರಾಜ್ಯ ಸರ್ಕಾರಕ್ಕೆ ಇಲ್ಲ ಅನ್ನೋದು ವ್ಯಕ್ತವಾಗುತ್ತದೆ. ಹಾಗಾಗಿ, ಹಿಂದೂಗಳು ಮುಂಜಾಗ್ರತೆ ವಹಿಸಿಕೊಳ್ಳಬೇಕು ಎಂದರು.

........ಬಾಕ್ಸ್‌...........

ಹಿಂದೂಗಳಲ್ಲಿರುವ ದರಿಧ್ರ ಜಾತೀಯ ಮನಸ್ಥಿತಿ ಹೋಗಬೇಕು

ಈ ಹಿಂದೆ, ಬಾಲಗಂಗಾಧರ ತಿಲಕರರು ಸ್ವಾತಂತ್ರ್ಯಕ್ಕೋಸ್ಕರ ಜನರನ್ನು ಅಣಿಗೊಳಿಸಲು ಮತ್ತು ಆಗ ಶಸ್ತ್ರ ಹೊಂದುವಂತಿಲ್ಲ ಎಂಬ ಬ್ರಿಟಿಷ್‌ ಆದೇಶದ ಹಿನ್ನೆಲೆ ಗಣೇಶೋತ್ಸವ ನೆಪದಲ್ಲಿ ಪ್ರಹಸನ- ನಾಟಕ ಹಾಗೂ ಕಾರ್ಯಕ್ರಮಗಳ ಮೂಲಕ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದ ಕಹಳೆ ಆರಂಭಿಸಿದರು. ಅದೇ ರೀತಿ ಶಿವಾಜಿ ಜಯಂತಿಯೂ ಆರಂಭವಾಯಿತು. ಈಗ ಬಾಂಗ್ಲಾದೇಶದಲ್ಲಿ ಹಾಗೂ ಪ್ರಪಂಚದ ಬೇರೆ ಭಾಗಗಳಲ್ಲಿ ನಡೆಯುತ್ತಿರುವ ಘಟನೆಗಳ ನೋಡಿ, ಹಿಂದೂಗಳು ತಮ್ಮನ್ನು ತಾವು ರಕ್ಷಣೆ ಮಾಡುವುದಕ್ಕೋಸ್ಕರ ಸಂದೇಶ ಕೊಡಬೇಕು ಎಂದರು.

ಹಿಂದೂಗಳಲ್ಲಿ ಜಾಗೃತಿ ಮೂಡಿಸಲು, ಹಿಂದೂಗಳಲ್ಲಿರುವಂತಹ ಈ ದರಿಧ್ರ ಜಾತೀಯ ಮನಸ್ಥಿತಿಯನ್ನು ಹೋಗಲಾಡಿಸಬೇಕು, ಈ ಕಾಲ ಸನ್ನಿಹಿತವಾಗಿದೆ, ಸಮಸ್ತ ಹಿಂದೂ ಬಾಂಧವರಲ್ಲಿ ಮನವಿ ಮಾಡುವುದಾಗಿ ಹೇಳಿದ ಅವರು, ನೀವು (ಹಿಂದೂಗಳು) ಇನ್ನಾದರೂ ಕೂಡ, ಗೌಡ, ಲಿಂಗಾಯತ, ಬ್ರಾಹ್ಮಣ, ಕುರುಬ, ಎಸ್ಸಿ/ಎಸ್ಟಿ ಎಂಬ ಭಾವನೆ ಬಿಟ್ಟು ಹೊರಗಡೆ ಬನ್ನಿ. ಬಾಂಗ್ಲಾದೇಶದಲ್ಲಿ ಒಂದೂ ಕಾಲು ಕೋಟಿ ಹಿಂದೂಗಳನ್ನು ಟಾರ್ಗೆಟ್‌ ಮಾಡಿ ಅವರ ದೇವಸ್ಥಾನ ಸುಡಬೇಕಾದರೆ ಇದು ಬ್ರಾಹ್ಮಣರದ್ದು, ಇದು ಲಿಂಗಾಯತರದ್ದು, ಇದು ಕುರುಬರದ್ದು, ಗೌಡರದ್ದು ಎಂದು ನೋಡಲಿಲ್ಲ. ಬದಲು, ಇವೆಲ್ಲ ಹಿಂದೂಗಳದ್ದು ಎಂದು ಟಾರ್ಗೆಟ್‌ ಮಾಡಲಾಗಿದೆ.

ಮುಂದೆ ಈ ದೇಶದಲ್ಲಿ ಇಂತಹ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ಪ್ರತಾಪಸಿಂಹ, ಅದಕ್ಕೋಸ್ಕರ ಈಗ ಜಾತೀಯ ಭಾವನೆ ಬಿಟ್ಟು ದಯವಿಟ್ಟು ಒಂದಾಗಬೇಕು ಎಂದು ಕರೆ ನೀಡಿದರು. ಹಿಂದೂಗಳೆಲ್ಲ ಒಂದು ಅನ್ನೋ ಭಾವನೆ ಬರುವವರೆಗೂ ಕೂಡ (ಹಿಂದೂಗಳ) ಮೇಲಿನ ಆಕ್ರಮಣ ಮುಂದುವರಿದಿರುತ್ತದೆ. ಮುಂದೊಂದು ದಿನ ಗಂಡಾಂತರ ಮೈಮೇಲೆ ಎಳೆದುಕೊಳ್ಳದಿರಿ, ಅದಕ್ಕೋಸ್ಕರ ಇನ್ನಾದರೂ ಒಗ್ಗಟ್ಟಿನಿಂದ ಇರುವಂತಹುದ್ದನ್ನು ಹಿಂದೂಗಳು ಕಲಿತುಕೊಳ್ಳಿ ಎಂದು ಕಿವಿಮಾತು ಹೇಳಿದರು.

-----

21ವೈಡಿಆರ್‌7:

ಶಹಾಪುರ ನಗರದಲ್ಲಿ ಡಾ. ಸುಬೇದಾರ್ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಜಿ ಸಂಸದ ಪ್ರತಾಪಸಿಂಹ ಮಾತನಾಡುತ್ತಿದ್ದರು.