ಹಿರೇಬೆಣಕಲ್ ಅಭಿವೃದ್ಧಿಗೆ ಕಾಯಕಲ್ಪ: ಜಿಲ್ಲಾಧಿಕಾರಿ ನಲಿನ್ ಅತುಲ್

| Published : Jul 26 2024, 01:34 AM IST

ಹಿರೇಬೆಣಕಲ್ ಅಭಿವೃದ್ಧಿಗೆ ಕಾಯಕಲ್ಪ: ಜಿಲ್ಲಾಧಿಕಾರಿ ನಲಿನ್ ಅತುಲ್
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ಮೂರುವರೆ ಸಾವಿರ ವರ್ಷಗಳಷ್ಟು ಹಿಂದಿನ ಶಿಲಾಯುಗದ ಇತಿಹಾಸವನ್ನು ಸಾರಿ ಹೇಳುವ ಹಿರೇಬೆಣಕಲ್ ಮೊರೇರ ತಟ್ಟೆಗಳ ಐತಿಹಾಸಿಕ ತಾಣವನ್ನು ಸಮಗ್ರ ಅಭಿವೃದ್ಧಿಪಡಿಸಲಾಗುವುದು.

ಕನ್ನಡಪ್ರಭ, ಏಷಿಯಾನೆಟ್‌ ಸುವರ್ಣ ನ್ಯೂಸ್ ಗುರುತಿಸಿದ ಸ್ಮಾರಕ

ಕರ್ನಾಟಕ ಏಳು ಅದ್ಭುತ ತಾಣಗಳಲ್ಲೊಂದು ಈ ತಾಣ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸುಮಾರು ಮೂರುವರೆ ಸಾವಿರ ವರ್ಷಗಳಷ್ಟು ಹಿಂದಿನ ಶಿಲಾಯುಗದ ಇತಿಹಾಸವನ್ನು ಸಾರಿ ಹೇಳುವ ಹಿರೇಬೆಣಕಲ್ ಮೊರೇರ ತಟ್ಟೆಗಳ ಐತಿಹಾಸಿಕ ತಾಣವನ್ನು ಸಮಗ್ರ ಅಭಿವೃದ್ಧಿಪಡಿಸಿ, ನಾಡಿಗೆ ಪರಿಚಯಿಸುವುದಾಗಿ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನದ ಭಾಗವಾಗಿ ಬೃಹತ್ ಶಿಲಾಯುಗದ ನೆಲೆಯಾಗಿರುವ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಮೆಗಾಲಿಥಿಕ್ ಸೈಟ್‌ನಲ್ಲಿ ಪಾರಂಪರಿಕೆ ನಡಿಗೆ ಮತ್ತು ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತಿಹಾಸಕಾರರಿಗೆ, ಸಂಶೋಧಕರಿಗೆ ಕೊಪ್ಪಳ ಜಿಲ್ಲೆ ಪ್ರಿಯವಾದ, ಶ್ರೀಮಂತ ನೆಲ. ಸರ್ಕಾರ ಆನೆಗೊಂದಿ ಹಾಗೂ ಕೊಪ್ಪಳದ ಸುತ್ತಲಿನ ಐತಿಹಾಸಿಕ, ನೈಸರ್ಗಿಕ ತಾಣಗಳನ್ನು ಅಭಿವೃದ್ಧಿಪಡಿಸುವ ಆಲೋಚನೆ ಇದೆ. ಹಿರೇಬೆಣಕಲ್ ಆದಿಮಾನವನ ಶಿಲಾಯುಗದ ಕಲ್ಗೊರಿಗಳನ್ನು ಒಳಗೊಂಡಿದೆ. ಸಾವಿರಾರು ವರ್ಷಗಳಿಂದ ಉಳಿದಿರುವ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸಿಬೇಕಾದ ಅಗತ್ಯವಿದೆ. ಮುಂದಿನ ತಲೆಮಾರಿಗೆ ಇಂತಹ ಮಹತ್ವದ ನೆಲೆಯನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕಾಗಿದೆ. ಕೊಪ್ಪಳ, ಅನೆಗೊಂದಿ, ಕನಕಗಿರಿ, ಕಬ್ಬರಗಿ ಜಲಪಾತ, ಇಟಗಿ ಮುಂತಾದ ಚಾರಿತ್ರಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಯೋಜನೆ ತಯಾರಿಸುತ್ತಿದೆ. ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ದೃಢಸಂಕಲ್ಪ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಜಗತ್ತಿನ ಜನರಿಗೆ ನಮ್ಮ ಭಾಗದ ಮಹತ್ವವ ತಿಳಿಸಬೇಕಾಗಿದೆ. ರಾಮಾಯಣ ಕಾಲದ ಪ್ರದೇಶ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಉತ್ತುಂಗಕ್ಕೇರಿದ ಈ ಭಾಗದ ಚರಿತ್ರೆಯನ್ನು ನಾವು ಎಲ್ಲರಿಗೂ ಮುಟ್ಟಿಸಬೇಕು. ಇಲ್ಲಿಯ ಮೂಲಸೌಕರ್ಯ ಅಭಿವೃದ್ಧಿಗೆ ಸಿದ್ಧರಿದ್ದೇವೆ ಎಂದು ಹೇಳಿದರು.

ಹಿರೇಬೆಣಕಲ್ ನ ಪ್ರಾಚೀನ ಇತಿಹಾಸದ ವಿವರ ನೀಡಿದ ಹಿರಿಯ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ, ೧೭ನೇ ಶತಮಾನದಲ್ಲಿ ಬ್ರಿಟಿಷ್ ಅಧಿಕಾರಿಯಿಂದ ಸಂಶೋಧಿಸಲ್ಪಟ್ಟ ಈ ನೆಲೆ ಇಲ್ಲಿಯವರೆಗೆ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲದ್ದರಿಂದ ಮುನ್ನೆಲೆಗೆ ಬಂದಿಲ್ಲ. ಮೂರುವರೆ ಸಾವಿರ ವರುಷಗಳ ಇತಿಹಾಸವಿರುವ ಈ ಸಾಲು ಬೆಟ್ಟಗಳು ಅಮೂಲ್ಯ ಸಂಗತಿಗಳನ್ನು ಒಳಗೊಂಡಿವೆ ಎಂದರು.

ಕಳೆದ ಹಲವಾರು ವರುಷಗಳಿಂದ ಹಲವು ಇಲಾಖೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸ್ವಲ್ಪವೂ ಅಭಿವೃದ್ಧಿಯಾಗಿಲ್ಲ. ಇಡೀ ದೇಶದಲ್ಲಿಯೇ ಅಪರೂಪದ ಶಿಲಾಯುಗದ ಕಲ್ಗೊರಿಗಳು ಇಲ್ಲಿರುವುದು ಹೆಮ್ಮೆಯ ಸಂಗತಿ. ಪ್ರವಾಸೋದ್ಯಮದ ಅಭಿವೃದ್ಧಿಯಾಗದ ಹೊರತು ಇಲ್ಲೇನೂ ಮಾಡಲು ಸಾಧ್ಯವಿಲ್ಲ ಎಂದರು.

ಹಂಪಿಯ ಎ.ಎಸ್.ಐ ಸಿ. ಬರಣಿಧರನ್, ಕೊಪ್ಪಳದ ಡಿಸಿಎಫ್ ಆರ್ಸೆಲನ್, ಆರ್.ಎಫ್.ಓ. ಸುಭಾಶ್ಚಂದ್ರ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಾದ ಚಂದ್ರನಾಯಕ, ನಾಗರಾಜ್, ಕೇದಾರನಾಥ ಅಂಗಡಿ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ, ಕಿಷ್ಕಿಂದಾ ಯುವ ಚಾರಣ ಬಳಗದ ಅಧ್ಯಕ್ಷ ಅರ್ಜುನ್, ಗಂಗಾವತಿ ಚಾರಣ ಬಳಗದ ಡಾ. ಶಿವಕುಮಾರ ಮಾಲೀಪಾಟೀಲ, ಮಂಜುನಾಥ ಗುಡ್ಲಾನೂರ, ಡಾ. ಅಮರೇಶ್ ಪಾಟೀಲ್, ಬೆಣಕಲ್ ಗ್ರಾಪಂ ಸದಸ್ಯ ವೀರೇಶ್ ಅಂಗಡಿ, ಮಹ್ಮದರಫಿ ಶ್ರೀರಾಮನಗರ, ವಿಜಯ್ ಬಳ್ಳಾರಿ, ಮಧುಸೂದನ, ಹರನಾಯಕ, ವಿಷ್ಣುತೀರ್ಥ ಆದಾಪುರ, ಮಂಜುಳಾ, ಪ್ರಲ್ಲಾದ ಕುಲಕರ್ಣಿ ಇತರರಿದ್ದರು.

ಕಂದಾಯ, ಅರಣ್ಯ, ಪೊಲೀಸ್, ಪುರಾತತ್ವ, ಪ್ರವಾಸೋದ್ಯಮ ಇಲಾಖೆಯ ಸುಮಾರು ಇನ್ನೂರಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಂಡಿದ್ದರು.ಕನ್ನಡಪ್ರಭ -ಏಷಿಯಾನೆಟ್‌ ಸುವರ್ಣ ನ್ಯೂಸ್ ಗುರುತಿಸಿದ ಸ್ಥಳ

ಹಿರೇಬೆಣಕಲ್ ಮೊರೇರ ತಟ್ಟೆಗಳನ್ನು ಕನ್ನಡಪ್ರಭ ಮತ್ತು ಏಷಿಯಾನೆಟ್‌ ಸುವರ್ಣ ನ್ಯೂಸ್ ಕರ್ನಾಟಕ ಏಳು ಅದ್ಭುತಗಳಲ್ಲಿ ಇದನ್ನು ಒಂದು ಎಂದು ಗುರುತಿಸಲಾಗಿದೆ ಎನ್ನುವ ಮಾಹಿತಿಯನ್ನು ಗಂಗಾವತಿ ಚಾರಣಬಳಗದ ಶಿವಕುಮಾರ ಹಾಗೂ ಡಾ. ಶರಣಬಸಪ್ಪ ಕೋಲ್ಕಾರ್ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರ ಗಮನಕ್ಕೆ ತಂದರು.

ಈಗ ನಾಡಿನ ಏಳು ಅದ್ಭುತಗಳಲ್ಲೊಂದಾಗಿರುವ ಹಿರೇಬೆಣಕಲ್ ಅಭಿವೃದ್ಧಿಯಾಗಬೇಕಾಗಿದೆ ಎಂದು ಹೇಳಿದಾಗ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು, ಒಳ್ಳೆಯ ಕಾರ್ಯವನ್ನೇ ಮಾಡಿದ್ದಾರೆ. ಇಂಥ ಕಾರ್ಯವನ್ನು ಮಾಡುವ ಅಗತ್ಯವಿದ್ದು, ಇದನ್ನು ದೇಶಕ್ಕೆ ಪರಿಚಯಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಲಿದೆ. ಈಗಾಗಲೇ ಹಿರೇಬೆಣಕಲ್ ವಿಶ್ವಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿದ್ದು, ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು.