ನೀಲಾವರ ದೇಗುಲ ಮೊಕ್ತೇಸರ ನೇಮಕಕ್ಕೆ ತಡೆ

| Published : Feb 21 2024, 02:02 AM IST

ಸಾರಾಂಶ

ಸರ್ಕಾರದ ಆದೇಶ ಪ್ರಶ್ನಿಸಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧೀರ್‌ ಶೆಟ್ಟಿ ಮತ್ತು ಕುಶಾಲ್‌ ಶೆಟ್ಟಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿ ಕುರಿತು ಮುಂದಿನ ಆದೇಶದವರೆಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉಡುಪಿ ಜಿಲ್ಲೆಯ ಪ್ರಸಿದ್ಧ ನೀಲಾವರ ಶ್ರೀ ಮಹಿಷಮರ್ದಿನಿ ದೇವಾಲಯಕ್ಕೆ ರಘುರಾಮ ಮಧ್ಯಸ್ಥ ಅವರನ್ನು ಅನುವಂಶಿಕ ಮೊಕ್ತೇಸರರನ್ನಾಗಿ ನೇಮಿಸಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.ಸರ್ಕಾರದ ಆದೇಶ ಪ್ರಶ್ನಿಸಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧೀರ್‌ ಶೆಟ್ಟಿ ಮತ್ತು ಕುಶಾಲ್‌ ಶೆಟ್ಟಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿ ಕುರಿತು ಮುಂದಿನ ಆದೇಶದವರೆಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿತು.ಅರ್ಜಿಯಲ್ಲಿನ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಹಿಂದು ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಆಯೋಗದ ಆಯುಕ್ತರು, ಉಡುಪಿ ಜಿಲ್ಲಾಧಿಕಾರಿ, ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಸಹಾಯಕ ಆಯುಕ್ತರು, ಬ್ರಹ್ಮಾವರ ತಹಸೀಲ್ದಾರ್‌, ಶ್ರೀ ಮಹಿಷಮರ್ದಿನಿ ದೇವಾಲಯದ ಕಾರ್ಯಕಾರಿ ಅಧಿಕಾರಿ ಮತ್ತು ಮೊಕ್ತೇಸರರಾಗಿ ನೇಮಕಗೊಂಡಿರುವ ಎನ್‌.ರಘುರಾಮ ಮಧ್ಯಸ್ಥ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಮಾ.12ಕ್ಕೆ ಮುಂದೂಡಿದೆ.ನೀಲಾವರ ಶ್ರೀ ಮಹಿಷಮರ್ದಿನಿ ದೇವಾಲಯ ಧಾರ್ಮಿಕ ದತ್ತಿ ಇಲಾಖೆ ಆಡಳಿತಕ್ಕೆ ಒಳಪಡುವ ಎ ಪ್ರವರ್ಗಕ್ಕೆ ಸೇರಿದ ಸಂಸ್ಥೆಯಾಗಿದೆ. ದೇವಾಲಯದ ಅನುವಂಶೀಯ ಮೊಕ್ತೇಸರರಾಗಿ ತಮ್ಮನ್ನು ನೇಮಕ ಮಾಡುವಂತೆ ರಘುರಾಮ ಮಧ್ಯಸ್ಥ 2016ರ ಮಾ.21ರಂದು ಸರ್ಕಾರಕ್ಕೆ ಕೋರಿದ್ದರು. ಆ ಮನವಿ ಆಧರಿಸಿ ಮೊಕ್ತೇಸರರಾಗಿ ರಘುರಾಮ ಮಧ್ಯಸ್ಥ ಅವರನ್ನು ನೇಮಿಸಿ ಹಿಂದು ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಆಯೋಗದ ಆಯುಕ್ತರು 2023ರ ಡಿ.21ರಂದು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಅರ್ಜಿದಾರರ ಪರ ವಕೀಲ ಎಚ್‌. ಪವನಚಂದ್ರ ಶೆಟ್ಟಿ ವಾದ ಮಂಡಿಸಿ, ನಿಯಮ ಪ್ರಕಾರ ಯಾರನ್ನಾದರೂ ಮೊಕ್ತೇಸರರನ್ನಾಗಿ ನೇಮಿಸುವಾಗ ಆ ಕುರಿತು ಸಾರ್ವಜನಿಕ ಪ್ರಕಟಣೆ ನೀಡಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಆದರೆ, ರಘುರಾಮ ಮಧ್ಯಸ್ಥರನ್ನು ಅವರನ್ನು ನೇಮಿಸುವಾಗ ಅಹವಾಲು ಸಲ್ಲಿಸಲು ತಮಗೆ ಯಾವುದೇ ಅವಕಾಶ ನೀಡಿಲ್ಲ. ಇದು ಕಾನೂನು ಬಾಹಿರ ಕ್ರಮವಾಗಿದೆ. ಸರ್ಕಾರದ ಆದೇಶದಲ್ಲಿ ರಘುರಾಮ ಅವರು ಕುಟುಂಬ ಸದಸ್ಯರು (ಪೂರ್ವಜರು) 80 ಎಕರೆ ಜಮೀನನ್ನು ದೇವಾಲಯಕ್ಕೆ ದತ್ತಿಯಾಗಿ ನೀಡಿದ್ದರು ಎಂದು ಹೇಳಲಾಗಿದೆ. ಆದರೆ, ಜಮೀನು ದತ್ತಿಯಾಗಿ ನೀಡಿರುವುದರ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ. ಆದ್ದರಿಂದ. ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.