ಗೃಹ ಸಚಿವ ಅಮಿತ್ ಶಾ ಗಡಿಪಾರಿಗೆ ಆಗ್ರಹ

| Published : Dec 29 2024, 01:20 AM IST

ಸಾರಾಂಶ

ದಾವಣಗೆರೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅವಮಾನಕರವಾಗಿ ಮಾತನ್ನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ದಾವಣಗೆರೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅವಮಾನಕರವಾಗಿ ಮಾತನ್ನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಿಂದ ಒಕ್ಕೂಟದ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಸ್ಲಿಂ ಧರ್ಮೀಯರು, ವಿವಿಧ ಸಂಘಟನೆಯವರು ಬಳಿಕ ಮಹಾತ್ಮ ಗಾಂಧಿ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಾ, ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಒಕ್ಕೂಟದ ಸಂಚಾಲಕ ಟಿ.ಅಸ್ಗರ್‌, ಬಾಬಾ ಸಾಹೇಬ್ ಅಂಬೇಡ್ಕರ್‌ ಬಗ್ಗೆ ಲೋಕಸಭೆ ಅಧಿವೇಶನದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಮಾನಿಸುವ ರೀತಿ ಹೇಳಿಕೆ ನೀಡಿರುವುದು ಅಕ್ಷಮ್ಯ. ಅಮಿತ್ ಶಾ ಹೇಳಿಕೆಯಿಂದಾಗಿ ಸಂವಿಧಾನವನ್ನು ಒಪ್ಪುವ ದೇಶದ ಬಹು ಸಂಖ್ಯಾತ ಜನರ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್ ಶಾ ಹೇಳಿಕೆಗಳು ದೇಶದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿದೆ. ಆದ್ದರಿಂದ ತಕ್ಷಣ‍ವೇ ಅಮಿತ್ ಶಾಗೆ ಕೇಂದ್ರ ಗೃಹ ಸಚಿವ ಸ್ಥಾನ ಹಾಗೂ ಲೋಕಸಭಾ ಸದಸ್ಯತ್ವದಿಂದ ವಜಾ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳು ಕೇಂದ್ರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಕಲಾಪದಲ್ಲಿ ಅಮಿತ್ ಶಾ ಮಾತನಾಡುತ್ತಾ, ಈಗಂದೂ ಒಂದು ಫ್ಯಾಷನ್ ಆಗಿದೆ ಬಿಟ್ಟಿದೆ. ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು. ಇಷ್ಟು ಸಲ ದೇವರ ಹೆಸರನ್ನಾದರೂ ಹೇಳಿದ್ದರೆ, ಏಳೇಳು ಜನ್ಮಗಳಷ್ಟು ಕಾಲ ಸ್ವರ್ಗ ಸಿಗುತ್ತಿತ್ತು ಎಂದು ಹೇಳುವ ಮೂಲಕ ಬಾಬಾ ಸಾಹೇಬರಿಗೆ ಅಮಿತ್ ಶಾ ಅವಮಾನಕರ ಹೇಳಿಕೆ ನೀಡಿದ್ದಾರೆ. ಇದರಿಂದ ಸಂವಿಧಾನವನ್ನು ಒಪ್ಪುವ, ಬಾಬಾ ಸಾಹೇಬ್ ಅಂಬೇಡ್ಕರರನ್ನು ಆಧರಿಸುವ, ಅನುಸರಿಸುವವರಿಗೆ ಅಮಿತ್ ಶಾ ಹೇಳಿಕೆ ತೀವ್ರ ನೋವನ್ನುಂಟು ಮಾಡಿದೆ ಎಂದರು.

ಅಮಿತ್ ಶಾ ಹೇಳಿಕೆ ವಿರುದ್ಧ ದೇಶವ್ಯಾಪಿ ಹೋರಾಟಗಳು ನಡೆಯುತ್ತಿವೆ. ದೇಶದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿರುವ ಅಮಿತ್ ಶಾ ಅವರನ್ನು ಸಚಿವ ಸ್ಥಾನ ಹಾಗೂ ಸಂಸತ್ ಸದಸ್ಯತ್ವದಿಂದವೇ ವಜಾ ಮಾಡಬೇಕು. ಅಂಬೇಡ್ಕರ್ ಬಗ್ಗೆ ಯಾರೇ ಹೀಗೆ ಮಾತನಾಡಿದರೂ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಆಗಬೇಕು ಎಂದು ತಾಕೀತು ಮಾಡಿದರು.

ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆಯನ್ನು ದೇಶದ್ರೋಹವೆಂದು ಪರಿಗಣಿಸಿ, ತಕ್ಷಣವೇ ಅಮಿತ್ ಶಾ ನಾಗರಿಕತೆಯನ್ನು ರದ್ದುಪಡಿಸಿ, ದೇಶದಿಂದಲೇ ಗಡಿಪಾರು ಮಾಡಬೇಕು. ಈ ಬಗ್ಗೆ ರಾಷ್ಟ್ರಪತಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಇಂದು ಅಮಿತ್ ಶಾ ಹೇಳಿಕೆ ವಿರುದ್ಧ ದೇಶವ್ಯಾಪಿ ತೀವ್ರ ಸ್ವರೂಪದ ಹೋರಾಟ ನಡೆದಿದ್ದು, ಈ ಎಲ್ಲಾ ಅಂಶಗಳನ್ನು ರಾಷ್ಟ್ರಪತಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಕೀಲ ಇಬ್ರಾಹಿಂ ಖಲೀಲುಲ್ಲಾ, ಒಕ್ಕೂಟದ ಜಬೀವುಲ್ಲಾ ಬಾಟಲಿ, ಬಾಷಾ, ತಾಹೀರ್ ಸಮೀರ್, ಮಹಮ್ಮದ್ ಅಲಿ ಶೋಯಬ್‌, ಆಟೋ ದಾದಾಪೀರ್‌, ಟಿ.ರಫೀಕ್, ಲಿಯಾಖತ್ ಅಲಿ, ವೈ.ಖ್ವಾಜಾ ಮೊಹಿದ್ದೀನ್, ಮೊಹಮ್ಮದ್ ಮುಜಾಮಿಲ್ ಪಾಷಾ, ಅಬ್ದುಲ್ ರಹೀಂ, ಎಸ್‌ಡಿಪಿಐನ ಅಬು ತಾಲಿಬ್‌, ಅಫ್ತಾಬ್‌, ಸೈಯದ್ ರಿಯಾಜ್‌, ಇದಾಯತ್ ಇತರರು ಇದ್ದರು.