ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಸ್ವಾಮೀಜಿಗಳು, ಮಠಗಳ ಕೊಡುಗೆಯೂ ಇದೆ. ಎಲೆಮರೆ ಕಾಯಿಯಂತೆ ಸ್ವಾಮೀಜಿಗಳು ಅನೇಕ ಪುಸ್ತಕಗಳನ್ನು ಹೊರತಂದಿದ್ದಾರೆ. ಮಠಗಳೂ ಕೂಡ ನಿರಂತರವಾಗಿ ಪುಸ್ತಕ ಪ್ರಕಟಣೆ ಮಾಡುತ್ತಿವೆ. ಅಂದ ಮೇಲೆ ಸ್ವಾಮೀಜಿಗಳೂ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲವೇ ಎಂದು ಬೇಬಿಮಠದ ಪೀಠಾಧಿಪತಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಪ್ರಶ್ನಿಸಿದರು.ಸಾಹಿತ್ಯ ಎಂದರೆ ಅರಿವು, ಜ್ಞಾನ ಎಂದರ್ಥ. ಮಠಾಧೀಶರೂ ಕೂಡ ತಮ್ಮಲ್ಲಿರುವ ಜ್ಞಾನವನ್ನು ಎಲ್ಲೆಡೆ ಹಂಚುತ್ತಿದ್ದಾರೆ. ಹನ್ನೆರಡನೇ ಶತಮಾನದಲ್ಲಿದ್ದ ಶರಣರು ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಪುಟ್ಟರಾಜ ಗವಾಯಿ, ಸಿದ್ದೇಶ್ವರ ಸ್ವಾಮೀಜಿ, ಶ್ರೀಸಿದ್ಧಗಂಗಾಶ್ರೀಗಳು ಸೇರಿದಂತೆ ಅನೇಕರಿಂದಲೂ ಕನ್ನಡ ಸಾರಸ್ವತ ಲೋಕ ಬೆಳವಣಿಗೆ ಸಾಧಿಸಿದೆ. ಈಗಿನ ಅನೇಕ ಸ್ವಾಮೀಜಿಗಳೂ ಉದಾತ್ತ ಜ್ಞಾನವನ್ನು ಹೊಂದಿದ್ದಾರೆ. ಅವರನ್ನೂ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದರಿಂದ ಅವರಲ್ಲಿರುವ ಸಾಹಿತ್ಯ ಜ್ಞಾನವನ್ನೂ ಹೊರತಂದಂತಾಗುತ್ತದೆ ಎಂದರು.
ಸ್ವಾಮೀಜಿಗಳನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವಾಗಲೂ ಒಂದು ಅಪಾಯವಿದೆ. ಜಾತಿ, ಮತ, ಪಂಗಡ, ಲಾಭಿ, ಪ್ರಭಾವ ಇವೆಲ್ಲವನ್ನೂ ದೂರವಿಟ್ಟು ನಿಜವಾದ ಜ್ಞಾನಿಗಳನ್ನು ಹುಡುಕಿ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಅಂತಹದೊಂದು ಮಹತ್ವದ ಪರಂಪರೆ ಮಂಡ್ಯದಿಂದಲೇ ಆರಂಭವಾಗಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಠಗಳ ಒಳಗೊಳ್ಳುವಿಕೆ ಇಲ್ಲ:
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಮಾದರಿಯಲ್ಲಿ ಮಠಗಳನ್ನು ಪರಿಗಣಿಸುವ ಸಂಪ್ರದಾಯ ದಕ್ಷಿಣ ಕರ್ನಾಟಕದಲ್ಲಿ ಇಲ್ಲ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವಾಗಲೂ ಮಠ-ಮಠಾಧಿಪತಿಗಳನ್ನು ಪರಿಗಣಿಸುವುದಿಲ್ಲ. ಮಠಗಳನ್ನು ದೂರವಿಡುವುದಕ್ಕೆ ಕಾರಣವೇನು ಎಂಬುದು ನಮಗೂ ಗೊತ್ತಿಲ್ಲ ಎಂದು ವಿಷಾದಿಸಿದರು.ಸಾಹಿತ್ಯ ಸಮ್ಮೇಳನ, ನುಡಿಜಾತ್ರೆ ಎನ್ನುವುದು ಎಲ್ಲರ ಹಬ್ಬ. ಸಾಹಿತಿಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಮಠಗಳನ್ನೂ ಒಳಗೊಂಡು ಸಮ್ಮೇಳನ ನಡೆಸಿದಾಗ ಅನ್ನ ದಾಸೋಹ, ಆಶ್ರಯ, ಮಠದ ಸಂಪರ್ಕದಲ್ಲಿರುವ ಸಾಹಿತ್ಯಾಸಕ್ತರು, ವಿದೇಶದಲ್ಲಿರುವ ಕನ್ನಡಿಗರನ್ನೂ ಕರೆತರುವುದು ಸೇರಿದಂತೆ ಇನ್ನಿತರ ಜವಾಬ್ದಾರಿಗಳನ್ನು ಶಕ್ತಾನುಸಾರ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.
ಪ್ರೀತಿಸುವ ಶಿಕ್ಷಣವಿಲ್ಲ:ಇಂದಿನ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಶಿಕ್ಷಣ ಕೊಡಬೇಕು. ನಮ್ಮಲ್ಲಿ ತಂದೆ-ತಾಯಿಯರನ್ನು, ಗುರು-ಹಿರಿಯರನ್ನು ಪ್ರೀತಿಸುವ ಶಿಕ್ಷಣವೇ ಇಲ್ಲ. ಎಲ್ಲರನ್ನು ಪ್ರೀತಿಸುವ ಶ್ರೇಷ್ಠತೆಯ ಗುಣವನ್ನು ಮಕ್ಕಳಲ್ಲಿ ತುಂಬಬೇಕು. ಅಂತಹ ವಿಷಯಗಳನ್ನೇ ಪಠ್ಯದಲ್ಲಿ ಅಳವಡಿಸುವ ಆಲೋಚನೆಗಳು ಯಾರಲ್ಲೂ ಇದ್ದಂತಿಲ್ಲ. ಶಾಲೆಯಲ್ಲಿ ಕಲಿಯುವುದಷ್ಟೇ ಶಿಕ್ಷಣವಲ್ಲ, ಶಾಲೆಯಿಂದ ಹೊರಗಿರುವ ಜೀವನ ಶಿಕ್ಷಣವೇ ಬಹಳ ದೊಡ್ಡದು ಎಂದು ಅಭಿಪ್ರಾಯಿಸಿದರು.
ಕನ್ನಡದ ಶರಣರು, ಸಂತರು ಸೇರಿದಂತೆ ಅನೇಕ ದಾಸಸಾಹಿತಿಗಳ ಪರಿಚಯವೇ ಈಗಿನ ಮಕ್ಕಳಿಗಿಲ್ಲ. ಮಕ್ಕಳಿಗೆ ಬೇಕಾದ ಶಿಕ್ಷಣವನ್ನೇ ನಾವು ನೀಡದೆ ಕೇವಲ ಪುಸ್ತಕದ ಹುಳುಗಳನ್ನಾಗಿ ಮಾಡುತ್ತಿದ್ದೇವೆ. ಸಾಮಾನ್ಯ ಜ್ಞಾನ, ನೈತಿಕತೆಯ ಶಿಕ್ಷಣದಿಂದ ಅವರನ್ನು ದೂರವಿಡಲಾಗುತ್ತಿದೆ. ಇಂದಿನ ಶಿಕ್ಷಣ ಉದ್ಯೋಗ ಸಂಪಾದನೆಗೆ ಸೀಮಿತವಾಗಿದೆಯೇ ವಿನಃ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿಲ್ಲ ಎಂದು ನುಡಿದರು.ಸಂವಾದದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ, ಉಪಾಧ್ಯಕ್ಷ ನವೀನ್‌ಕುಮಾರ್ ಇದ್ದರು.
ಸ್ವಾಮೀಜಿಗಳಿಂದ ರಾಜಕೀಯ ತುಷ್ಠೀಕರಣ ಸರಿಯಲ್ಲಧರ್ಮ ಎನ್ನುವುದು ಶೋಷಣೆಯಲ್ಲ. ಪೋಷಣೆ ಮಾಡುವುದು. ಕರುಣೆ, ಪ್ರೀತಿ, ದಯೆ ಎಲ್ಲವನ್ನೂ ಧರ್ಮ ಒಳಗೊಂಡಿರಬೇಕು. ಸಮಾಜಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು. ಮತ-ಪಂಥಗಳನ್ನು ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಆಗ ಮಠಗಳ ಮೇಲೆ ಜನರಿಗೆ ನಂಬಿಕೆ, ವಿಶ್ವಾಸ ಉಳಿಯುತ್ತದೆ ಎಂದರು.
ಸ್ವಾಮೀಜಿಗಳು ರಾಜಕೀಯ ತುಷ್ಠೀಕರಣ ಮಾಡುವುದು ಸರಿಯಲ್ಲ. ಯಾವುದೋ ಒಂದು ಜಾತಿಗೆ ಸೀಮಿತವಾದ ರಾಜಕೀಯ ನಾಯಕರ ಪರವಾಗಿಯೂ ಇರಬಾರದು. ಅದು ಒಳ್ಳೆಯ ಬೆಳವಣಿಗೆಯೂ ಅಲ್ಲ. ನಾವು ನಾವಾಗಿದ್ದರಷ್ಟೇ ಗೌರವ, ಮನ್ನಣೆ ಇರುತ್ತದೆ ಎಂದು ಹೇಳಿದರು.ಕನ್ನಡದ ಬೆಳವಣಿಗೆ ಕುಂಠಿತಕ್ಕೆ ಒಗ್ಗಟ್ಟಿನ ಕೊರತೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಪರಿಣಾಮಕಾರಿಯಾಗಿ ಜಾರಿಯಾಗದಿರುವುದಕ್ಕೆ ಒಗ್ಗಟ್ಟಿನ ಕೊರತೆಯೇ ಕಾರಣ. ಎಲ್ಲೆಡೆ ಸ್ವಾರ್ಥ ಹೆಚ್ಚಿದೆ. ಪ್ರಸ್ತುತ ದಿನಗಳಲ್ಲಿ ರಾಜಕೀಯ, ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲೂ ಒಗ್ಗಟ್ಟಿಲ್ಲ. ಇದರ ಪರಿಣಾಮ ಕನ್ನಡ ಭಾಷೆ ಬೆಳವಣಿಗೆ ಕಾಣುತ್ತಿಲ್ಲ. ಭಾಷೆ ಅಭಿವೃದ್ಧಿಗೆ ಕೈಗೊಳ್ಳುವ ನಿರ್ಣಯಗಳು ಜಾರಿಯಾಗುತ್ತಿಲ್ಲ. ಕನ್ನಡಿಗರು ಶೋಷಣೆಗೆ ಒಳಗಾಗಿದ್ದಾರೆ. ಉದ್ಯೋಗದಲ್ಲಿ ಸಿಗಬೇಕಾದ ಸ್ಥಾನ-ಮಾನಗಳು ದೊರಕುತ್ತಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು.ಸ್ವಾಮೀಜಿಗಳು ಮತ್ತು ರಾಜಕಾರಣಿಗಳ ನಡುವೆ ನಿಕಟ ಸಂಬಂಧವಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ವಾಸ್ತವದಲ್ಲಿ ಸ್ವಾಮೀಜಿಗಳ ಮಾತನ್ನು ರಾಜಕಾರಣಿಗಳು ಸ್ವೀಕರಿಸುವುದಿಲ್ಲ. ಭಾಷೆಯ ಬೆಳವಣಿಗೆಗೆ ಸಂಬಂಧ ನಾವೂ ಅನೇಕ ಬಾರಿ ಆಡಳಿತ ನಡೆಸುವವರ ಗಮನಸೆಳೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.