ಸಾಹಿತ್ಯ ಇಲ್ಲದ ಇತಿಹಾಸ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ

| Published : Feb 02 2025, 01:01 AM IST

ಸಾಹಿತ್ಯ ಇಲ್ಲದ ಇತಿಹಾಸ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಸಾಹಿತ್ಯ ಅಕಾಡೆಮಿ, ರೋಟರಿ ಸಂಸ್ಥೆ, ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಶಾಸನೋಕ್ತ ವೀರಗಲ್ಲುಗಳು ಕಾರ್ಯಕ್ರಮವನ್ನು ಸಾಹಿತಿ ಮಂಜುನಾಥ ಪ್ರಸನ್ನ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇತಿಹಾಸ ಹೊರತಾದ ಸಾಹಿತ್ಯ, ಸಾಹಿತ್ಯ ಇಲ್ಲದ ಇತಿಹಾಸ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹಾಗೂ ಸಾಹಿತಿ ಮಂಜುನಾಥ ಪ್ರಸನ್ನ ಹೇಳಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ, ರೋಟರಿ ಸಂಸ್ಥೆ, ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಚಾಮರಾಜನಗರ ಜಿಲ್ಲೆಯ ಶಾಸನೋಕ್ತ ವೀರಗಲ್ಲುಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಹೊರತಾದ ಕ್ಷೇತ್ರಗಳು ಕಾಣಸಿಗುವುದಿಲ್ಲ. ಈ ಸಾಹಿತ್ಯ ಹಾಗೂ ಇತಿಹಾಸ ಒಟ್ಟಾಗಿ ಸಾಗುತ್ತಿದ್ದು ಒಂದೊಕ್ಕೊಂದು ಬೆಸೆದುಕೊಂಡಿದೆ. ಸಾಹಿತ್ಯದ ವೇದಿಕೆಯಲ್ಲಿ ಇತಿಹಾಸದ ಬೇರುಗಳನ್ನು ಹುಡುಕುವಂತಹ ಪ್ರಯತ್ನ ಶ್ಲಾಘನೀಯ ಎಂದರು.ಇತಿಹಾಸವನ್ನು ಅರಿಯಲು ಸಾಹಿತ್ಯವೇ ಸುಲಭ ಮಾಧ್ಯಮವಾಗಿದೆ. ಶಾಸನ, ತಾಳೆಗರಿ, ಓಲೆಗರಿಗಳಲ್ಲಿ ಸಾಹಿತ್ಯದ ದಾಖಲೆಗಳು ಲಭ್ಯವಾಗಿವೆ. ಇತಿಹಾಸದ ಮೂಲಕವೇ ಸಾಹಿತ್ಯದ ಪರಿಚಯವೂ ಆಗಿದೆ. ತಲೆಮಾರುಗಳಿಗೆ ತಲೆ ಇತಿಹಾಸವನ್ನು ಮುಟ್ಟಿಸುವ ಕೆಲಸವನ್ನು ಸಾಹಿತ್ಯ ಸಮರ್ಥವಾಗಿ ಮಾಡುತ್ತಿದೆ ಎಂದರು. ಸಾಹಿತ್ಯದ ಮೂಲವನ್ನು ಹುಡುಕುತ್ತಾ ಹೋದರೆ ಶಾಸನಗಳು ತೆರೆದುಕೊಳ್ಳುತ್ತವೆ. ಅಂದಿನ ರಾಜ-ಮಹಾರಾಜರು ಅವರ ಅಡಳಿತ ಅವಧಿಯ ಪ್ರಮುಖ ಘಟನಾವಳಿಗಳು, ಸಾಧನೆಗಳನ್ನು ಸಾಹಿತ್ಯದ ಮೂಲಕ ಶಿಲಾಶಾಸನಗಳಲ್ಲಿ ಕೆತ್ತಿಸಿದ್ದು ಇಂದಿಗೂ ಕಾಣಬಹುದಾಗಿದೆ ಎಂದರು.

ಹಿಂದೆ ಸಾಹಿತ್ಯ ಸಂಸ್ಕೃತಿಯನ್ನು ಒಮ್ಮೊಟ್ಟಿಗೆ ತೆಗೆದುಕೊಂಡು ಹೋಗುವ ಪ್ರಭುತ್ವ ಇತ್ತು. ಪ್ರಸ್ತುತ ದಿನಮಾನಗಳಲ್ಲಿ ತೋರಿಕೆಯ ರಾಜಕಾರಣದಲ್ಲಿ ಸಾಹಿತ್ಯ ಸಂಸ್ಕೃತಿ ಮರೆಯಾಗಿದೆ. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚು ಮನ್ನಣೆ ದೊರೆಯುತ್ತಿಲ್ಲ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್‌ರಾಜು ಮೇಹು ಮಾತನಾಡಿ, ಬೆಂಗಳೂರಿಗೆ ಕೇಂದ್ರಿತವಾಗಿದ್ದ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯನ್ನು ಪ್ರತಿಯೊಂದು ಜಿಲ್ಲೆಗೂ ವಿಸ್ತರಿಸುವ ನಿಟ್ಟಿನಲ್ಲಿ ಚಕೋರ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು. ಸ್ಥಳೀಯ ಬರಹಗಾರರು, ಸಾಹಿತಿಗಳಿಗೆ ಇಂತಹ ವೇದಿಕೆ ಮೂಲಕಿ ಅವಕಾಶ ಕಲ್ಪಿಸಲಾಗುತ್ತಿದೆವ ಎಂದರು.ಗುಂಡ್ಲುಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಾ.ಮಂಜುನಾಥ್ ಮಾತನಾಡಿ, ೭೫ ದೇಶದಾದ್ಯಂತ ತಮಿಳುನಾಡು ಹೊರತುಪಡಿಸಿದರೆ ಅತಿ ಹೆಚ್ಚು ಶಾಸನಗಳು ದೊರೆತಿರುವುದು ಕರ್ನಾಟಕದಲ್ಲಿ. ರಾಜ್ಯದಲ್ಲಿ ಸಿಕ್ಕಿರುವ ೨೦,೦೦೦ ಶಾಸನಗಳಲ್ಲಿ ೧,೦೦೦ಕ್ಕೂ ಹೆಚ್ಚು ಶಾಸನಗಳು ಚಾಮರಾಜನಗರ ಜಿಲ್ಲೆಯಲ್ಲಿ ಲಭ್ಯವಾಗಿರುವುದು ಹೆಮ್ಮೆಯ ವಿಚಾರ ಎಂದರು.ಯಳಂದೂರು ತಾಲೂಕಿನಲ್ಲಿ ೨೨೦ ಶಾಸನಗಳು, ಚಾಮರಾಜನಗರ ತಾಲೂಕಿನಲ್ಲಿ ೩೫೬, ಕೊಳ್ಳೇಗಾಲದಲ್ಲಿ ೧೪೦, ಗುಂಡ್ಲುಪೇಟೆ ತಾಲೂಕಿನಲ್ಲಿ ೨೦೦ಕ್ಕೂ ಹೆಚ್ಚು ಶಾಸನಗಳು ದೊರೆತಿವೆ. ಇವೆಲ್ಲವನ್ನೂ ಆಧಾರವಾಗಿಟ್ಟುಕೊಂಡು ಜಿಲ್ಲೆಯ ಸಂಸ್ಕೃತಿಯನ್ನು ಬಣ್ಣಿಸಬಹುದಾಗಿದೆ ಎಂದರು. ಮಾಂಬಳ್ಳಿಯಲ್ಲಿ ದೊರೆತಿರುವ ತಾಮ್ರದ ಶಾಸನ ಜಿಲ್ಲೆಯ ಅತ್ಯಂತ ಪ್ರಾಚೀನ ಶಾಸನ ಎನ್ನಲಾಗುತ್ತದೆ. ನಾಲ್ಕು ಹಲಗೆಗಳು, ೨೦ ಸಾಲುಗಳನ್ನು ಹೊಂದಿರುವ ಮಾಂಬಳ್ಳಿ ತಾಮ್ರದ ಶಾಸನ ಗಮನ ಸೆಳೆಯುವಂತಿದೆ ಎಂದರು. ಚಾಮರಾಜನಗರ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್.ಜಯಣ್ಣ ಉಪಸ್ಥಿತರಿದ್ದರು. ಜನಪದ ಗಾಯಕ ಸಿಎಂ ನರಸಿಂಹ ಮೂರ್ತಿ ಗೀತೆ ಹಾಡಿದರು. ಅನಿಲ್ ಕುಮಾರ್ ಹೊಸೂರು ಸ್ವಾಗತಿಸಿದರು. ಸುರೇಶ್ ವಂದಿಸಿದರು.