ಅ.4ರಿಂದ 7ರವರೆಗೆ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವ

| Published : Oct 02 2024, 01:03 AM IST

ಸಾರಾಂಶ

ಈ ಬಾರಿ ಹಲವು ವಿಶೇಷತೆಗಳೊಂದಿಗೆ ಪಾರಂಪರಿಕಾ ದಸರಾ ಆಚರಣೆಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅ.4 ರಂದು ಮಧ್ಯಾಹ್ನ 2.30ಕ್ಕೆ ಕಿರಂಗೂರು ಬಳಿಯ ಬನ್ನಿಮಂಟಪ ಬಳಿ ಚಿತ್ರನಟ ಶಿವರಾಜ್‌ ಕುಮಾರ್ ಜಂಬೂ ಸವಾರಿ, ವಿವಿಧ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಎಲ್.ವಿ.ನವೀನ್ ಕುಮಾರ್

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣದಲ್ಲಿ ಅ.4ರಿಂದ 7ರವರೆಗೆ ನಡೆಯಲಿರುವ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಹಿರಿಯ ನಟ ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ. ದಸರಾ ಅಂಗವಾಗಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ ಮತ್ತು ಆಹಾರ ಮೇಳ ಸೇರಿದಂತೆ ವಿಶೇಷ ಆಕರ್ಷಣೆಯ ಕಾರ್ಯಕ್ರಮಗಳನ್ನು ನಡೆಸಲು ವೇದಿಕೆ ಸಿದ್ಧಗೊಳ್ಳುತ್ತಿದೆ.

ಈ ಬಾರಿ ಹಲವು ವಿಶೇಷತೆಗಳೊಂದಿಗೆ ಪಾರಂಪರಿಕಾ ದಸರಾ ಆಚರಣೆಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅ.4 ರಂದು ಮಧ್ಯಾಹ್ನ 2.30ಕ್ಕೆ ಕಿರಂಗೂರು ಬಳಿಯ ಬನ್ನಿಮಂಟಪ ಬಳಿ ಚಿತ್ರನಟ ಶಿವರಾಜ್‌ ಕುಮಾರ್ ಜಂಬೂ ಸವಾರಿ, ವಿವಿಧ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಜಂಬೂ ಸವಾರಿಯಲ್ಲಿ ಮಹೇಂದ್ರ (ಅಂಬಾರಿ ಆನೆ) ಹಿರಣ್ಯ, ಲಕ್ಷ್ಮಿ ಆನೆಗಳು ಭಾಗವಹಿಸಲಿದ್ದು, ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಯ ಅಗ್ರಪೂಜೆ ನಂತರ ಸ್ತಬ್ಧ ಚಿತ್ರ, ಸ್ಥಳೀಯ ಕಲಾ ತಂಡಗಳೊಂದಿಗೆ ಜಂಬೂ ಸವಾರಿ ಮೆರವಣಿಗೆ ಬೆಂಗಳೂರು- ಮೈಸೂರು ಹೆದ್ದಾರಿ ಮೂಲಕ ಪಟ್ಟಣಕ್ಕೆ ಹೊರಡಲಿದೆ.

ಇದಕ್ಕೂ ಮುನ್ನ ಮಧ್ಯಾಹ್ನ 12.300ಕ್ಕೆ ನಂದಿಧ್ವಜ ಪೂಜೆ, ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎನ್.ಚಲುವರಾಯಸ್ವಾಮಿ, ಸ್ಥಳೀಯ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಸಚಿವರು, ಶಾಸಕರು, ಕಿರಂಗೂರು ಗ್ರಾಪಂ ಅಧ್ಯಕ್ಷೆ ಎಚ್.ಪಿ. ಶೃತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ 6 ಗಂಟೆಗೆ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ದಸರಾ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ನಂತರ ಶ್ರೀರಂಗ ವೇದಿಕೆಯಲ್ಲಿ ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಇದಕ್ಕೂ ಮುನ್ನ ಬೆಳಗ್ಗೆ 7 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ.

ಅ.5 ರಂದು ಬೆಳಗ್ಗೆ 7 ಗಂಟೆಗೆ ಕರಿಘಟ್ಟ ದೇವಸ್ಥಾನದ ಪಾದದಿಂದ ದೇವಸ್ಥಾನದ ಮೇಲ್ಭಾಗದವರೆಗೆ ಬೆಟ್ಟ ಹತ್ತುವ ಸ್ಪರ್ಧೆ (ಚಾರಣ) ಏರ್ಪಡಿಸಲಾಗಿದೆ. ಮಧ್ಯಾಹ್ನ ೨ ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ಜಿಲ್ಲಾ ಕಸಾಪದಿಂದ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಲಾತಂಡಗಳು, ಸಂಜೆ 7 ಗಂಟೆಯಿಂದ ಖ್ಯಾತ ಹಿನ್ನೆಲೆ ಗಾಯಕ ವಿಜಯ್‌ಪ್ರಕಾಶ್ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ಅ.6ರಂದು ಬೆಳಗ್ಗೆ 6 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ, 10 ಗಂಟೆಗೆ ಶ್ರೀರಂಗಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಗ್ಗ ಜಗ್ಗಾಟ, ಮಧ್ಯಾಹ್ನ 2 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ಜಿಲ್ಲಾ ಕಸಾಪದಿಂದ ವಿಚಾರಗೋಷ್ಠಿ, ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಲಾ ತಂಡಗಳಿಂದ, ಸಂಜೆ 7ರಿಂದ ಹಿನ್ನೆಲೆ ಗಾಯಕರಾದ ಆಲ್‌ಓಕೆ ಮತ್ತು ತಂಡದಿಂದ ಹಾಗೂ ಹಿನ್ನೆಲೆ ಗಾಯಕರಾದ ಲಗೋರಿ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಅ.7ರಂದು ಮಧ್ಯಾಹ್ನ 3 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯ, ಮಧ್ಯಾಹ್ನ 3 ಗಂಟೆಗೆ ವೇದಿಕೆಯಲ್ಲಿ ಸ್ಥಳೀಯ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ಸಮಾರೋಪ ಸಮಾರಂಭದ ನಂತರ ಅರ್ಜುನ್ ಜನ್ಯ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪ್ರತಿದಿನ ಸಿನಿಮೋತ್ಸವ:

ಅ.5,6 ಮತ್ತು 7 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಗಂಜಾಂನ ಶ್ರೀದೇವಿ ಚಿತ್ರಮಂದಿರ, ಬಾಬುರಾಯನ ಕೊಪ್ಪಲಿನ ಭಾರತಿ ಚಿತ್ರಮಂದಿರ ಹಾಗೂ ಅರಕೆರೆಯ ಮಂಜುನಾಥ್ ಚಿತ್ರಮಂದಿರಗಳಲ್ಲಿ ಸಿನಿಮೋತ್ಸವ ನಡೆಯಲಿದೆ.

ಅ.4 ರಿಂದ 7ರ ವರೆಗೆ ಬೆಳಗ್ಗೆಯಿಂದ ರಾತ್ರಿವರೆಗೆ ಕರಕುಶಲ ಸಾಮಗ್ರಿಗಳು, ಗುಡಿ ಕೈಗಾರಿಕಾ ಸಾಮಗ್ರಿಗಳು, ರಾಸಾಯನಿಕ ಮತ್ತು ಬೆಲ್ಲ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಯೋಜನೆ ಮತ್ತು ಮಾಹಿತಿಗಳ ಪ್ರದರ್ಶನ, ಮಂಡ್ಯ ಜನಪರ ಶೈಲಿಯ ಮೇಲುಕೋಟೆ ಪುಳಿಯೊಗರೆ, ಬೆಲ್ಲದ ಕಡುಬು, ಬೆಲ್ಲದ ಹೋಳಿಗೆ ಮತ್ತು ಬೆಲ್ಲದ ಖಾದ್ಯಗಳು ಹಾಗೂ ಕರ್ನಾಟಕದ ಪ್ರಸಿದ್ಧ ಖಾದ್ಯಗಳ ಅನಾವರಣ ನಡೆಯಲಿದೆ.

ದಸರಾ ಆಚರಣೆ ಹಿನ್ನೆಲೆ:

ಮೈಸೂರು ಒಡೆಯರ್ ಅವರು 1610ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಮೊದಲ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಿಸಲು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿ ಇದ್ದ ಅರಮನೆ ಆವರಣದಲ್ಲಿ ದಸರಾ ಆಚರಣೆ 10 ದಿನ ನಡೆಯುತ್ತಿತ್ತು. ಮಹಾರಾಜರೇ ಖುದ್ದು ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು.

ವಿಜಯದಶಮಿಯಂದು ಅರಮನೆಯಿಂದ ರಾಜಧಾನಿಗೆ ಪೂರ್ವಭಾಗದಲ್ಲಿದ್ದ ಬನ್ನಿಮಂಟಪದ ವರೆಗೆ ಉತ್ಸವ ನಡೆಯುತ್ತಿತ್ತು. ಆನೆ ಮೇಲೆ ಚಾಮುಂಡೇಶ್ವರಿ ದೇವಿ ಚಿನ್ನದ ವಿಗ್ರಹ ಇರಿಸಿ ಮೆರವಣಿಗೆ ಮಾಡಲಾಗುತ್ತಿತ್ತು. ಸುತ್ತ ಮುತ್ತಲಿನ ಜನರು ಉತ್ಸವ ನೋಡಲು ಆಗಮಿಸುತ್ತಿದ್ದರು. ಒಂದೆಡೆ ಧಾರ್ಮಿಕ ಕೈಂಕರ್ಯ, ಮತ್ತೊಂದೆಡೆ ಮೃಷ್ಟಾನ್ನ ಭೋಜನ ಕಾರ್ಯಕ್ರಮ ನಡೆಯುತ್ತಿತ್ತು.

ಕಾವೇರಿ ನದಿ ದಡಕ್ಕೆ ಆಯುಧಗಳನ್ನು ಕೊಂಡೊಯ್ದು ಪೂಜೆ ಸಲ್ಲಿಸಲಾಗುತ್ತಿತ್ತು. ನಂತರ ಅರಮನೆ ಪಕ್ಕದ ವಸಂತಕೊಳದಲ್ಲಿ ಮಜ್ಜನ ನಡೆಸಿ ಕಸ್ತೂರಿ, ಸಾಮ್ರಾಣಿ, ಪನ್ನೀರುಗಳಿಂದ ಸಿಂಪಡಿಸುತ್ತಿದ್ದರು. ಅರಮನೆ ಆವರಣ ಸೇರಿದಂತೆ ಪಟ್ಟಣವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತಿತ್ತು ಎಂಬ ವಿಷಯಗಳನ್ನು ಕವಿ ಗೋವಿಂದ ವೈದ್ಯ ಕಂಠೀರವ ನರಸರರಾಜ ವಿಜಯಂ ಕೃತಿಯಲ್ಲಿ ವರ್ಣಿಸಿದ್ದಾರೆ.