ಉಗ್ರರ ಕೃತ್ಯ ಖಂಡಿಸಿ ದಾವಣಗೆರೆಯಲ್ಲಿ ಹಿಂದೂಗಳ ಧರಣಿ

| Published : Apr 25 2025, 01:45 AM IST

ಸಾರಾಂಶ

ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪದಾಕರ ಗುಂಪು ಅಮಾಯಕ ಪ್ರವಾಸಿಗಳನ್ನು ಹತ್ಯೆ ಮಾಡಿದ ದುಷ್ಕೃತ್ಯ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬಿಜೆಪಿ, ಹಿಂದು ಪರ ಸಂಘಟನೆಗಳು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದವು.

ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಿ: ಜಿ.ಎಂ.ಸಿದ್ದೇಶ್ವರ । ಕಠಿಣ ಕ್ರಮಕ್ಕೆ ಶಾಸಕ ಹರೀಶ್‌, ಸತೀಶ್ ಆಗ್ರಹ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪದಾಕರ ಗುಂಪು ಅಮಾಯಕ ಪ್ರವಾಸಿಗಳನ್ನು ಹತ್ಯೆ ಮಾಡಿದ ದುಷ್ಕೃತ್ಯ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬಿಜೆಪಿ, ಹಿಂದು ಪರ ಸಂಘಟನೆಗಳು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದವು.

ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿಯಿಂದ ಸಮಿತಿ ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಹಿಂದು ಧರ್ಮೀಯರು ಭಯೋತ್ಪಾದಕರ ಕೃತ್ಯ ಖಂಡಿಸಿ ಘೋಷಣೆ ಕೂಗುತ್ತಾ ಉಪ ವಿಭಾಗಾಧಿಕಾರಿ ಕಚೇರಿ ಬಳಿ ತಲುಪಿ, ಸುಮಾರು ಹೊತ್ತು ರಸ್ತೆ ತಡೆ ನಡೆಸಿ, ನಂತರ ಎಸಿ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಇದೇ ವೇಳೆ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಂನಲ್ಲಿ ಭಯೋತ್ಪಾದಕರ ಕೃತ್ಯ ಖಂಡನೀಯವಾಗಿದ್ದು, 370ನೇ ವಿಧಿ ರದ್ಧತಿ ನಂತರ ಅಲ್ಲಿ ನೆಲೆಸಿದ್ದ ಶಾಂತಿ, ಸಾಮರಸ್ಯ ಕದಡುವ ದುರುದ್ದೇಶದಿಂದ, ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ಗುಂಡು ಹಾರಿಸಿ, ಹತ್ಯೆ ಮಾಡಿದ್ದಾರೆ ಎಂದರು.

ಪಹಲ್ಗಾಂನಲ್ಲಿ ಪ್ರವಾಸಿಗರ ಹೆಸರು, ಧರ್ಮವನ್ನು ಕೇಳಿ, ಹಿಂದುಗಳನ್ನು ವಿಶೇಷವಾಗಿ ಪುರುಷರನ್ನಷ್ಟೇ ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ. ಬಟ್ಟೆಗಳನ್ನು ಬಿಚ್ಚಿಸಿ, ಗುಂಡು ಹಾರಿಸಿ, ಕೊಲೆ ಮಾಡಿದ್ದು, ಇಂತಹ ಘೋರ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಕಾಶ್ಮೀರದಲ್ಲಿ ಆದ ಕೃತ್ಯದಿಂದ ಒಂದು ಸಮುದಾಯಕ್ಕೆ ಸೇರಿದ ಮತಾಂಧರ ಮನಸ್ಥಿತಿ ಎಂತಹದ್ದು ಎಂಬುದನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ರಾಬರ್ಟ್ ವಾದ್ರಾ ಎಂಬಾತ ಅಲ್ಪಸಂಖ್ಯಾತ ಸಮುದಾಯದ ಮೇಲಿನ ಕ್ರಮಗಳೇ ಇಂತಹ ಘಟನೆಗಳಿಗೆ ಕಾರಣವೆಂದಿರುವುದು ಖಂಡನೀಯ ಎಂದರು.

ಹಿಂದು ಸಂಘಟನೆ ಮುಖಂಡ ಸತೀಶ ಪೂಜಾರಿ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೇಳಿಕೆ ನೀಡಿರುವ ದಾವಣಗೆರೆ ಪಾಲಿಕೆ ಮಾಜಿ ಸದಸ್ಯ ಕಬೀರ್ ಖಾನ್‌ ವಿರುದ್ಧ ವಿವಿಧ ಸೆಕ್ಷನ್‌ನಡಿ ಗಂಭೀರ ಪ್ರಕರಣ ದಾಖಲಿಸಿ, ಗೂಂಡಾ ಕಾಯ್ದೆಯಡಿ ಗಡೀಪಾರು ಮಾಡಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಟಿ.ಶ್ರೀನಿವಾಸ ದಾಸಕರಿಯಪ್ಪ, ಜಿ.ಎಸ್.ಅನಿತ ಕುಮಾರ, ಶಿವನಹಳ್ಳಿ ರಮೇಶ, ಮಾಯಕೊಂಡ ಜಿ.ಎಸ್.ಶ್ಯಾಮ, ವಿನಾಯಕ ರಾನಡೆ, ಗೋ.ರುದ್ರಯ್ಯ, ರಾಜನಹಳ್ಳಿ ಶಿವಕುಮಾರ, ಎಚ್.ಎನ್.ಶಿವಕುಮಾರ, ಮಲ್ಲಿಕಾರ್ಜುನ, ಶಂಕರ ಗೌಡ ಬಿರಾದಾರ, ಎಸ್.ಟಿ.ವೀರೇಶ, ಬಿ.ಜಿ.ಅಜಯಕುಮಾರ, ಕೆ.ಎಂ.ವೀರೇಶ, ಶೋಭಾ, ಗೀತಾ, ಭಾಗ್ಯ ಪಿಸಾಳೆ, ಸಿ.ಎಸ್.ರಾಜು, ಕೆ.ಎಂ.ಮಂಜುನಾಥ, ಅನೇಕರು ಇದ್ದರು.

ಸಂಸದರ ಹೇಳಿಕೆಗೆ ಸಿದ್ದೇಶ್ವರ ಆಕ್ಷೇಪ

ಕೇಂದ್ರ ಸರ್ಕಾರವು ಪಾಕಿಸ್ತಾನದ ವಿರುದ್ಧ ಕೈಗೊಂಡ ಎಲ್ಲಾ ಕ್ರಮಗಳೂ ಸ್ವಾಗತಾರ್ಹ. ಸೈನಿಕರ ಆತ್ಮವಿಶ್ವಾಸ ಕುಗ್ಗಿಸುವ ಕೆಲಸವನ್ನು ವಿಪಕ್ಷ ಕಾಂಗ್ರೆಸ್ಸಿನವರೇ ಮಾಡಿದರೆ ದೇಶದ ಸೈನಿಕರು ಹೇಗೆ ಕೆಲಸ ಮಾಡುತ್ತಾರೆ? ಸೈನಿಕರಿಗೆ ಶಕ್ತಿ ತುಂಬುವಂತಹ ಕೆಲಸ ಮಾಡಲಿ ಎಂದು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು,

ಸಚಿವರ ಹೇಳಿಕೆಗೆ ಶಾಸಕ ಹರೀಶ ಕಿಡಿ

ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೇಳಿಕೆ ನೀಡಿದ ಕಾಂಗ್ರೆಸ್ ಪಕ್ಷದ ಕಬೀರ್‌ಖಾನ್‌ನನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಸಮರ್ಥನೆ ಮಾಡಿಕೊಂಡಿದ್ದು, ತುಂಬಾ ನೋವಿನ ವಿಚಾರ. ಇಂತಹ ಕಬೀರ್ ಇತರರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಹೇಳಿದರು.