ಸಾರಾಂಶ
ಧಾರವಾಡ: ಕಸ ನಿರ್ವಹಣೆಗೆ ಹು-ಧಾ ಮಹಾನಗರ ಪಾಲಿಕೆ ಏನೇ ತಿಪ್ಪರಲಾಗ ಹಾಕಿದರೂ ಬದಲಾವಣೆ ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಸ್ವಚ್ಛತೆ ಕಾಣುತ್ತಿಲ್ಲ. ಎಲ್ಲೆಂದರಲ್ಲಿ ಚಿಲ್ಲಾಪಿಲ್ಲಿಯಾದ ಕಸ, ಕಸದ ಗುಡ್ಡೆ ಸುತ್ತಲೂ ಸಾಮ್ರಾಜ್ಯ ಮಾಡಿಕೊಂಡ ಶ್ವಾನಗಳು. ಇದರ ಜೊತೆಗೆ ನಗರದ ತುಂಬೆಲ್ಲಾ ಧೂಳು.. ಧೂಳು..!
ಇಲ್ಲಿಯ ಮಹಾನಗರ ಪಾಲಿಕೆ ಸುವರ್ಣ ಮಹೋತ್ಸವ ಭವನದಲ್ಲಿ ಬುಧವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇಡೀ ದಿನ ಇದೇ ರೀತಿಯ ಕಸ ನಿರ್ವಹಣೆ ಕುರಿತೇ ಚರ್ಚೆ, ವಾದ-ವಿವಾದ ನಡೆಯಿತು. ಸಭಾನಾಯಕ ತಿಪ್ಪಣ್ಣ ಮಜ್ಜಗಿ ಮಂಡಿಸಿದ ಗಮನ ಸೆಳೆಯುವ ಸೂಚನೆಯಲ್ಲಿ ಕಸದ ನಿರ್ವಹಣೆ ಕುರಿತು ವಿಸ್ತೃತ ಚರ್ಚೆ ನಡೆಯಿತು.ಅಂದಗೆಟ್ಟ ನಗರ
ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರ ಅಂದಗೆಟ್ಟಿದೆ. ವರ್ಷಕ್ಕೆ ₹50 ಕೋಟಿ ಖರ್ಚು ಮಾಡಿದರೂ ಸ್ವಚ್ಛತೆ ಕಾಣುತ್ತಿಲ್ಲ. ಹೀಗಾಗಿ, ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅವಳಿ ನಗರ 46 ರಿಂದ 87ನೇ ಸ್ಥಾನಕ್ಕೆ ಕುಸಿದಿದೆ. ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕಸ ಸಂಗ್ರಹ ವಾಹನಗಳು ಹೋಗುತ್ತಿಲ್ಲ. ಕಸ ವಿಲೇವಾರಿ ವಾಹನದ ಟೈರ್ ಬದಲಾಯಿಸಲೂ ಸಾಧ್ಯವಾಗದ ಸ್ಥಿತಿ ಪಾಲಿಕೆಗೆ ಇದೆಯೇ ಎಂದು ಪ್ರಶ್ನಿಸಿದ ಪಾಲಿಕೆ ಸದಸ್ಯರು, ಜನರ ಬಳಿಯೂ ಬಳಕೆದಾರರ ಶುಲ್ಕದ ಹೆಸರಿನಲ್ಲಿ ಹಣ ವಸೂಲಿ ನಡೆದಿದೆ ಎಂದು ತಿಪ್ಪಣ್ಣ ಮಜ್ಜಗಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಭಾರತದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಮುಂದಿನ ವರ್ಷ 25ನೇ ರ‍್ಯಾಂಕ್ ಒಳಗೆ ಬರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂಬ ಸಲಹೆಗಳನ್ನು ನೀಡಿದರು.ವಿಶೇಷ ಸಭೆ ನಡೆಸಿ
ಇದೇ ವಿಷಯವಾಗಿ ಮಾತನಾಡಿದ ಹಿರಿಯ ಸದಸ್ಯ ವೀರಣ್ಣ ಸವಡಿ, ಈರೇಶ ಅಂಚಟಗೇರಿ, ಸಂದೀಲಕುಮಾರ್, ಇಮ್ರಾನ್ ಯಲಿಗಾರ, ಕಸ ನಿರ್ವಹಣೆಗಾಗಿ ಬರೀ ಹಣ ವ್ಯಯವಾಗುತ್ತಿದೆಯೇ ಹೊರತು ಸುಧಾರಣೆ ಕಾಣುತ್ತಿಲ್ಲ. ಸೂರತ್ ಕೂಡ ಮಹಾನಗರ ಪಾಲಿಕೆಯೇ? ಅದು ಪ್ರತಿಭಾರಿ ನಂ- 1 ಸ್ಥಾನದಲ್ಲಿರುತ್ತಿದೆ. ಆದರೆ, ಅದು ನಮಗೇಕೆ ಆಗುತ್ತಿಲ್ಲ. ಬೇಕಿದ್ದರೆ ಸ್ವಚ್ಛತೆಗಾಗಿಯೇ ವಿಶೇಷ ಸಭೆ ನಡೆಸುವಂತೆ ಸದಸ್ಯರು ಸಲಹೆ ನೀಡಿದರು.ಸದಸ್ಯರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಕಸ ಸಂಗ್ರಹಕ್ಕೆ ನಾವು 80 ಆಟೋ ಟಿಪ್ಪರ್‌ಗಳನ್ನು ಖರೀದಿಸುತ್ತಿದ್ದೇವೆ. ಸ್ವಚ್ಛತೆಯ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಹು-ಧಾ ಉತ್ತಮ ರ‍್ಯಾಂಕ್ ಬರಲಿದೆ ಎಂಬ ವಿಶ್ವಾಸವಿದೆ ಎಂದರು.
ಫೆ. 4ರಂದು ವಿಶೇಷ ಅಭಿಯಾನಇದೇ ವಿಷಯವಾಗಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಮಹಾರಾಷ್ಟ್ರದ ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಹುಬ್ಬಳ್ಳಿಯಲ್ಲಿ ಫೆ. 4ರಂದು ವಿಶೇಷ ಸ್ವಚ್ಛತಾ ಅಭಿಯಾನ ನೆಡಯುತ್ತಿದೆ. 109 ಕಾಲೋನಿಗಳು, 11 ಪೊಲೀಸ್ ಠಾಣೆ, 16 ಮುಖ್ಯರಸ್ತೆಗಳು, 13 ಮಾರುಕಟ್ಟೆಗಳು, 12 ಸರ್ಕಾರಿ ಕಚೇರಿಗಳು, 3 ಬಸ್ ನಿಲ್ದಾಣಗಳು ಸೇರಿ ಒಟ್ಟು 164 ಸ್ಥಳಗಳನ್ನು ಸ್ವಚ್ಛ ಮಾಡಲು ಗುರಿ ಹೊಂದಲಾಗಿದೆ. ಆ ದಿನ 2500 ಟನ್ ನಷ್ಟು ಕಸ ಸಂಗ್ರಹ ಸಾಧ್ಯತೆಗಳಿವೆ. 12 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ. ಇದನ್ನು ಮುಂದೆ ಧಾರವಾಡದಲ್ಲೂ ನಡೆಸಲಾಗುವುದು ಎಂದರು.
ಸ್ಮಶಾನದಲ್ಲಿ ಹಣದ ಬೇಡಿಕೆಹುಬ್ಬಳ್ಳಿ ನಗರದಲ್ಲಿರುವ ಸ್ಮಶಾನಗಳಲ್ಲಿ ಕಾವಲುಗಾರರು ಮನ ಬಂದಂತೆ ಹಣ ಕೇಳುತ್ತಿದ್ದಾರೆ. ಮೃತರ ಮರಣ ಉತಾರ ಪಡೆಯಲು ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಕಟ್ಟಿದ ಹಣದ ರಶೀದಿ ಕೇಳುತ್ತಿದ್ದಾರೆ. ಆದರೆ ಅಲ್ಲಿ ರಶೀದಿಯೇ ಸಿಗುತ್ತಿಲ್ಲ. ಕೆಲವೆಡೆ ಅಕ್ರಮ ಚಟುವಟಿಕೆ ನಡೆಯುತ್ತಿವೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು. ಆಗ ಸೂಕ್ತ ಕ್ರಮಕ್ಕೆ ಸೂಚಿಸಿದ ಮೇಯರ್ ವೀಣಾ ಭರದ್ವಾಡ, ಶವ ಸಾಗಾಣಿಕೆ ವಾಹನಕ್ಕೆ ಕೇವಲ ₹500 ಮಾತ್ರ ಪಾವತಿ ಮಾಡಿದರೆ ಸಾಕು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.
ಎಲ್ ಆ್ಯಂಡ್ ಟಿ ಅಧಿಕಾರಿಗಳ ವಿರುದ್ಧ ಆಕ್ರೋಶಶೂನ್ಯ ವೇಳೆಯಲ್ಲಿ ನಡೆದ ಚರ್ಚೆಯಲ್ಲಿ ನೀರು ಪೂರೈಕೆ ವಿಚಾರ ಪ್ರತಿಧ್ವನಿಸಿತು. ಸದಸ್ಯ ಚಂದ್ರಶೇಖರ ಮನಗುಂಡಿ ಮಾತನಾಡಿ, ಎಲ್ ಆ್ಯಂಡ್ ಟಿ ಅಧಿಕಾರಿಗಳು ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಬೇಸಿಗೆ ಆರಂಭವಾಗುವ ಪೂರ್ವದಲ್ಲಿ ಈ ಸಮಸ್ಯೆ ಪರಿಹರಿಸಬೇಕು. ಹೀಗಾಗಿ, ಅಧಿಕಾರಿಗಳನ್ನು ಸಭೆಗೆ ಕರೆಯಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಎಲ್ಲ ಸದಸ್ಯರೂ ಧ್ವನಿಗೂಡಿಸಿದರು. ಆದರೆ ಅಧಿಕಾರಿಗಳು ಮಾತ್ರ ಒಂದು ಗಂಟೆಯಾದರೂ ಬಾರದ ಕಾರಣ ಸಿಟ್ಟಾದ ಸದಸ್ಯರು, ಅಧಿಕಾರಿಗಳಿಗೆ ಸಭೆ ಗೌರವ ಇಲ್ಲವೆ ಎಂದು ಪ್ರಶ್ನಿಸಿದರು. ಆದರೆ ಎಲ್ ಆ್ಯಂಡ್ ಟಿ ಅಧಿಕಾರಿಗಳು ಜಿಲ್ಲಾಧಿಕಾರಿ ಸಭೆಗೆ ತೆರಳಿದ್ದಾರೆ ಎಂದು ಪಾಲಿಕೆ ಆಯುಕ್ತರು ಹೇಳುತ್ತಿದ್ದಂತೆ, ಈ ವಿಷಯವಾಗಿ ಪ್ರತ್ಯೇಕ ಸಭೆ ನಡೆಸುವಂತೆ ಆಗ್ರಹಿಸಿದರು.
ಜಾಗದ ವಿಚಾರಕ್ಕೆ ಗದ್ದಲಕಾನೂನು ವಿಶ್ವ ವಿದ್ಯಾಲಯಕ್ಕೆ ಪಾಲಿಕೆಯ 39 ಗುಂಟೆ ಜಾಗ ನೀಡುವ ಕುರಿತು ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಧ್ಯೆ ಗದ್ದಲ, ಗೊಂದಲ ಸೃಷ್ಟಿಯಾಯಿತು. ಸಭೆಯ ನಡಾವಳಿ ದೃಢೀಕರಣ ಸಮಯದಲ್ಲಿ ಸದಸ್ಯ ಶಿವು ಹಿರೇಮಠ ಈ ವಿಷಯ ಪ್ರಸ್ತಾಪಿಸಿದರು. ಆಗ ತಕರಾರು ಮಾಡಿದ ವಿಪಕ್ಷ ಸದಸ್ಯರು, ಹಿಂದಿನ ಸಭೆಯಲ್ಲಿ ವಿಷಯ ಪಾಸ್ ಮಾಡಲಾಗಿದೆ. ಹೀಗಾಗಿ ಅದರ ಬಗ್ಗೆ ಚರ್ಚೆ ಮಾಡುವುದು ಸಾಧ್ಯವಿಲ್ಲ ಎಂದರು. ಆಡಳಿತ ಪಕ್ಷದ ಸದಸ್ಯರು ಪಾಸ್ ಮಾಡಿಲ್ಲ. ಚರ್ಚೆ ಮಾತ್ರ ಮಾಡಲಾಗಿತ್ತು ಎಂದು ವಾಗ್ವಾದ ನಡೆಸಿದರು. ಇದರಿಂದ ಕೆರಳಿದ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ, ಸದಸ್ಯರಾದ ಇಸ್ಲಾಯಿಲ್ ಭದ್ರಾಪುರ, ಸಂದಿಲ್‌ಕುಮಾರ ಹಾಗೂ ಇತರರು ವಿರೋಧ ವ್ಯಕ್ತಪಡಿಸಿ, ಪಾಸ್ ಮಾಡಿದ ವಿಷಯ ಚರ್ಚೆ ಮಾಡಲು ಅವಕಾಶವಿಲ್ಲ. ಏನೇ ತಕರಾರು ಇದ್ದರೂ ಪಾಸ್ ಮಾಡುವ ಪೂರ್ವ ಚರ್ಚಿಸಬೇಕು ಎಂದರು. ವಿಪಕ್ಷ ನಾಯಕರು ಮೇಯರ್ ಎದುರು ತೆರಳಿ ಅಸಮಾಧಾನ ಹೊರಹಾಕಿದರು. ಕೊನೆಗೆ ಚರ್ಚೆ ಕೈ ಬಿಟ್ಟಿದ್ದರಿಂದ ಸಭೆ ಮುಂದುವರಿಯಿತು.