ಸಾರಾಂಶ
ಹುಬ್ಬಳ್ಳಿ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಸದಿರುವಂತೆ ಎಚ್ಚರಿಕೆ ನೀಡಲು ಶನಿವಾರ ಇಲ್ಲಿನ ಕಾರವಾರ ರಸ್ತೆಯ ಸಿಎಆರ್ ಮೈದಾನದಲ್ಲಿ ಎನ್‌ಡಿಪಿಎಸ್ ಪ್ರಕರಣದಲ್ಲಿ ಭಾಗಿಯಾಗಿರುವ 200ಕ್ಕೂ ಹೆಚ್ಚು ಆರೋಪಿಗಳ ಪರೇಡ್ ನಡೆಸಲಾಯಿತು.
ಈ ವೇಳೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಹೊಸ ವರ್ಷದ ಆಚರಣೆಗೆ ಮಹಾನಗರದಲ್ಲಿ ಸಿದ್ಧತೆಗಳು ಆರಂಭವಾಗಿವೆ. ಅಂದು ವಿವಿಧ ಕಾರ್ಯಕ್ರಮ ನಡೆಯಲಿದ್ದು ಆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ 200ಕ್ಕೂ ಅಧಿಕ ಅಪರಾಧ ಹಿನ್ನೆಲೆವುಳ್ಳವರ ಪರೇಡ ನಡೆಸಲಾಗಿದೆ ಎಂದರು.
50 ದೂರು ದಾಖಲು:
ಕಳೆದ 10 ವರ್ಷಗಳಲ್ಲಿ ದಾಖಲಾದ ಪ್ರಕರಣಗಳ ಆಧಾರದ ಮೇಲೆ 440ಕ್ಕೂ ಅಧಿಕ ಅಪರಾಧ ಹಿನ್ನೆಲೆವುಳ್ಳವರನ್ನು ಗುರುತಿಸಲಾಗಿದೆ. ಇವರಲ್ಲಿ 50ಕ್ಕೂ ಅಧಿಕ ಅಪರಾಧ ಹಿನ್ನೆಲೆ ಉಳ್ಳವರ ಮೇಲೆ ಎನ್‌ಡಿಪಿಎಸ್ ಅಡಿ ವಿವಿಧ ಪ್ರಕರಣ ದಾಖಲಿಸಲಾಗಿದೆ. ಇವರೊಂದಿಗೆ 200ಕ್ಕೂ ಅಧಿಕ ಅಪರಾಧ ಹಿನ್ನೆಲೆ ಉಳ್ಳವರನ್ನು ಕರೆದು ಮತ್ತೊಮ್ಮೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ಸೂಚನೆ ನೀಡಲಾಗಿದೆ. ಇನ್ನುಳಿದ 230 ಜನರಲ್ಲಿ 50ಕ್ಕೂ ಹೆಚ್ಚು ಜನ ಹೊರ ರಾಜ್ಯದಲ್ಲಿ ನೆಲಸಿದ್ದಾರೆ. 30ಕ್ಕೂ ಹೆಚ್ಚು ಜನ ವಿವಿಧ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ. ಇವರಲ್ಲಿ 8-10 ಜನ ಮೃತಪಟ್ಟಿದ್ದರೆ ಇನ್ನೂ 110ಕ್ಕೂ ಅಧಿಕ ಜನರ ಸಂಪೂರ್ಣ ಮಾಹಿತಿ ದೊರೆತಿಲ್ಲ ಎಂದು ಕಮಿಷನರ್ ತಿಳಿಸಿದರು.
ಇಂದು ಹೊಟೇಲ್ ಮಾಲೀಕರ ಸಭೆ:ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ, ಹೆಚ್ಚುವರಿಯಾಗಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದೆ. ಮನೆಯಲ್ಲಿ ವರ್ಷಾಚರಣೆಗೆ ಯಾವುದೇ ರೀತಿಯ ಅಡ್ಡಿಗಳಿಲ್ಲ. ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವಾಗ ಪಾಲಿಸಬೇಕಾದ ನಿಯಮಗಳ ಕುರಿತು ಡಿ. 29ರಂದು ಹೋಟೆಲ್‌ಗಳ ಮಾಲೀಕರ ಸಭೆ ಕರೆದು ಸೂಚಿಸಲಾಗುವುದು ಎಂದರು.
ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ, ಎಸಿಪಿಗಳಾದ ಶಿವಪ್ರಕಾಶ ನಾಯಕ, ಡಾ. ಶಿವರಾಜ ಕಟಕಭಾವಿ, ವಿನೋದ ಮುತ್ತೇದಾರ, ವಿಜಯಕುಮಾರ ತಳವಾರ ಸೇರಿದಂತೆ ಹಲವರಿದ್ದರು.