ಹಾಳಾದ ರಸ್ತೆ: ಗ್ರಾಮಸ್ಥರಿಂದಲೇ ದುರಸ್ತಿ

| Published : Dec 29 2024, 01:20 AM IST

ಸಾರಾಂಶ

ಹಿಂದೆಂದಿಗಿಂತಲೂ 2024ನೇ ವರ್ಷದಲ್ಲಿ ಮೂರ್ನಾಲ್ಕು ತಿಂಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲಾದ್ಯಂತ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: 2024ನೇ ಸಾಲಿನಲ್ಲಿ ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿ ರಸ್ತೆಗಳು ಹಾಳಾಗಿ ಹೋಗಿದ್ದವು. ಅವುಗಳನ್ನು ರಸ್ತೆಗಳು ಎಂತಲೂ ಕರೆಯದ ಸ್ಥಿತಿ ತಲುಪಿವೆ. ಹೀಗಾಗಿ, ಸಂಚಾರ ಸಾಧ್ಯವೇ ಇಲ್ಲ ಎನ್ನುವ ರಸ್ತೆಗಳನ್ನು ಆಯಾ ಗ್ರಾಮಸ್ಥರೇ ಮರ್ರಂ ಹಾಕಿ, ದುರಸ್ತಿ ಮಾಡಿಕೊಳ್ಳುತ್ತ ಆಡಳಿತ ವ್ಯವಸ್ಥೆಯನ್ನು ಅಣಕಿಸಿದ ಗಟನೆ ನಡೆಯಿತು.

ಹಿಂದೆಂದಿಗಿಂತಲೂ 2024ನೇ ವರ್ಷದಲ್ಲಿ ಮೂರ್ನಾಲ್ಕು ತಿಂಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲಾದ್ಯಂತ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಈ ರಸ್ತೆಗಳನ್ನು ನೋಡಿದರೆ ಈ ರಸ್ತೆಗಳ ದುರಸ್ತಿ ಮಾಡಿ ಅಥವಾ ಡಾಂಬರು ಹಾಕಿ ಎಷ್ಟು ವರ್ಷವಾಯಿತೋ ಎಂಬ ಭಾವನೆ ಬರದೇ ಇರದು. ವಾಹನ ಸಂಚಾರವಿರಲಿ, ಚಕ್ಕಡಿಗಳೂ ಸಹ ಅಲ್ಲಿ ಸಾಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದೇಣಿಗೆ ಸಂಗ್ರಹಿಸಿ ರಿಪೇರಿ

ಇದರಿಂದ ರೊಚ್ಚಿಗೆದ್ದ ಕಿನ್ನಾಳ ಗ್ರಾಮದ ಯುವಕರು ತಾವೇ ಸ್ವಯಂ ಪ್ರೇರಿತರಾಗಿ ಹಣ ಸಂಗ್ರಹ ಮಾಡಿ, ಕೊಪ್ಪಳದಿಂದ ಕಿನ್ನಾಳ ವರೆಗಿನ ರಸ್ತೆಯನ್ನು ದುರಸ್ತಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಕೊಟ್ಟು ಕೊಟ್ಟು ಸುಸ್ತಾಗಿ, ಕೊನೆಗೆ ವಿಧಿಯಿಲ್ಲದೆ ಗ್ರಾಮದ ಯುವಕರು ಲಕ್ಷಾಂತರ ರುಪಾಯಿ ವೆಚ್ಚ ಮಾಡಿ, ದುರಸ್ತಿ ಮಾಡಿಸಿಕೊಂಡಿದ್ದಾರೆ.

ಇದನ್ನು ಗಮನಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರೇ ಅವರನ್ನು ಕರೆಯಿಸಿ, ಸನ್ಮಾನಿಸಿದ್ದಾರೆ. ಅಷ್ಟೇ ಅಲ್ಲ, ಈ ರಸ್ತೆಯ ದುರಸ್ತಿಗೆ ಕ್ರಮವಹಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ಆದರೂ ಇದುವರೆಗೂ ರಸ್ತೆಯನ್ನು ಶಾಶ್ವತವಾಗಿ ದುರಸ್ತಿ ಮಾಡುವ ಕಾರ್ಯ ಆಗಿಲ್ಲ.

ಇದೊಂದೇ ಪ್ರಕರಣವಲ್ಲ, ತಾಲೂಕಿನ ಕಾತರಕಿ ಗ್ರಾಮದ ರಸ್ತೆಯೂ ತೀವ್ರ ಹದಗೆಟ್ಟು ಹೋಗಿತ್ತು. ಗ್ರಾಮಸ್ಥರು ತಾವೇ ದುಡ್ಡು ಹಾಕಿಕೊಂಡು ಗ್ರಾಮದಲ್ಲಿಯೇ ಇರುವ ಟಿಪ್ಪರ್ ಮತ್ತು ಜೆಸಿಬಿ ಬಳಕೆ ಮಾಡಿಕೊಂಡು ರಸ್ತೆ ದುರಸ್ತಿ ಮಾಡಿಸಿದ್ದಾರೆ.

ಬೀದಿಗಿಳಿದ ಮಹಿಳೆಯರು

ಕವಲೂರು ಗ್ರಾಮದ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ತಮ್ಮೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮದಲ್ಲಿ ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದಾರೆ. ತಹಸೀಲ್ದಾರ್ ಅವರ ಜೀಪ್ ತಳ್ಳಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕವಲೂರು ಗ್ರಾಮಕ್ಕೆ ಹೋಗುವ ಯಾವುದೇ ರಸ್ತೆಯಲ್ಲಿ ಸಂಚಾರ ಮಾಡಿದರೂ ಮೈಕೈಯಲ್ಲಾ ನೋವಾಗುತ್ತದೆ. ಗರ್ಭಿಣಿಯರಿಗೆ ಹೆರಿಗೆಯಾಗುತ್ತದೆ. ರಸ್ತೆಗಳು ಅಷ್ಟು ಹದಗೆಟ್ಟಿವೆ. ಇಂಥ ರಸ್ತೆ ದುರಸ್ತಿಗೆ ಆಗ್ರಹಿಸಿ ಹೋರಾಟ ಮಾಡಿದಾಗ ಗ್ರಾಮಸ್ಥರ ಮೇಲೆಯೇ ಕೇಸ್ ಜಡಿಯಲಾಗಿದೆ.

ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ರಸ್ತೆಗಳು ಸರಿಯಾಗಿಲ್ಲ. ಹೀಗಾಗಿ, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ದೀಪ ಹಚ್ಚಿ ಸಾರ್ವಜನಿಕರು ಪ್ರತಿಭಟನೆ ಮಾಡಿದ್ದಾರೆ. ಇಷ್ಟಾದರೂ ರಸ್ತೆ ದುರಸ್ತಿ ಮಾಡುವ ದಿಸೆಯಲ್ಲಿ ಆಡಳಿತ ಮುಂದಾಗಿಲ್ಲ. ಬಲವಾಗಿ ಪ್ರತಿಭಟನೆ ಮಾಡಿದ ಕೆಲವೆಡೆ ಕೆಲವೊಂದು ರಸ್ತೆಗಳನ್ನು ದುರಸ್ತಿ ಮಾಡಲಾಗಿದೆಯೇ ಹೊರತು ಉಳಿದೆಲ್ಲ ರಸ್ತೆಗಳ ಸ್ಥಿತಿ ಹಾಗೆ ಇದೆ.