ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಅಖಿಲ ಕೊಡವ ಸಮಾಜದ ಮುಂದಾಳತ್ವದಲ್ಲಿ ಕೊಡವಾಮೆ ಬಾಳೋ ಬೃಹತ್ ಪಾದಯಾತ್ರೆ ಮಡಿಕೇರಿಯಲ್ಲಿ ಶುಕ್ರವಾರ ಸಮಾವೇಶಗೊಂಡಿತು. ಆ ಮೂಲಕ ತಮ್ಮ ಸಂಸ್ಕೃತಿ ಹಾಗೂ ಅಸ್ತಿತ್ವದ ಉಳಿವಿಗೆ ಕೊಡವರು ಹಾಗೂ ಕೊಡವ ಭಾಷಿಕರು ಕೈಗೊಂಡ ಬಹುದೊಡ್ಡ ಪಾದಯಾತ್ರೆ ಎಂಬ ಇತಿಹಾಸವನ್ನು ಸೃಷ್ಟಿಸಿತು.ಕೊಡವಾಮೆ ಹಾಗೂ ಕೊಡವ ಸಂಸ್ಕೃತಿಯ ವಿರುದ್ಧ ನಿರಂತರ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆ ಸೇರಿದಂತೆ ಕೊಡವ ಭಾಷಿಕ ಸಮುದಾಯಗಳು ದಕ್ಷಿಣ ಕೊಡಗಿನಕುಟ್ಟದಿಂದ ಮಡಿಕೇರಿಯವರೆಗೆ ಪಾದಯಾತ್ರೆ ಕೈಗೊಂಡಿತ್ತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಎಲ್ಲಿ ನೋಡಿದರೂ ಕೊಡವರೇ ಕಂಡುಬಂದರು. ಮಡಿಕೇರಿ ತಾಲೂಕಿನ ಮೇಕೇರಿಯಿಂದ ಶುಕ್ರವಾರ ಬೆಳಗ್ಗೆ ಪಾದಯಾತ್ರೆ ಆರಂಭಗೊಂಡು ನಗರದ ಜನರಲ್ ತಿಮ್ಮಯ್ಯ ಮೈದಾನದ ಸಮೀಪದ ಮಂದ್ ನಲ್ಲಿ ಸಮಾವೇಶಗೊಂಡಿತು. ಪಾದಯಾತ್ರೆ ಸಾಗಿದ ದಾರಿಯುದ್ದಕ್ಕೂ ಎಲ್ಲಿ ನೋಡಿದರೂ ಕೊಡವರು ಹಾಗೂ ಕೊಡವ ಭಾಷಿಕರು ಕಂಡುಬಂದರು.ಜನರಲ್ ತಿಮ್ಮಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಮತ್ತೊಂದೆಡೆ ಸೋಮವಾರಪೇಟೆ, ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳಿಂದ ಸಾವಿರಾರು ಕೊಡವರು ಮತ್ತು ಕೊಡವ ಭಾಷಿಕರು ಆಗಮಿಸಿದರು. ಸುದರ್ಶನ್ ವೃತ್ತದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಒಂದು ಕಡೆ ಮೇಕೇರಿಯಿಂದ ಮತ್ತೊಂದು ಕಡೆ ಸುದರ್ಶನ ವೃತ್ತದಿಂದ ಕೊಡವರ ಹಾಗೂ ಕೊಡವ ಭಾಷಿಕರ ಬೃಹತ್ ಪಾದಯಾತ್ರೆ ಹೊರಟಿತು. ಮಡಿಕೇರಿಗೆ ಆಗಮಿಸುತ್ತಿದ್ದಂತೆ ಪಾದಯಾತ್ರಿಗಳನ್ನು ಪುಷ್ಪಾರ್ಚನೆ ಮಾಡಿ ಸ್ವಾಗತ ಮಾಡಲಾಯಿತು.ಕೊಡವ ಪುರುಷರು ಸಾಂಪ್ರದಾಯಿಕ ಉಡುಗೆ ಕುಪ್ಯೆ ಚಾಲೆ ಹಾಗೂ ಕೊಡವ ಮಹಿಳೆಯರು ಸಾಂಪ್ರದಾಯಿಕ ಸೀರೆಯಲ್ಲಿ ಪಾದಯಾತ್ರೆಯಲ್ಲಿ ಕಂಡುಬಂದರು. ವೃದ್ಧರು, ಮಕ್ಕಳು ಸೇರಿದಂತೆ ಪಾಲ್ಗೊಂಡರು.
ಕೊಡವ ಹಿರಿಯರು ಹಾಗೂ ಕೊಡವ ವೀರ ಹೋರಾಟಗಾರರ ಭಾವಚಿತ್ರಗಳನ್ನು ನಗರದ ಅಲ್ಲಲ್ಲಿ ಅಳವಡಿಸಲಾಗಿತ್ತು. ಪಾದಯಾತ್ರೆ ಸಾಗುವ ಕಡೆಗಳಲ್ಲಿ ಬಾಳೆ ಕಂಬಗಳು ಹಾಗೂ ತೋರಣಗಳು ಪಾದಯಾತ್ರಿಗಳನ್ನು ಸ್ವಾಗತಿಸಿತು.ರಸ್ತೆಯುದ್ದಕ್ಕೂ ಕೊಡವರು ಯಾವುದೇ ಆಕ್ರೋಶವಿಲ್ಲದೆ ಶಿಸ್ತಿನ ಹೆಜ್ಜೆಯನ್ನು ಹಾಕುವ ಮೂಲಕ ತಮ್ಮ ಹಕ್ಕಿಗಾಗಿ ಸರ್ಕಾರವನ್ನು ಒತ್ತಾಯಿಸಿದರು. ಪಾದಯಾತ್ರೆಯುದ್ದಕ್ಕೂ ವಿವಿಧ ಬೇಡಿಕೆಗಳ ಫಲಕಗಳನ್ನು ಹಿಡಿದು ಸಾಗಿದರು.
ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಸಮೀಪವಿರುವ ಕೋಲ್ ಮಂದ್ ನಲ್ಲಿ ಪಾದಯಾತ್ರೆ ಸಮಾವೇಶಗೊಂಡಿತು. ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಸಾವಿರಾರು ಕೊಡವರ ಪರವಾಗಿ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕೂಡ ಸೂಕ್ತ ಕ್ರಮ ಭರವಸೆ ನೀಡಿದರು. ನಂತರ ಪಾದಯಾತ್ರೆ ಅಂತ್ಯಗೊಂಡಿತು.ಬೃಹತ್ ಪಾದಯಾತ್ರೆಯ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 700ಕ್ಕೂ ಅಧಿಕ ಪೊಲೀಸರು ಪಾದಯಾತ್ರೆಯ ಬಂದೋಬಸ್ತ್ ನಲ್ಲಿ ತೊಡಗಿದ್ದರು.
ನಟಿ ಹರ್ಷಿಕಾ - ಭುವನ್ ಭಾಗಿಮಡಿಕೇರಿಯಲ್ಲಿ ಶುಕ್ರವಾರ ನಡೆದ ಬೃಹತ್ ಕೊಡವಾಮೆ ಬಾಳೋ ಪಾದಯಾತ್ರೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ತನ್ನ ಪತಿ ಭುವನ್ ಪೊನ್ನಣ್ಣ ಭಾಗವಹಿಸಿದ್ದರು.
ಹರ್ಷಿಕಾ ಪೂಣಚ್ಚ ಮಡಿಕೇರಿಯ ಟೋಲ್ ಗೇಟ್ ನಲ್ಲಿ ತಿಮ್ಮಯ್ಯ ಪ್ರತಿಮೆಗೆ ನಂದಾ ದೀಪ ಬೆಳಗಿದರು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹರಿದು ಬಂದ ಕೊಡವರೊಂದಿಗೆ ಹರ್ಷಿಕಾ ಪೂಣಚ್ಚ ಹೆಜ್ಜೆಹಾಕಿದರು. ಇದೊಂದು ಐತಿಹಾಸಿಕ ದಿನ. ನಮ್ಮ ಸಂಸ್ಕೃತಿ, ಉಡುಗೆ ತೊಡುಗೆಗಳಿಗಾಗಿ ನಡೆಯುತ್ತಿರುವ ಪಾದಯಾತ್ರೆ. ಇಡೀ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು. ಇಂತಹ ಪಾದಯಾತ್ರೆಯಲ್ಲಿ ಭಾಗವಹಿಸಿರುವುದು ಹೆಮ್ಮೆ ಎಂದು ಹರ್ಷಿಕಾ ಪೂಣಚ್ಚ ಹೇಳಿದರು.ಶಾಂತಿ ಕಾಪಾಡಲು ಕ್ರಮ : ಜಿಲ್ಲಾಧಿಕಾರಿ
ಪಾದಯಾತ್ರೆಯಲ್ಲಿ ಶಾಂತಿ ಕಾಪಾಡಿದವರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿನಂದನೆ ಸಲ್ಲಿಸಿದರು.ಜನರಲ್ ತಿಮ್ಮಯ್ಯ ಮೈದಾನದ ಮಂದ್ ನಲ್ಲಿ ಸೇರಿದ್ದ ಸಾವಿರಾರು ಕೊಡವರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪಾದಯಾತ್ರೆಯುದ್ದಕ್ಕೂ ಶಾಂತಿ. ಕಾನೂನು ಸುವ್ಯವಸ್ಥೆ ಕಾಪಾಡಿದ್ದೀರಿ. ಇದೇ ರೀತಿ ಮುಂದೆಯೂ ಕೊಡಗಿನಲ್ಲಿ ಶಾಂತಿ ಸಾಮರಸ್ಯ ನೆಲಸಲು ಸಹಕರಿಸಿ. ತಾವು ನೀಡಿದ ಮನವಿ ಪತ್ರವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಕ್ರಮ ತೆಗೆದುಕೊಳ್ಳುವುದಾಗಿ ಈ ಸಂದರ್ಭ ಜಿಲ್ಲಾಧಿಕಾರಿ ಭರವಸೆ ನೀಡಿದರು.6 ದಿನಗಳ ಪಾದಯಾತ್ರೆ ಅಂತ್ಯ
ಫೆ.2ರಂದು ದಕ್ಷಿಣ ಕೊಡಗಿನ ಕುಟ್ಟದಿಂದ ಆರಂಭವಾಗಿ 6 ದಿನಗಳ ಕಾಲ ಯಶಸ್ವಿಯಾಗಿ ನಡೆದ ಪಾದಯಾತ್ರೆ ಮಡಿಕೇರಿಯಲ್ಲಿ ಅಂತ್ಯಗೊಂಡಿತು. ಪಾದಯಾತ್ರೆಯುದ್ದಕ್ಕೂ ನಿರೀಕ್ಷೆಗೂ ಮೀರಿದ ಜನಸ್ಪಂದನ ದೊರಕಿತ್ತು ಎಂದು ಆಯೋಜಕರು ಹೇಳಿದರು.ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಅನೇಕ ಕೊಡವ ಸಂಘಟನೆಗಳ ಸಹಕಾರದಲ್ಲಿ ಕೊಡವರ ಮತ್ತು ಕೊಡವ ಭಾಷಿಕರ ಒಗ್ಗಟ್ಟಿಗೆ ಪಾದಯಾತ್ರೆ ಕಾರಣವಾಯಿತು ಎಂದು ತಿಳಿಸಿದರು.
ಪೊಲೀಸ್ ಮಾಹಿತಿ ಪ್ರಕಾರ ಪಾದಯಾತ್ರೆಯಲ್ಲಿ ಸುಮಾರು 25 ಸಾವಿರ ಮಂದಿ ಭಾಗವಹಿಸಿದ್ದರು ಎನ್ನಲಾಗುತ್ತಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಮಾವೇಶಗೊಂಡ ಪಾದಯಾತ್ರೆಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಮೂಲಕ ಆರು ದಿನಗಳ ಕಾಲ ನಡೆದ ಕೊಡವರ ಕೊಡವಾಮೆ ಬಾಳೋ ಪಾದಯಾತ್ರೆ ಮುಕ್ತಾಯಗೊಂಡಿತು.ಕೊಡವರ ಪ್ರಮುಖ ಬೇಡಿಕೆಗಳು
*ಕೊಡವ ಜನಾಂಗದ ಸಂವಿಧಾನಬದ್ಧವಾದ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಿ ಕೊಡವರ ನೆಲ, ಜಲ, ಸಂಸ್ಕೃತಿ, ಪರಂಪರೆ, ಧಾರ್ಮಿಕ ಆಚರಣೆ ಹಾಗೂ ಸಾಮಾಜಿಕ ಭದ್ರತೆಗೆ ಸೂಕ್ತ ಸಂವಿಧಾನಾತ್ಮಕ ಕ್ರಮ ಕೈಗೊಳ್ಳಬೇಕು.*ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿಯ ವಿನಾಯಿತಿಯ ವಿಶೇಷ ಹಕ್ಕನ್ನು ಅಭಾದಿತವಾಗಿ ಮುಂದುರೆಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
*ಕೊಡವ ಸಮುದಾಯದವರ ಮೇಲೆ ಪ್ರಬಲ ಜನಾಂಗಗಳು ರಾಜಕೀಯ ಪ್ರಭಾವವನ್ನು ಬಳಸಿ ನಡೆಸುತ್ತಿರುವ ದಬ್ಬಾಳಿಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು.*ಕೊಡವರ ಸಂಸ್ಕೃತಿ, ಸಂಪ್ರದಾಯ, ಉಡುಗೆ, ಆಭರಣ ಬಳಕೆ ಹಾಗೂ ಇವುಗಳನ್ನು ಬಳಸಿ ಕೊಡವರ ಭಾವನೆಗಳಿಗೆ ನಿರಂತರವಾಗಿ ಪ್ರಚೋದಿಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
*ಕೊಡವರು ಎಂಬ ಕಾರಣಕ್ಕೆ ಫೀ.ಮಾ.ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರನ್ನು ಅವಮಾನಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಂಡು ಗಡಿಪಾರು ಮಾಡಬೇಕು.*ತಲಕಾವೇರಿಯಲ್ಲಿ ಕೊಡವರ ಭಾಗವಹಿಸುವಿಕೆಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಆಗಬೇಕು.
*ಕೊಡವರಿಗೆ ಹಾಗೂ ಕೊಡವ ಸಂಸ್ಕೃತಿಗೆ ಕೊಡಗಿನ ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ಅವಮಾನ ಆಗದಂತೆ ಸೂಕ್ತ ಕ್ರಮ ಜರುಗಿಸಬೇಕು.*ಕಟ್ಟೆಮಾಡು ದೇವಾಲಯದಲ್ಲಿ ವಸ್ತ್ರದ ವಿಚಾರವಾಗಿ ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸಲು ಕಾರಣವಾದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು.
*ಕಟ್ಟೆಮಾಡು ದೇವಾಲಯದ ವಾರ್ಷಿಕ ಉತ್ಸವ ಸಂದರ್ಭದಲ್ಲಿ ಕೊಡವರ ಉಡುಗೆಯನ್ನು ನಿರ್ಬಂಧಿಸಲು ಯತ್ನಿಸಿದ ಹಾಗೂ ಕೊಡವರ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು.ಸೂಕ್ತ ಕ್ರಮ ತೆಗೆದುಕೊಳ್ಳುವವರೆಗೂ ಶಾಂತಿ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ
ಕಟ್ಟೆಮಾಡು ದೇವಾಲಯದ ಪ್ರಕರಣದಲ್ಲಿ ಕೊಡವರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕೊಡವ ಸಮುದಾಯವು ಯಾವುದೇ ಸಂಧಾನ ಸಭೆ ಹಾಗೂ ಶಾಂತಿ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹೇಳಿದರು.ಕೊಡವಾಮೆ ಬಾಳೋ ಪಾದಯಾತ್ರೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ಮಾತನಾಡಿದ ಅವರು, ಕೊಡವರು ಹಾಗೂ ಕೊಡವ ಸಂಸ್ಕೃತಿಯನ್ನು ಅನುಸರಿಸುವ, ಕೊಡವ ಭಾಷೆ ಮಾತನಾಡುವ ಇತರೆ ಮೂಲ ನಿವಾಸಿ ಸಮುದಾಯಗಳನ್ನು ನಿರ್ಬಂಧಿಸುವ ಉದ್ದೇಶದಿಂದಲೇ, ಕಟ್ಟೆಮಾಡುವಿನ ಮಹಾದೇವರ ದೇವಸ್ಥಾನವನ್ನು ಮೃತ್ಯುಂಜಯ ದೇವಾಲಯ ಎಂದು ಸುಳ್ಳು ನಾಮಕಾರಣ ಮಾಡುವ ಮೂಲಕ ದೇವಸ್ಥಾನದ ಪಾವಿತ್ರ್ಯತೆಯನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಉದ್ದೇಶ ಪೂರ್ವಕವಾಗಿ ಜನಾಂಗಗಳ ನಡುವೆ ವಿಷ ಬೀಜವನ್ನು ಬಿತ್ತಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮೂಲ ಕಾರಣರಾದ ದೇವಾಲಯದ ಅರ್ಚಕರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.ಪಂಜೆ ಮಂಗೇಶರಾಯರು ಕೊಡವರ ಸಮಗ್ರ ಅಸ್ತಿತ್ವವನ್ನು ತಮ್ಮ ಹಾಡಿನಲ್ಲಿ ಅನಾವರಣ ಮಾಡಿದ್ದಾರೆ. ಆದರೆ ಇಂದು ಕೊಡವ ಸಮುದಾಯ ತನ್ನ ತಾಯಿ ನೆಲದಲ್ಲಿ ದಬ್ಬಾಳಿಕೆಯನ್ನು ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಕೊಡವರ ಬಗ್ಗೆ ಮಲತಾಯಿ ಧೋರಣೆ ನಡೆಸಿದೆ. ಕೊಡವರ ಮೇಲೆ ನಿರಂತರವಾಗಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕವಾಗಿ ದಬ್ಬಾಳಿಕೆಗಳು ನಡೆಯುತ್ತಿದೆ. ಇತ್ತೀಚಿನ ವರ್ಷದಲ್ಲಿ ಒಂದು ವರ್ಗಕ್ಕೆ ಸೇರಿದ ಕೆಲವು ಕಿಡಿಗೇಡಿಗಳು ಕೊಡವರ ಹಾಗೂ ಸೇನಾನಿಗಳ ಬಗ್ಗೆ ಅವಹೇಳನ ನಿರಂತರವಾಗಿ ಮಾಡುತ್ತಿದ್ದಾರೆ ಇಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.ಕೆಲವು ಕಿಡಿಗೇಡಿಗಳು ಕೊಡವರು ಕೋವಿ ಹಕ್ಕಿನ ಕಸಿಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅಲ್ಲದೆ ಕೊಡವರ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿದೆ. ಅಲ್ಲದೇ ಸಂಬಂಧವೇ ಇಲ್ಲದ ಸುಳ್ಳು ಇತಿಹಾಸವನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ಪಾದಯಾತ್ರೆಯಲ್ಲಿ ಸಾಂಪ್ರದಾಯಿಕ ನೃತ್ಯ!ಕೊಡವಾಮೆ ಬಾಳೋ ಅಂತಿಮ ದಿನದ ಪಾದಯಾತ್ರೆಯಲ್ಲಿ ಕೊಡವರ ಸಾಂಪ್ರದಾಯಿಕ ನೃತ್ಯ ಗಮನ ಸೆಳೆಯಿತು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ವೃತ್ತದಲ್ಲಿ ಕೊಡವ ಮಹಿಳೆಯರು ಉಮ್ಮತ್ತಾಟ್ ನೃತ್ಯ ಮಾಡಿ ಗಮನ ಸೆಳೆದರೆ, ಪುರುಷರು ಬಾಳೋ ಪಾಟ್, ಚೌರಿ ಆಟ್ ನೃತ್ಯ ಮಾಡಿದರು. ಇದಲ್ಲದೆ ಹಿರಿಯರು ದುಡಿ ಕೊಟ್ಟ್ ಹಿಡಿದು ಪಾದಯಾತ್ರೆಯಲ್ಲಿ ಸಾಗಿದರು. ಅಲ್ಲದೆ ಕೊಡವರ ಸಾಂಪ್ರದಾಯಿಕ ವಾಲಗ ಪಾದಯಾತ್ರೆಯನ್ನು ಮುನ್ನಡೆಸಿತು. ವಾಲಗಕ್ಕೆ ಕುಣಿದು ಸಂಭ್ರಮಿಸುವ ಮೂಲಕ ಕೊಡವರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.