ಮನೆ ದೇವರು, ಊರಮ್ಮನ ಬಿಟ್ಟ ಬುಡಕಟ್ಟು ಜನ: ಬಿಳಿಮಲೆ

| Published : Nov 23 2024, 01:17 AM IST

ಸಾರಾಂಶ

ಬುಡಕಟ್ಟು ಜನರು ತಮ್ಮ ಮನೆ ದೇವರನ್ನು ಮರೆತ್ತಿದ್ದಾರೆ. ರಾಜಕೀಯ ಪಿತೂರಿಯಿಂದ ಆ ಜಾಗಕ್ಕೆ ಶ್ರೀರಾಮ ಪ್ರತಿಷ್ಠಾಪನೆ ಆಗಿದ್ದಾನೆ. ಬುಡಕಟ್ಟು ಜನರ ಸಂಸ್ಕೃತಿ ಉಳಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಾನಪದದ ಮೂಲ ಆಶಯ ಬದಲಾಗುತ್ತಿದ್ದು, ಆದಿವಾಸಿ ಮತ್ತು ಬುಡಕಟ್ಟು ಜನಾಂಗದ ಮನೆ ದೇವರು ಹಾಗೂ ಊರಮ್ಮನ ಜಾಗಕ್ಕೆ ಶ್ರೀರಾಮ ಬಂದು ಕುಳಿತಿದ್ದಾನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಶುಕ್ರವಾರ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಕರ್ನಾಟಕ ಜಾನಪದ ಪರಿಷತ್ತು ಕೊಡ ಮಾಡುವ ‘ನಾಡೋಜ ಎಚ್‌.ಎಲ್‌.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.ಜಾನಪದದ ರೀತಿ ನೀತಿಗಳು ಬದಲಾಗುತ್ತಿವೆ. ಹಿಂದುತ್ವ ಎಷ್ಟು ಜನಪ್ರಿಯವಾಗಿದೆ ಎಂದರೆ, ಜಾನಪದದ ಮೂಲ ಆಶಯಗಳೇ ಆಮೂಲಾಗ್ರವಾಗಿ ಬದಲಾಗುತ್ತಿವೆ. ಬುಡಕಟ್ಟು ಜನಾಂಗದವರು ತಮ್ಮ ಮನೆ ದೇವರು ಹಾಗೂ ಊರಮ್ಮನ ಪೂಜೆ ಬಿಟ್ಟಿದ್ದಾರೆ. ರಾಜಕೀಯ ಪ್ರೇರಣೆಯಿಂದ ಅಲ್ಲಿಗೆ ಶ್ರೀರಾಮ ಬಂದಿದ್ದು, ವಾಸಿಸುವ ತಾಣಗಳಲ್ಲಿ ಶ್ರಿರಾಮ ದೇವಸ್ಥಾನಗಳ ನಿರ್ಮಾಣವಾಗುತ್ತಿವೆ. ಇದರಿಂದ ಬುಡಕಟ್ಟು ಜನಾಂಗದವರು ಹಂದಿ, ಕುರಿ, ಕೋಳಿ ಕೊಯ್ಯುವುದಕ್ಕೆ ಆಗುತ್ತಿಲ್ಲ. ಅವರು ನೇರವಾಗಿ ಶ್ರೀರಾಮನ ಪೂಜೆ ಮಾಡುವುದಕ್ಕೆ ಆಗುತ್ತಿಲ್ಲ. ಬುಡಕಟ್ಟು ಸಮುದಾಯದವರ ಮೂಲ ಸಂಸ್ಕೃತಿ ಉಳಿಸುವ ಕೆಲಸ ಆಗಬೇಕಿದೆ ಎಂದರು.

ಜಾನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಜಾನಪದ ಸಂಸ್ಕೃತಿ ಡಿಜಿಟಲಿಕರಣ ಮಾಡುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಲೇಖಕ ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ, ನಾಡೋಜ ಎಚ್‌.ಎಲ್‌.ನಾಗೇಗೌಡ ಅವರು ರಾಮನಗರದ 15 ಎಕರೆ ಪ್ರದೇಶದಲ್ಲಿ ಸ್ಥಾಪಿಸಿದ ಜಾನಪದ ಲೋಕವು ವಂಡರ್ ಲಾ ಮೀರಿಸುವಂತಿದ್ದು, ಯುವಕರು ಭೇಟಿ ನೀಡಿ ಒಮ್ಮೆಯಾದರೂ ವೀಕ್ಷಿಸಬೇಕು. ವಿದ್ಯಾರ್ಥಿಗಳು ಬದುಕಿಗೆ ಹೊಸ ಚಲುವನ್ನು ನೀಡುವ ಜಾನಪದ ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಜಾನಪದದಲ್ಲಿ ಸ್ತ್ರೀಯರಿಗೆ ಹೆಚ್ಚಿನ ಮಾನ್ಯತೆ ನೀಡಲಾಗಿದ್ದು, ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಜಾನಪದ ಪರಿಷತ್‌ಗೆ ಯುನೆಸ್ಕೋ ಮಾನ್ಯತೆ ನೀಡುವ ಮೂಲಕ ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ರಾಜ್ಯವು ಜಾನಪದದಲ್ಲಿ ಅತ್ಯಂತ ಶ್ರೀಮಂತವಾಗಿದ್ದು, 172 ಕಲಾಪ್ರಕಾರಗಳು ರಾಜ್ಯದಲ್ಲಿವೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಜಾನಪದ ಕಲಾ ಪ್ರಕಾರಗಳನ್ನು ಹೊಂದಿರುವ 2ನೇ ರಾಜ್ಯವಾಗಿದೆ. ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಜಾನಪದ ಉಳಿಸುವ ನಿಟ್ಟಿನಲ್ಲಿ ಶ್ರಮಿಸಿದ ನಾಡೋಜ ಎಚ್‌.ಎಲ್‌.ನಾಗೇಗೌಡ ಅವರ ಹೆಸರಿನಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 2015ರಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪ್ರತಿ ಮೂರು ವರ್ಷಕ್ಕೆ ಒಬ್ಬರಿಗೆ ರಾಜ್ಯದ ಜಾನಪದ ಕಲಾವಿದರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್‌ ಉಪಸ್ಥಿತರಿದ್ದರು.

12 ಜೋಗಿ ಸಮುದಾಯವನ್ನು ಎಸ್ಸಿ-ಎಸ್ಟಿಗೆ ಸೇರಿಸಿ: ಗುಡ್ಡಪ್ಪ

ನಾಡೋಜ ಎಚ್‌.ಎಲ್‌.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಿನ್ನರಿ ಜೋಗಿ ಕಲಾವಿದ ಗುಡ್ಡಪ್ಪ ಜೋಗಿ, ರಾಜ್ಯದಲ್ಲಿ ಕೇವಲ 2.5 ಲಕ್ಷದಿಂದ 3 ಲಕ್ಷ ಜೋಗಿ ಸಮುದಾಯವಿದ್ದು, ಈ ಪೈಕಿ ಹಳ್ಳಿ ಜೋಗಿ ಸಮುದಾಯವನ್ನು ಎಸ್ಸಿ-ಎಸ್ಟಿಗೆ ಸೇರಿಸಲಾಗಿದೆ. ಬಳಿಗಾರ ಜೋಗಿ ಸೇರಿದಂತೆ ಉಳಿದಂತೆ 12 ಜೋಗಿ ಸಮುದಾಯವನ್ನೂ ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ಸಾಗರ ತಾಲೂಕಿನ ಹೊಸೂರಿನ ಗುಡ್ಡಪ್ಪ ಜೋಗಿ ಅವರಿಗೆ ₹1 ಲಕ್ಷ ನಗದು ಪುರಸ್ಕಾರದೊಂದಿಗೆ, ನಾಡೋಜ ಎಚ್‌.ಎಲ್‌.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.