ಸಾರಾಂಶ
ಧರ್ಮದ ಒಳಗಿನ ಶ್ರೇಣೀಕೃತ ವ್ಯವಸ್ಥೆ ಮತ್ತು ಅಸಮಾನತೆ ಮುಂದುವರೆದಿದೆ.
ಹೊಸಪೇಟೆ: ಅಸಮಾನತೆ ಮತ್ತು ಶ್ರೇಣೀಕೃತ ವ್ಯವಸ್ಥೆಯಿಂದಾಗಿ ಹಿಂದೂ ಧರ್ಮದಲ್ಲಿ ಇರುವವರು ಒಂದಾಗಲು ಸಾಧ್ಯವಿಲ್ಲ. ಜಾತಿ ಪದ್ಧತಿ ನಾಶವಾಗಬೇಕು ಎಂದು ಸೌಹಾರ್ದ ಕರ್ನಾಟಕ ವಿಜಯನಗರ ಜಿಲ್ಲಾ ಸಂಚಾಲಕ ಎ.ಕರುಣಾನಿಧಿ ಹೇಳಿದರು.
ನಗರದಲ್ಲಿ ನಡೆದ ದಸರಾ ಸೌಹಾರ್ದ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿಗಳು ಅಲ್ಲವೋ ಅವರೆಲ್ಲ ಹಿಂದೂಗಳು ಎಂದು ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿದೆ. ಆದರೆ, ಧರ್ಮದ ಒಳಗಿನ ಶ್ರೇಣೀಕೃತ ವ್ಯವಸ್ಥೆ ಮತ್ತು ಅಸಮಾನತೆ ಮುಂದುವರೆದಿದೆ. ಜಾತಿಪದ್ಧತಿ ನಾಶವಾಗದ ಹೊರತು ಹಿಂದೂಗಳು ಒಂದಾಗಲು ಸಾಧ್ಯವಿಲ್ಲ. ಪ್ರಸ್ತುತ ಮತೀಯವಾದಿಗಳು ತಮ್ಮ ಕೋಮುವಾದಿ ಅಜೆಂಡಾ ಹೇರುವಿಕೆಯ ಭಾಗವಾಗಿ ಹಿಂದೂಗಳು ಒಂದಾಗಬೇಕು ಎಂದು ಹೇಳುತ್ತಿದ್ದು, ಇದರ ಹಿಂದಿನ ರಾಜಕೀಯ ಪಿತೂರಿಯನ್ನು ಅರ್ಥಮಾಡಿಕೊಳ್ಳದೇ ಇದ್ದಲ್ಲಿ ಭಾರತೀಯ ಪ್ರಜೆಗಳು ಅದರಲ್ಲೂ ವಿಶೇಷವಾಗಿ ಶೋಷಿತ ಮತ್ತು ಶ್ರಮ ಸಂಸ್ಕೃತಿಯ ಜನರು ದಾರಿ ತಪ್ಪುವ ಎಲ್ಲಾ ಅಪಾಯಗಳು ಇವೆ. ಈ ನಿಟ್ಟಿನಲ್ಲಿಯೇ 12ನೇ ಶತಮಾನದ ಶರಣರು ದೇಗುಲ ಸಂಸ್ಕೃತಿಗಿಂತ ಶ್ರಮ ಸಂಸ್ಕೃತಿಗೆ ಹೆಚ್ಚು ಒತ್ತು ನೀಡಿದ್ದರು ಎಂದರು.ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಡಾ.ದಯಾನಂದ ಕಿನ್ನಾಳ್ ಮಾತನಾಡಿ, ಕವಿಗಳು ಮೊದಲು ಕಿವಿಗಳಾಗಬೇಕು. ಹಿರಿಯ ಕವಿಗಳ ಅಥವಾ ಪ್ರಸ್ತುತ ಮನಮುಟ್ಟುವಂತೆ ಬರೆಯುವವರ ಸಾಹಿತಿಗಳ ಪುಸ್ತಕಗಳನ್ನು ಓದಬೇಕು ಮತ್ತುತಮಗಿಷ್ಟವಾದುದ್ದನ್ನುಓದುಗರಿಗೆ ಮನನವಾಗುವಂತೆ ಬರೆಯುವ ರೂಢಿ ಮಾಡಿಕೊಳ್ಳಬೇಕು. ಹೇಳುವ ವಿಷಯ ಪ್ರಸ್ತುತೆಗೆ ಹತ್ತಿರವಾಗಿರಬೇಕು ಎಂದರು.
ಸಾಹಿತಿ ಡಾ. ಎತ್ನಳ್ಳಿ ಮಲ್ಲಯ್ಯ, ಕವಯತ್ರಿ ನೂರ್‌ಜಹಾನ್ ಮತ್ತಿತರರಿದ್ದರು. ಕವಿಗಳು ಸೌಹಾರ್ದತೆ ಮತ್ತು ಭಾವೈಕ್ಯತೆ ಕುರಿತಂತೆ ಕವನ ವಾಚಿಸಿದರು. ಗಾಯಕ ಶ್ರೀನಿವಾಸ ಪುರೋಹಿತ ಭಾವಗೀತೆ ಪ್ರಸ್ತುತಪಡಿಸಿದರು. ಕ್ಯಾದಿಗಾಳ್ ಉದೇದಪ್ಪ, ಜಿ.ಎರಿಸ್ವಾಮಿ, ಜಂಬುನಾಥ ಎಚ್.ಎಂ. ನಿರ್ವಹಿಸಿದರು.ಹೊಸಪೇಟೆಯಲ್ಲಿ ನಡೆದ ದಸರಾ ಸೌಹಾರ್ದ ಕವಿಗೋಷ್ಠಿಯಲ್ಲಿ ಸೌಹಾರ್ದ ಕರ್ನಾಟಕ ವಿಜಯನಗರ ಜಿಲ್ಲಾ ಸಂಚಾಲಕ ಎ.ಕರುಣಾನಿಧಿ ಮಾತನಾಡಿದರು.