ಎಚ್‌ಎಂಪಿವಿ ವೈರಸ್‌ ಹೆದರದಿರಿ, ಜಾಗೃತರಾಗಿರಿ: ಡಿಸಿ ಜಾನಕಿ

| Published : Jan 07 2025, 12:32 AM IST

ಸಾರಾಂಶ

ಉಸಿರಾಟದ ತೊಂದರೆಯನ್ನು ಉಂಟು ಮಾಡುವ ವೈರಸ್ ಆಗಿದೆ. ಚಳಿಗಾಲದಲ್ಲಿ ಶೀತ ಮತ್ತು ಜ್ವರದ ಲಕ್ಷಣಗಳನ್ನು ಉಂಟು ಮಾಡುತ್ತಿದ್ದು, ಭಯ ಪಡದೇ ಮುಂಜಾಗ್ರತಾ ವಹಿಸುವುದು ಅವಶ್ಯ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಚೀನಾದಲ್ಲಿ ಹ್ಯೂಮನ್ ಮೆಟಾನ್ಯೂಮೋ ವೈರಸ್ ರೋಗದ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಆದರೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಹ್ಯೂಮನ್ ಮೆಟಾನ್ಯೂಮೋ ವೈರಸ್ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ಸರಕಾರ ಈ ವೈರಸ್ ಬಗ್ಗೆ ವಿವರಣೆ ನೀಡಿದೆ. ಇದು ಒಂದು ಉಸಿರಾಟದ ತೊಂದರೆಯನ್ನು ಉಂಟು ಮಾಡುವ ವೈರಸ್ ಆಗಿದೆ. ಚಳಿಗಾಲದಲ್ಲಿ ಶೀತ ಮತ್ತು ಜ್ವರದ ಲಕ್ಷಣಗಳನ್ನು ಉಂಟು ಮಾಡುತ್ತಿದ್ದು, ಭಯ ಪಡದೇ ಮುಂಜಾಗ್ರತಾ ವಹಿಸುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ವಿಶೇಷವಾಗಿ ಹಿರಿಯ ಮತ್ತು ಕಿರಿಯ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇಲ್ಲಿಯವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ವೈರಸ್ ಪ್ರಕರಣಗಳು ವರದಿಯಾಗಿರುವದಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯದಲ್ಲಿ ಸಾಮಾನ್ಯ ಶೀತ ಅಂತಹ ಚಾಲ್ತಿಯಲ್ಲಿರುವ ಉಸಿರಾಟದ ಸೋಂಕುಗಳ ಅಂಕಿ ಅಂಶಗಳನ್ನು ವಿಶ್ಲೇಷಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಡಿ.2024ರ ವರದಿಯಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಗಮನಾರ್ಹ ಏರಿಕೆ ಕಂಡು ಬಂದಿರುವುದಿಲ್ಲ. ನಾಗರಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಸೋಂಕು ಹರಡುವದನ್ನು ತಡೆಗಟ್ಟಲು ಕೆಲವು ಅಂಶಗಳನ್ನು ಪಾಲಿಸುವುದು ಅವಶ್ಯವಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲಿಕಾರ್ಜುನ ಡಿ.ಎನ್, ಚೀನಾ ವೈರಸ್ ರೋಗದ ಬಗ್ಗೆ ಹಾಗೂ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಕೆಮ್ಮುವಾಗ, ಸೀನುವಾಗ ಮೂಗಿಗೆ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಹಿಡಿಯಬೇಕು. ಸಾಬೂನು ಮತತು ನೀರಿನಿಂದ ಅಥವಾ ಸೈನಿಟೈಜರ್ನಿಂದ ಮೇಲಿಂದ ಮೇಲೆ ಕೈಗಳನ್ನು ತೊಳೆಯಬೇಕು. ಜನಸಂದಣಿ ಇರುವ ಪ್ರದೇಶಗಳಿಂದ ದೂರ ಇರಬೇಕು. ಜ್ವರ ಕೆಮ್ಮು ಮತ್ತು ಶೀತವಿದ್ದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಭೇಟಿ ತಡೆಯಬೇಕು. ಉತ್ತಮ ವಾತಾವರಣ ಇರುವ ಜಾಗಗಳಿಗೆ ಆದ್ಯತೆ ನೀಡಬೇಕು. ಸಾಕಷ್ಟು ನೀರು ಕುಡಿಯುವುದು ಹಾಗೂ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಎಂದರು.

ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನ್ನು ಮರು ಬಳಕೆ, ಅನಾರೋಗ್ಯದಿಂದ ಬಳಲುವ ಜನರೊಂದಿಗೆ ನಿಕಟ ಸಂಪರ್ಕ, ಲಿನಿನ್ ಹಂಚಿಕೊಳ್ಳುವುದು ಮಾಡಬಾರದು. ಕಣ್ಣು, ಮೂಗು ಹಾಗೂ ಬಾಯಿಯನ್ನು ಆಗಾಗ ಸ್ಪರ್ಶಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮಾಡಬಾರದು. ವೈದ್ಯರನ್ನು ಸಂಪರ್ಕಿಸದೇ ಸ್ವ ಔಷಧಿಗಳನ್ನು ತೆಗೆದುಕೊಳ್ಳಬಾರದು. ಸಾರ್ವಜನಿಕರು ಜ್ವರ, ಕೆಮ್ಮು, ನೆಗಡಿ ಕಂಡು ಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಲು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೇನ್ನವರ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಮೂಲಕ ಉಪಸ್ಥಿತರಿದ್ದರು.