ಇಲಾಖೆ ನಿರ್ಲಕ್ಷ್ಯಕ್ಕೆ ಐತಿಹಾಸಿಕ ಕುರುಹುಗಳ ಬಲಿ !

| Published : May 24 2025, 12:15 AM IST

ಇಲಾಖೆ ನಿರ್ಲಕ್ಷ್ಯಕ್ಕೆ ಐತಿಹಾಸಿಕ ಕುರುಹುಗಳ ಬಲಿ !
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಪ್ರದೇಶದ ಇತಿಹಾಸ ತಿಳಿಯಬೇಕೆಂದರೆ ಆ ಸ್ಥಳದ ಶಾಸನಗಳು ಬಹಳ ಮುಖ್ಯವಾಗುತ್ತದೆ. ಇವುಗಳ ಸಂರಕ್ಷಣೆಗೆಂದೇ ಒಂದು ಇಲಾಖೆಯಿದೆ.ಆದರೆ, ಪಟ್ಟಣ ಸೇರಿದಂತೆ ಇತರೆಡೆ ಇಂತಹ ಶಾಸನ, ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಇಲ್ಲದೆ ಎಲ್ಲೆಂದರಲ್ಲಿ ಬಿದ್ದು ಹಾಳಾಗುತ್ತಿವೆ.

ಡಾ.ಸಿ.ಎಂ.ಜೋಶಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಒಂದು ಪ್ರದೇಶದ ಇತಿಹಾಸ ತಿಳಿಯಬೇಕೆಂದರೆ ಆ ಸ್ಥಳದ ಶಾಸನಗಳು ಬಹಳ ಮುಖ್ಯವಾಗುತ್ತದೆ. ಇವುಗಳ ಸಂರಕ್ಷಣೆಗೆಂದೇ ಒಂದು ಇಲಾಖೆಯಿದೆ.ಆದರೆ, ಪಟ್ಟಣ ಸೇರಿದಂತೆ ಇತರೆಡೆ ಇಂತಹ ಶಾಸನ, ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಇಲ್ಲದೆ ಎಲ್ಲೆಂದರಲ್ಲಿ ಬಿದ್ದು ಹಾಳಾಗುತ್ತಿವೆ.

ಕೋಟೆಕಲ್ ಗ್ರಾಮದ ಪಂಚಾಯತಿ ಹತ್ತಿರ 20-30 ವರ್ಷಗಳಿಂದಲೂ ಶಾಸನವೊಂದು ಇದ್ದು, ಅದಕ್ಕೆ ರಕ್ಷಣೆ ಇಲ್ಲದ್ದರಿಂದ ಆ ಶಾಸನ ಎಲ್ಲೆಂದರಲ್ಲಿ ಬಿದ್ದು ಹಾಳಾಗುತ್ತಿದೆ. ಕೋಟೆಕಲ್ ಗ್ರಾಮದಲ್ಲಿ ಸದ್ಯ ಕಂಡು ಬಂದಿರುವ ಈ ಶಾಸನ ಅಂದಾಜು 3 ಅಡಿಯಷ್ಟಿದ್ದು, ಅರ್ಧ ಚಂದ್ರ, ಸೂರ್ಯನ ಕೆತ್ತನೆ ಇದ್ದು, ಅದರ ಕೆಳಗಡೆ ಹಳಗನ್ನಡದಲ್ಲಿ ಕೆಲವು ವಿಷಯ ಬರೆಯಲಾಗಿದೆ. ಆ ಶಾಸನ ರಕ್ಷಣೆಯಾಗದಿರುವುದರಿಂದ ಅಲ್ಲಿಯೇ ಬಿದ್ದು 2 ತುಂಡಾಗಿದೆ.

ದೇಸಾಯಿ ಮನೆತನ: ಕೋಟೆಕಲ್ ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮವಾಗಿದ್ದು, ಇಲ್ಲಿಯ ದೇಸಾಯಿ ಮನೆತನ ಗುಳೇದಗುಡ್ಡ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಲಾಯದಗುಂದಿ, ಹರದೊಳ್ಳಿ, ಪರ್ವತಿ ಸೇರಿದಂತೆ 14 ಗ್ರಾಮಗಳ ಆಳ್ವಿಕೆ ಮಾಡುತ್ತಿತ್ತು. ಈ ದೇಸಾಯಿ ಮನೆತನ ಮೂಲತಃ ನಿಡಗುಂದಿಯವರಾಗಿದ್ದು, ಯಲಗುರದಪ್ಪ ದೇವರು ದೇಸಾಯಿ ಮನೆದೇವರಾಗಿತ್ತು. ಪಟ್ಟಣದ ಮೂಕೇಶ್ವರಿದೇವಿ ಅವರ ಮನೆಯ ಹೆಣ್ಣು ಮಗಳಾಗಿದ್ದಳು. 18ನೇ ಶತಮಾನದಲ್ಲಿ ಗುಡ್ಡದ ಮೇಲೆ ಊರು ನೆಲೆಸಿತ್ತು. ಮೊಘಲರ, ಬ್ರಿಟಿಷರ ದಾಳಿಯಿಂದ ಈ ಊರ ಜನರು ಬೇರೆಡೆ ಹೋಗುವಂತಾಗಿತ್ತು. ಆದರೆ ದೇಸಾಯಿ ಮನೆತನದ ಗೋಪಾಲಪ್ಪ ದೇಸಾಯಿಯವರು ಗುಳೇದಗುಡ್ಡವನ್ನು ಮರುಸ್ಥಾಪಿಸಿ, ಊರಿನ ಜನರು ಇಲ್ಲಿಯೇ ನೆಲೆನಿಲ್ಲುವಂತೆ ಮಾಡಿದರು. ಈ ಮೊದಲು ಗುಳೇದಗುಡ್ಡಕ್ಕೆ ಗೋಪಾಲಪುರ ಎಂಬ ಹೆಸರಿತ್ತು. ದೇಸಗತಿ ಮನೆತನದ ಕುರುಹುವಾಗಿ ಗುಡ್ಡದ ಮೇಲೆ ದ್ವಾರ ಬಾಗಿಲು, ಕೋಟೆಯ ಗೋಡೆಗಳು ಸಹ ಕಾಣಸಿಗುತ್ತವೆ.

ಎಲ್ಲೆಲ್ಲಿವೆ ಪುರಾವೆಗಳು:

ಪಟ್ಟಣದ ಗುಡ್ಡದ ಮೇಲಿರುವ ದ್ವಾರ ಬಾಗಿಲು ಸಹ ಮಳೆ ಗಾಳಿಗೆ ಹಾನಿಗೊಳಗಾಗಿವೆ. ಇತಿಹಾಸದ ಕುರುಹುವಾಗಿ ಆ ದ್ವಾರಬಾಗಿಲಿದ್ದು, ಅದರ ರಕ್ಷಣೆ ಮಾಡಬೇಕಿದೆ. ಇನ್ನೂ ಹರದೊಳ್ಳಿ ಮಾರುತೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಸುಮಾರು 9-10ನೇ ಶತಮಾನದ ರಾಷ್ಟ್ರಕೂಟರ ಕಾಲದ್ದು ಎನ್ನಲಾಗಿರುವ ಚತುರ್ಭುಜ ಬ್ರಹ್ಮದ ಶಿವಲಿಂಗ, 2 ಕೈ ಹೊಂದಿರುವ ಕುಬ್ಜ ಗಣಪತಿ ಮೂರ್ತಿ ಪತ್ತೆಯಾಗಿದೆ. ಇದನ್ನು ಮೋಡಿ ಲಿಪಿ ತಜ್ಞ ಸಂಗಮೇಶ ಕಲ್ಯಾಣಿ ಅವರು ಗುರುತಿಸಿ, ಇದರ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಮೂರ್ತಿಗಳ ಮೇಲೆ ನಿತ್ಯ ದೇವಸ್ಥಾನಕ್ಕೆ ಬರುವ ಭಕ್ತರು ಎಣ್ಣೆ ಹಾಕಿ ಗುರುತು ಸಿಗದಂತೆ ಮಾಡಿದ್ದರು, ಆದರೆ ಅವರು ಸ್ವಚ್ಛಗೊಳಿಸಿ, ಜನರಿಗೆ ಇತಿಹಾಸ ತಿಳಿಯುವಂತೆ ಮಾಡಿದ್ದಾರೆ. ಇನ್ನೂ ಸಾಲಓಣಿಯಲ್ಲಿ ಎರಡು ಕಡೆಗಳಲ್ಲಿ ಶಿವಲಿಂಗಗಳು ಪತ್ತೆಯಾಗಿವೆ. ಆದರೆ ಅವುಗಳ ರಕ್ಷಣೆ ಮಾತ್ರ ಸರಿಯಾಗಿಲ್ಲ. ಲಾಯದಗುಂದಿ ಗ್ರಾಮದಲ್ಲಿ ಜಕಣಾಚಾರಿ ಕಟ್ಟಿಸಿದ ಅಮರೇಶ್ವರ ಕೊಳ್ಳವಿದೆ.

ಬಾದಾಮಿ ಚಾಲುಕ್ಯರ, ರಾಷ್ಟ್ರಕೂಟರ ಆಳ್ವಿಕೆಯ ಭಾಗವಾಗಿರುವ ಗುಳೇದಗುಡ್ಡ ತಾಲೂಕಿನಲ್ಲಿ ಸಿಕ್ಕಿರುವ ಐತಿಹಾಸಿಕ ಕುರುಹುಗಳ ರಕ್ಷಣೆಯಾಗಬೇಕು. ಅಲ್ಲದೇ ಅವುಗಳ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಇಲಾಖೆ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 14 ಗ್ರಾಮಗಳ ಆಳ್ವಿಕೆಯನ್ನು ನಮ್ಮ ದೇಸಾಯಿ ಮನೆತನ ಮಾಡುತ್ತ ಬಂದಿತ್ತು. ಕೋಟೆಕಲ್ ಗ್ರಾಮದ ಪಂಚಾಯತಿ ಹತ್ತಿರ ಇರುವ ಶಾಸನ 18ನೇ ಶತಮಾನದ ಸಮಯದಲ್ಲಿ ಗುಡ್ಡದ ಮೇಲೆ ಇದ್ದ ಊರಿನ ಕುರಿತಾಗಿ ತಿಳಿಸುವ ಶಾಸನವಾಗಿದೆ. ಅದರ ಪೂರ್ಣ ಮಾಹಿತಿ ನಮಗೂ ಲಭ್ಯವಿಲ್ಲ.

-ಶ್ರೀಮಂತ ಜಿ.ಎಸ್. ದೇಸಾಯಿ ಕೋಟೆಕಲ್ ದೇಸಾಯಿ ಮನೆತನದ ಹಿರಿಯರುಕೋಟೆಕಲ್ ಶಾಸನ ಒಂದು ಹಸು ಇಲ್ಲವೇ ಹೋರಿಯ ಲಿಂಗೈಕ್ಯದ ಕುರಿತಾಗಿ ತಿಳಿಸಿಕೊಡುವ ಶಾಸನವಾಗಿರಬಹುದು. ಇದೇ ತರಹ ಗುಳೇದಗುಡ್ಡ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐತಿಹಾಸಿಕ ಮಹತ್ವ ತಿಳಿಸಿಕೊಡುವ ಅನೇಕ ಕುರುಹುಗಳಿವೆ. ಅವುಗಳನ್ನು ನಾನು ಗುರುತು ಮಾಡಿದ್ದೇನೆ. ಆದರೆ ಅವುಗಳ ರಕ್ಷಣೆ ಸರಿಯಾಗಿ ಮಾಡಿಲ್ಲ. ಇದರಿಂದ ನಮ್ಮ ಯುವ ಜನತೆ ನಮ್ಮೂರಿನ ಇತಿಹಾಸ ಅರಿತುಕೊಂಡಿಲ್ಲ. ಪುರಾತತ್ವ ಇಲಾಖೆ ಈ ಬಗ್ಗೆ ಐತಿಹಾಸಿಕ ಕುರುಹುಗಳ ರಕ್ಷಣೆಗೆ ಮುಂದಾಗಬೇಕಿದೆ.

-ಸಂಗಮೇಶ ಕಲ್ಯಾಣಿ , ಮೋಡಿಲಿಪಿ ತಜ್ಞಕೋಟೆಕಲ್ ಗ್ರಾಮದಲ್ಲಿ ಇರುವ ಶಾಸನದ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಅಲ್ಲದೆ ಈ ಬಗ್ಗೆ ಗ್ರಾಮದ ದೇಸಾಯಿ ಅವರೊಂದಿಗೆ ಮಾತನಾಡಿದ್ದೇನೆ. ನಾನು ಆ ಭಾಗದಲ್ಲಿ ಭೇಟಿ ನೀಡಲಿದ್ದು, ಅಲ್ಲಿಯವರೆಗೆ ಆ ಶಾಸನ ಅಲ್ಲಿಯೇ ಇರಲಿ.ಬೇರೆಡೆ ಸ್ಥಳಾಂತರ ಮಾಡಬೇಡಿ.

-ರಮೇಶ ಮೂಲಿಮನಿ, ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ , ಹುಬ್ಬಳ್ಳಿಕೋಟೆಕಲ್ ಗ್ರಾಮದ ಪಂಚಾಯತಿ ಹತ್ತಿರ ಶಾಸನ ಬಹಳ ವರ್ಷಗಳಿಂದ ಇದ್ದು, 2 ತುಂಡುಗಳಾಗಿದೆ. ಅದರ ಬಗ್ಗೆ ಸಂಬಂಧಪಟ್ಟವರು ಏನು ಬರೆದಿರಬಹುದು ಎಂಬುವುದನ್ನು ಪರಿಶೀಲಿಸಿ, ಆ ಶಾಸನದ ರಕ್ಷಣೆ ಮಾಡಬೇಕು.

-ಗುಂಡಪ್ಪ ಕೋಟಿ, ಕೋಟೆಕಲ್ ನಿವಾಸಿ