ಇಂದು ಸಂಜೆ ಡಿಕೆಶಿಯಿಂದ ಹೋಮ

| Published : Sep 05 2024, 12:30 AM IST / Updated: Sep 05 2024, 12:31 AM IST

ಸಾರಾಂಶ

ಎತ್ತಿನಹೊಳೆ ಯೋಜನೆ ಉದ್ಘಾಟನೆ ಹಿನ್ನೆಲೆ ಗುರುವಾರ ತಾಲೂಕಿಗೆ ಆಗಮಿಸಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೋಮ, ಹವನ ನೆರವೇರಿಸಲಿದ್ದು ಶುಕ್ರವಾರ ಮುಖ್ಯಮಂತ್ರಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಸಕಲೇಶಪುರ: ಎತ್ತಿನಹೊಳೆ ಯೋಜನೆ ಉದ್ಘಾಟನೆ ಹಿನ್ನೆಲೆ ಗುರುವಾರ ತಾಲೂಕಿಗೆ ಆಗಮಿಸಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೋಮ, ಹವನ ನೆರವೇರಿಸಲಿದ್ದು ಶುಕ್ರವಾರ ಮುಖ್ಯಮಂತ್ರಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ತಾಲೂಕಿನ ಹಬ್ಬನಹಳ್ಳಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಪೂರ್ವಭಾವಿ ಸಿದ್ಧತೆ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಶ್ಚಿಮಾಭಿಮುಖವಾಗಿ ಹರಿಯುತ್ತಿದ್ದ ನೀರನ್ನು ಪೂರ್ವಾಭಿಮುಖವಾಗಿ ಹರಿಸುವ ಮೂಲಕ ರಾಜ್ಯದ ಏಳು ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ವಿನೂತನ ಯೋಜನೆ ಇದಾಗಿದೆ, ತೀವ್ರ ಅಪಸ್ವರದ ನಡುವೆ ಎತ್ತಿನಹೊಳೆ ಯೋಜನೆ ಎಂಟು ಸಾವಿರ ಕೋಟಿನ ರು. ವೆಚ್ಚದಲ್ಲಿ ೨೦೧೪ರಲ್ಲಿ ಪ್ರಾರಂಭಿಸಲಾಗಿದೆ. ಸದ್ಯ ಪರಿಷ್ಕೃತ ದರ ೨೩ ಸಾವಿರ ಕೋಟಿ ರು. ತಲುಪಿದೆ. ಯೋಜನೆಯ ಕಾಮಗಾರಿ ಆರಂಭವಾಗಿ ೧೦ ವರ್ಷಗಳಲ್ಲಿ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿದ್ದು ಈಗಾಗಲೇ ಪರೀಕ್ಷಾರ್ಥವಾಗಿ ೧.೫೦೦ ಕ್ಯುಸೆಕ್ ನೀರನ್ನು ಹರಿಸಲಾಗಿದೆ. ಎರಡನೇ ಹಂತದ ಕಾಮಗಾರಿಗೆ ಕೆಲವು ತಾಂತ್ರಿಕ ಅಡಚಣೆಗಳಿದ್ದು ಇವುಗಳನ್ನು ಬಗೆಹರಿಸುವ ಮೂಲಕ ೨೦೨೭ಕ್ಕೆ ಸಂಪೂರ್ಣ ಯೋಜನೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮಕ್ಕೆ ಎತ್ತಿನಹೊಳೆ ಯೋಜನೆಯ ಫಲಾನುಭವಿಗಳಾದ ಏಳು ಜಿಲ್ಲೆಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದರು.

ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮಾತನಾಡಿ, ತಾಲೂಕಿನಲ್ಲಿ ನಿರ್ಮಾಣಗೊಂಡಿರುವ ೮ ವಿಯರ್‌ಗಳ ಪೈಕಿ ೭ ವಿಯರ್‌ಗಳಿಂದ ಶುಕ್ರವಾರ ನೀರು ಹರಿಸಲಾಗುವುದು. ಬಾಕಿ ಉಳಿದಿರುವ ಒಂದು ವಿಯರ್ ಇನ್ನೊಂದು ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.

೨೪ ಟಿಎಂಸಿ ನೀರೆತ್ತುವ ಈ ಯೋಜನೆಯಲ್ಲಿ ೧೪ ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. ಇನ್ನುಳಿದ ೧೦ ಟಿಎಂಸಿ ನೀರನ್ನು ಯೋಜನೆಯ ವ್ಯಾಪ್ತಿಯ ೫೨೭ ಕೆರೆಗಳಿಗೆ ಶೇ.೫೦ ರಷ್ಟು ತುಂಬಿಸುವ ಗುರಿ ಹೊಂದಲಾಗಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಯೋಜನೆ ವ್ಯಾಪ್ತಿಯಲ್ಲಿ ೨೫.೧೧ ಟಿಎಂಸಿ ನೀರು ಲಭ್ಯವಿದೆ. ಒಟ್ಟಾರೆ ಯೋಜನೆಯಿಂದ ಪ್ರತಿವರ್ಷ ಜೂ.೧ ರಿಂದ ಅ.೩೧ ರವರಗೆ ೧೩೯ ದಿನ ನೀರು ಹರಿಸಲಾಗುವುದು ಎಂದರು.

ಸಂಸದ ಶ್ರೇಯಸ್‌ ಪಟೇಲ್, ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸತ್ಯಭಾಮ, ಜಿಪಂ ಸಿಇಒ ಪೂರ್ಣಿಮ, ಉಪ ವಿಭಾಗಾಧಿಕಾರಿ ಶೃತಿ, ತಹಸೀಲ್ದಾರ್ ಮೇಘನಾ ಇದ್ದರು.