ಕನ್ನಡ ನಾಡು ಕಂಡ ಶ್ರೇಷ್ಠ ದಾರ್ಶನಿಕ ಸರ್ವಜ್ಞ: ಮಹೇಶ್‌ ಹರವೆ

| Published : Feb 21 2024, 02:02 AM IST

ಸಾರಾಂಶ

ಕನ್ನಡ ನಾಡು ಕಂಡ ಶ್ರೇಷ್ಠ ದಾರ್ಶನಿಕ ಸರ್ವಜ್ಞ ಎಂದು ಚಾಮರಾಜನಗರ ಜಿಲ್ಲೆಯ ಹರವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಮಹೇಶ್ ಹರವೆ ಹೇಳಿದರು.

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕನ್ನಡ ನಾಡು ಕಂಡ ಶ್ರೇಷ್ಠ ದಾರ್ಶನಿಕ ಸರ್ವಜ್ಞ ಎಂದು ಚಾಮರಾಜನಗರ ಜಿಲ್ಲೆಯ ಹರವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಮಹೇಶ್ ಹರವೆ ಹೇಳಿದರು. ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಸರ್ವಜ್ಞ ವೈಚಾರಿಕ ತ್ರಿಪದಿಗಳ ಚಕ್ರವರ್ತಿ, ಜನರ ನಡುವೆ ಬದುಕಿದ ಜನಪದ ವರಕವಿ ಸರ್ವಜ್ಞನಿಗಾಗಿ ಒಂದು ಗಾದೆ ಹುಟ್ಟಿಕೊಂಡಿರುವುದು ಒಂದು ವಿಶೇಷ ಏನೆಂದರೆ ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಹೇಳದ ಪದವಿಲ್ಲ, ಅಂದರೆ ಸರ್ವಜ್ಞ ಎಲ್ಲ ವಿಷಯಗಳನ್ನು ಬಲ್ಲವ ಎಂದರ್ಥ ಎಂದು ಹೇಳಿದರು. ಸರ್ವಜ್ಞ ಕವಿ ಮೂರು ಸಾಲಿನಲ್ಲಿ ಮಹಾಕಾವ್ಯಗಳ, ಮಹಾಗ್ರಂಥಗಳ ಸಾರವನ್ನು ಹಿಡಿದಿಟ್ಟಿದ್ದಾರೆ. ತುಳಸಿ ದಾಸರು ಹೇಳುವಂತೆ ಗಾಗರ್ವೆ ಸಾಗರ ಅಂದರೆ ಕೊಡದಲ್ಲಿ ಸಾಗರವನ್ನು ತುಂಬಿಸುವಂತೆ 3 ಸಾಲಿನ ಪದ್ಯದಲ್ಲಿ ಸರ್ವಜ್ಞ ಮಹಾ ಕವಿ ಜಗತ್ತಿನ ಜ್ಞಾನ, ವೈಚಾರಿಕತೆ, ಮಾನವೀಯ ಮೌಲ್ಯಗಳನ್ನು ತುಂಬಿಟ್ಟಿದ್ದಾನೆ. ಈ ಸಾಹಿತ್ಯದ ತ್ರಿಪದಿಗಳ ವಿಶೇಷ ವೇನೆಂದರೆ ಷಟ್ಪದಿ ರೂಪದಲ್ಲಿ ಛಂದಸ್ಸನ್ನು ಕಾಣುತ್ತೇವೆ. ಪ್ರತಿ ಸಾಲಿನ ಎರಡನೆ ಅಕ್ಷರ ಪ್ರಾಸವಾಗಿರುವುದು ಸರ್ವಜ್ಞನ ತ್ರಿಪದಿಗಳ ವಿಶೇಷ ಲಕ್ಷಣವಾಗಿದೆ. ಸರ್ವಜ್ಞನು ಚಿತ್ರ ತ್ರಿಪದಿ, ವಿಚಿತ್ರ ತ್ರಿಪದಿ, ಚಿತ್ರಲತೆ ತ್ರಿಪದಿ ಎಂಬ ಮೂರು ಪ್ರಕಾರದಲ್ಲಿ ತತ್ವ ಬೋಧಿಸಿರುವುದನ್ನು ಆತನ ವಚನಗಳಲ್ಲಿ ಕಾಣುತ್ತೇವೆ ಎಂದರು. ಸರ್ವಜ್ಞನು ನಾಲ್ಕು ಗೋಡೆ ಮಧ್ಯೆ ಪಾರಂಪರಿಕ ಮತ್ತು ಸಾಂಪ್ರದಾಯಿಕ ವಿಶಿಷ್ಟ ಶಿಕ್ಷಣ ಪಡೆಯದೆ ಜನಸಾಮಾನ್ಯರು, ಕಾರ್ಮಿಕರು, ರೈತರ ಮಧ್ಯೆ ಇದ್ದು, ಎಲ್ಲರೊಂದಿಗೆ ಬಾಳಿ ಬದುಕಿ ಮಹಾ ಜ್ಞಾನ ಪರ್ವತವೇ ಆಗಿದ್ದು ಒಂದು ವಿಶೇಷ ಎಂದು ತಿಳಿಸಿದರು. ನಮ್ಮ ಕನ್ನಡ ಸಾಹಿತ್ಯದಲ್ಲಿ ಒಂದಲ್ಲೊಂದು ರೀತಿಯಲ್ಲಿ ಕವಿಗಳು ರಾಜಾಶ್ರಯ, ಆಡಳಿತ, ಜನಪ್ರತಿನಿಧಿಗಳ ಓಲೈಕೆ ಮಾಡುವ ಸಾಹಿತ್ಯ ರಚಿಸಿರುವುದು ಅಲ್ಲಲ್ಲಿ ಕಂಡು ಬರುತ್ತದೆ. ಇದಕ್ಕೆ ಅಪವಾದವೆಂಬಂತೆ ಅನೇಕ ಕವಿಗಳು ಕನ್ನಡ ದಲ್ಲಿದ್ದಾರೆ. ಆದರೆ ರಾಜಾಶ್ರಯವನ್ನು ಧಿಕ್ಕರಿಸಿ ಜನಸಾಮಾನ್ಯರ ಮಧ್ಯೆ ಬದುಕಿ ಸಾಹಿತ್ಯ ಶ್ರೀಮಂತಗೊಳಿಸಿದ ಕೀರ್ತಿ ಸರ್ವಜ್ಞ ಕವಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಮಾಜದ ಶ್ರೇಷ್ಠ ಮನೋವಿಜ್ಞಾನಿಯಾಗಿ, ಸಮಾಜ ವಿಜ್ಞಾನಿಯಾಗಿ, ಒಬ್ಬ ಮಹಾ ವೈದ್ಯನಾಗಿ ಕೃಷಿಕನಾಗಿ, ಪಂಡಿತನಾಗಿ, ಒಬ್ಬ ಮಹಾ ತತ್ವ ಜ್ಞಾನಿಯಾಗಿ, ಯೋಗಿಯಾಗಿ, ಜನಪದ ಕವಿಯಾಗಿ ಹೀಗೆ ಅನೇಕ ಭೂಮಿಕೆಗಳಲ್ಲಿ ಸರ್ವಜ್ಞನನ್ನು ಕಾಣಬಹುದು. ಇತ್ತೀಚಿನ ಜಾಗತಿಕ ಪಿಡುಗಾದ ಜಾತಿ, ಮತ, ಧರ್ಮ ಸಂಘರ್ಷದ ನಾಶಕ್ಕೆ ಸರ್ವಜ್ಞ ವಚನಗಳು ದಿವ್ಯ ಜೌಷಧಿಗಳಾಗಿ ಕಂಡು ಬರುತ್ತವೆ. ವಿಶ್ವ ಮಾನವತೆ, ವಿಶ್ವ ಕುಟುಂಬ, ಮಾನವೀಯ ಮೌಲ್ಯಗಳ ನೆಲೆಗಟ್ಟನ್ನು ಆತನ ತ್ರಿಪದಿಯಲ್ಲಿ ಕಾಣಬಹುದು ಎಂದರು ತಿಳಿಸಿದರು. ಉಪ ವಿಭಾಗಾಧಿಕಾರಿಗಳ ಕಛೇರಿಯ ಉಪ ತಹಸೀಲ್ದಾರ್ ಶಾರದಾ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್, ತಾಲೂಕು ಕಚೇರಿಯ ಉಪ ತಹಸೀಲ್ದಾರ್ ರಾಮ್‌ರಾವ್ ದೇಸಾಯಿ ಹಾಗೂ ಕುಂಬಾರ ಸಮುದಾಯದ ಮುಖಂಡ ಅಶೋಕ್ ಉಪಸ್ಥಿತರಿದ್ದರು.20 ಕೆಸಿಕೆಎಂ 3ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಶಾರದಾ ಅವರು ಉದ್ಘಾಟಿಸಿದರು. ಅಶೋಕ್‌, ಮಹೇಶ್‌ ಹರವೆ ಇದ್ದರು.