ಸಾರಾಂಶ
ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪಟ್ಟಿ ಮಾಡಿದ್ದ ‘ಕರ್ನಾಟಕದ ಏಳು ಅದ್ಭುತ’ಗಳಲ್ಲಿ ಸ್ಥಾನ ಪಡೆಯುವ ಮೂಲಕ ಬೆಳಕಿಗೆ ಬಂದಿದ್ದ ಹಿರೇಬೆಣಕಲ್ ಮೊರೇರ ಗುಡ್ಡದಲ್ಲಿನ ಶಿಲಾಸಮಾಧಿ ಹಾಗೂ ಗವಿವರ್ಣ ಚಿತ್ರಗಳ ಪ್ರದರ್ಶನವನ್ನು ಮಂಗಳವಾರದಿಂದ ಮೂರು ದಿನಗಳ ಕಾಲ ವಿಧಾನಸೌಧ ಆವರಣದಲ್ಲಿ ಏರ್ಪಡಿಸಿದ್ದು, ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪಟ್ಟಿ ಮಾಡಿದ್ದ ‘ಕರ್ನಾಟಕದ ಏಳು ಅದ್ಭುತ’ಗಳಲ್ಲಿ ಸ್ಥಾನ ಪಡೆಯುವ ಮೂಲಕ ಬೆಳಕಿಗೆ ಬಂದಿದ್ದ ಹಿರೇಬೆಣಕಲ್ ಮೊರೇರ ಗುಡ್ಡದಲ್ಲಿನ ಶಿಲಾಸಮಾಧಿ ಹಾಗೂ ಗವಿವರ್ಣ ಚಿತ್ರಗಳ ಪ್ರದರ್ಶನವನ್ನು ಮಂಗಳವಾರದಿಂದ ಮೂರು ದಿನಗಳ ಕಾಲ ವಿಧಾನಸೌಧ ಆವರಣದಲ್ಲಿ ಏರ್ಪಡಿಸಿದ್ದು, ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದರು.ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪಾರಂಪರಿಕ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಎದುರು ಪ್ರಾಗೈತಿಹಾಸಿಕ ವಸ್ತುಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಪ್ರದರ್ಶನಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಜತೆಗೂಡಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಬಳಿಕ ಎಚ್.ಕೆ. ಪಾಟೀಲ್ ಅವರು ಶಿಲಾಕಾಲದಲ್ಲಿ ನಿರ್ಮಿಸಿರುವ ಶಿಲಾಸಮಾಧಿಗಳ ಕುರಿತು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು.ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಎಚ್.ಕೆ. ಪಾಟೀಲ್, ಯುನೆಸ್ಕೋ ಪಾರಂಪರಿಕ ಸ್ಥಳಗಳ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸ್ಥಳದ ಮಹತ್ವವನ್ನು ತಿಳಿಸುವ ಹಾಗೂ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಪ್ರದರ್ಶನ ಏರ್ಪಡಿಸಲಾಗಿದೆ. ಹಿರೇಬೆಣಕಲ್ ವಿಶ್ವದಲ್ಲಿಯೇ ಶ್ರೇಷ್ಠ ಇತಿಹಾಸ ಹೊಂದಿರುವ ಪ್ರದೇಶವಾಗಿದೆ. ಇದನ್ನು ಕೇವಲ ನಾಡಿಗೆ, ದೇಶಕ್ಕೆ ಅಲ್ಲದೆ ವಿಶ್ವಕ್ಕೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಇದನ್ನು ಸಂರಕ್ಷಣೆ ಮಾಡುವ ಮತ್ತು ಅಭಿವೃದ್ಧಿಪಡಿಸುವ ಅಗತ್ಯವಿದ್ದು, ಇದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸ್ಮಾರಕಗಳ ರಕ್ಷಣೆ, ಸ್ಮಾರಕಗಳ ಇತಿಹಾಸ, ಸಾರ್ವಜನಿಕರಿಗೆ ಮತ್ತು ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವ ಕಾರ್ಯ ನಡೆಯಬೇಕಾಗಿದೆ. ಆದಿಮಾನವರ ಕುರುಹುಗಳು ಹಿರೇಬೆಣಕಲ್‌ನಲ್ಲಿ ಇರುವುದು ಹೆಮ್ಮೆ. 5000 ವರ್ಷಗಳ ಹಿಂದಿನ ಆದಿ ಮಾನವರ ಜೀವನ ಶೈಲಿ, ಗುಹಾ ಚಿತ್ರಗಳು ಇಲ್ಲಿವೆ ಎಂದರು.ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕರಾದ ಕೋನರಡ್ಡಿ ಹಾಜರಿದ್ದರು.