ದೇಶ ಭಕ್ತಿಯಿದ್ದಾಗಲೇ ಅಭಿವೃದ್ಧಿ ಸಾಧ್ಯ

| Published : Jan 27 2025, 12:47 AM IST

ಸಾರಾಂಶ

ಈ ದಿನ ಉತ್ಸವವಾಗಿ ಬದಲಾಗಬೇಕಾದರೆ ಸಂವಿಧಾನದ ಪ್ರಸ್ತಾವನೆಯಲ್ಲಿನ ಗುರಿಗಳು ಸಾಧಿತವಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಲ್ಲೂ ದೇಶವನ್ನು ಕಟ್ಟಿ ಬೆಳೆಸುವ ಬದ್ಧತೆಯಿದ್ದಾಗಲೇ ದೇಶಾಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ 76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತಾನಾಡಿದ ಅವರು, ಗಣರಾಜ್ಯ ದಿನ ಕೇವಲ ದಿನವಾಗಿಯೇ ಉಳಿದಿದೆ. ಈ ದಿನ ಉತ್ಸವವಾಗಿ ಬದಲಾಗಬೇಕಾದರೆ ಸಂವಿಧಾನದ ಪ್ರಸ್ತಾವನೆಯಲ್ಲಿನ ಗುರಿಗಳು ಸಾಧಿತವಾಗಬೇಕು. ಈ ದಿನ ಇಡೀ ದೇಶ ಸಾಧಿಸಬೇಕಾದ ಗುರಿಗಳ ಮುನ್ನೋಟದೊಂದಿಗೆ ಸಾಧಿಸಿದ ಗುರಿಗಳ ವಿಜಯೋತ್ಸವ ಆಚರಿಸಿ, ನಾಡಿನ ನಾಗರಿಕರೆಲ್ಲರಲ್ಲೂ ನವೀನ ರೀತಿಯ ಉತ್ಸಾಹ, ಹುಮ್ಮಸ್ಸು ತಂಬುತ್ತದೆ. ಈ ನಿಟ್ಟಿನಲ್ಲಿ ನಮ್ಮ ವಿವಿಯು ಹೊಸ ಕ್ಯಾಂಪಸ್, ಪ್ರಾದೇಶಿಕ ಕೇಂದ್ರಗಳ ನಿರ್ಮಾಣ, ವಿಶೇಷ ಪರೀಕ್ಷಾರ್ಥಿಗಳ ಸಂಖ್ಯೆಯನ್ನು 17000 ರಿಂದ 30000ಕ್ಕೆ ಹೆಚ್ಚಿಸುವ ಹಾಗೂ ಸಾಂಸ್ಕೃತಿಕ ಜಾತ್ರೆಯಡಿ ಕಲೆಗಳ ಸ್ಪರ್ಧೆ ಮತ್ತು ಪ್ರದರ್ಶನ ಹೀಗೆ ವಿವಿ ಅಭಿವೃದ್ಧಿ ಪರವಾದ ಗುರಿಗಳನ್ನು ಹೊಂದಿದೆ ಎಂದರು.

ಇವುಗಳನ್ನು ಸಾಧಿಸಲು ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ತಾವು ಅರಿತು ಮುನ್ನಡೆದಾಗ ವಿವಿಯು ಅಭಿವೃದ್ಧಿ ಆಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಇಡುವಂತಹ ಪ್ರತಿ ಹೆಜ್ಜೆಗಳು ದಾಖಲೆಗಳಾಗಿ ಉಳಿಯಬೇಕು. ಗುರಿ ಮತ್ತು ಗುರು ಏಕಮುಖವಾಗಿ ಸಾಗಿ ವಿವಿಯ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.

ಕುಲಸಚಿವ (ಮೌಲ್ಯಮಾಪನ) ಪ್ರೊ.ಎಂ.ಜಿ. ಮಂಜುನಾಥ್ ಮಾತಾನಾಡಿ, ತ್ಯಾಗ ಬಲಿದಾನಗಳ ಮೂಲಕ ಈ ನಾಡಿಗೆ ಧಕ್ಕಿದ ಈ ಸ್ವಾತಂತ್ರ್ಯವನ್ನು ಬಾಬಾ ಸಾಹೇಬರು ರಚಿಸಿದ ಸಂವಿಧಾನ ನೀಡಿದೆ. ಅದನ್ನು ಉಳಿಸಿ ಬೆಳೆಸುವ ಕಾರ್ಯ ನಾವೆಲ್ಲರೂ ಮಾಡಬೇಕು ಎಂದರು. ನಂತರ ಕುಲಸಚಿವೆ ಕೆ.ಎಸ್. ರೇಖಾ, ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡುವ ಪಣ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಂತರ ವಿವಿ ವಿದ್ಯಾರ್ಥಿಗಳಿಂದ ಗಾಯನ ಮತ್ತು ನೃತ್ಯ ಕಾರ್ಯಕ್ರಮ ನೆರವೇರಿತು.