ಸಾರಾಂಶ
ಗಂಗಾವತಿ: ತಾಲೂಕಿನ ಹಿರೇಬೆಣಕಲ್‌ನ ಮೋರೇರ ಬೆಟ್ಟದ ಬಳಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಹಿರೇಬೆಣಕಲ್, ಚಿಕ್ಕಬೆಣಕಲ್ ಸೇರಿದಂತೆ ವಿವಿಧ ಗ್ರಾಮಗಳ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿರೇಬೆಣಕಲ್ ಶಿಲಾ ಸ್ಮಾರಕಗಳ ಬಳಿ ಅಣು ಸ್ಥಾವರ ಸ್ಥಾಪನೆ ಮಾಡುತ್ತಿದ್ದಾರೆಂಬ ಸುದ್ದಿ ಹರಡುತಿದ್ದಂತಯೇ ಗ್ರಾಮಸ್ಥರು ಒಗ್ಗಟ್ಟಾಗಿ ಸಭೆ ನಡೆಸಿ ಹೋರಾಟದ ಸಿದ್ಧತೆ ಬಗ್ಗೆ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಶರಣೇಗೌಡ ಅವರು ಕನ್ನಡಪ್ರಭ–ಸುವರ್ಣ ನ್ಯೂಸ್‌ನ ಕರ್ನಾಟಕದ 7 ಅದ್ಭುತಗಳಲ್ಲಿ ಮೋರೇರ್ ತಟ್ಟೆಗಳಿಗೆ ಮೊದಲ ಸ್ಥಾನ ನೀಡಿ ಗುರುತಿಸಲಾಗಿದೆ. ಯುನೋಸ್ಕೋ ಪಟ್ಟಿಯಲ್ಲಿ ಸೇರ್ಪಡೆಗೆ ಶಿಫಾರಸುಗೊಂಡಿದೆ. ಆದರೀಗ, ಜಿಲ್ಲಾಧಿಕಾರಿ ಏಕಾಏಕಿ ಮೋರೇರ್ ಬೆಟ್ಟದಿಂದ ಎಡೇಹಳ್ಳಿಯವರೆಗೂ ಅರಣ್ಯ ಪ್ರದೇಶದ ಸುಮಾರು 1200 ಎಕರೆ ಭೂಮಿಯನ್ನು ಸರ್ವೇ ಮಾಡಿಸಿ ಸರಕಾರಕ್ಕೆ ಕಳುಹಿಸಿಕೊಟ್ಟಿರುವುದು ಖಂಡನೀಯ ಎಂದರು.
ಅಣುಸ್ಥಾವರ ಸ್ಥಾಪನೆಯಿಂದ ಜೀವ ಸಂಕುಲಕ್ಕೆ ಧಕ್ಕೆಯಾಗುವುದಲ್ಲದೆ ಇದರ ಸುತ್ತಮುತ್ತಲಿನ ಪ್ರದೇಶ ಕಲುಷಿತಗೊಂಡು ಗ್ರಾಮಸ್ಥರು ರೋಗಗ್ರಸ್ತರಾಗುತ್ತಾರೆ. ಕಾರಣ ಕೂಡಲೆ ಜಿಲ್ಲಾಧಿಕಾರಿಗಳು ಇದನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ಗುರುತಿಸಿದ ಸ್ಥಳದ ಸನೀಹದಲ್ಲಿ ಐತಿಹಾಸಿಕ ಅಂಜನಾದ್ರಿ, ಹಂಪಿ, ಕುಮಾರರಾಮನ ಬೆಟ್ಟ, ಹೇಮಗುಡ್ಡ ಸೇರಿದಂತೆ ಐತಿಹಾಸಿಕ ಸ್ಮಾರಕಗಳಿವೆ. ಇಲ್ಲಿ ಘಟಕ ಸ್ಥಾಪನೆ ಮಾಡಿದರೆ ಪ್ರವಾಸಿಗರಿಗೂ ತೊಂದರೆಯಾಗುವುದಲ್ಲದೆ ಐತಿಹಾಸಿಕ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತದೆ. ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ ಅವರು, ಮುಂದಿನ 2-3 ದಿನದೊಳಗಾಗಿ ಹೋರಾಟದ ರೂಪರೇಷೆ ಮಾಡಿಕೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆನಂದಗೌಡ, ವೀರೇಶ ಅಂಗಡಿ, ಲಿಂಗಪ್ಪ ಮಠದ, ಲಿಂಗಪ್ಪ ಇಂದರಗಿ, ಯಮನೂರಪ್ಪ ನೀರಲೂಟಿ, ಗೆದಪ್ಪ, ಶಿವಕುಮಾರ ಸೇರಿದಂತೆ ಇತರರು ಭಾಗವಹಿಸಿದ್ದರು.
ಹಿರೇಬೆಣಕಲ್ ಬಳಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಸೂಕ್ತವಲ್ಲ: ಕೋಲ್ಕಾರ್
ಗಂಗಾವತಿ: ತಾಲೂಕಿನ ಹಿರೇಬೆಣಕಲ್ ಬಳಿಯ ಮೋರೇರ್ ಬೆಟ್ಟದ ಬಳಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುತ್ತಿರುವುದು ಸೂಕ್ತವಲ್ಲ ಎಂದು ಸಂಶೋಧಕ ಹಾಗೂ ಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿರೇಬೆಣಕಲ್ ಬೆಟ್ಟದ ಮೇಲೆ ಮೋರೇರ ಶಿಲಾ ಸಮಾಧಿಗಳಿವೆ. ಆದಿ ಮಾನವನ ಇತಿಹಾಸ ಇಲ್ಲಿದೆ. ಅಲ್ಲದೇ ಇದಕ್ಕೆ ಪೂರಕವಾಗಿ ಗವಿಚಿತ್ರಗಳನ್ನು ಕಾಣಬಹುದಾಗಿದೆ. ಇಂತಹ ಐತಿಹಾಸಿಕ ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುತ್ತಿರುವುದು ಸರಿಯಲ್ಲ ಎಂದರು.
ವನಸ್ಪತಿ ಗಿಡಮೂಲಿಕೆಗಳು ಈ ಅರಣ್ಯ ಪ್ರದೇಶದಲ್ಲಿವೆ. ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 1200 ಎಕರೆ ಪ್ರದೇಶ ನಿಗದಿ ಮಾಡಿರುವುದು ಸರಿಯಲ್ಲ. ತಹಸೀಲ್ದಾರ್ ಅವರು ಏಕಾಏಕಿಯಾಗಿ ಈ ಜಾಗೆಯನ್ನು ಗುರುತಿಸಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿರುವುದು ಸೂಕ್ತ ಅಲ್ಲ ಎಂದು ಡಾ. ಶರಣಬಸಪ್ಪ ಕೋಲ್ಕಾರ್ ಆಕ್ಷೇಪಿಸಿದರು.