ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತರು ಬೈಬಲ್ ಪಠಣ, ವಿಶೇಷ ಪ್ರಾರ್ಥನೆ, ಕೇಕ್ ಸೇರಿ ಸಿಹಿತಿನಿಸುಗಳ ವಿತರಣೆಯೊಂದಿಗೆ ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಿದರು.ಶಿವಾಜಿನಗರ ಸೆಂಟ್ ಮೇರಿಸ್ ಬೆಸಿಲಿಕಾ ಚರ್ಚ್, ಎಂ.ಜಿ. ರಸ್ತೆಯ ಸೆಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್, ಕ್ಲೈವ್ ಲ್ಯಾಂಡ್ ಟೌನ್‌ನಲ್ಲಿನ ಸೆಂಟ್ ಫ್ರಾನ್ಸಿಸ್ ಕ್ಸೆವಿಯರ್ ಕೆಥಡ್ರಲ್, ಸೆಂಟ್ ಜಾನ್ಸ್ ಚರ್ಚ್, ಚಾಮರಾಜಪೇಟೆಯ ಸೆಂಟ್ ಲ್ಯೂಕ್ಸ್ ಚರ್ಚ್ ಸೇರಿದಂತೆ ನಗರದ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಸಂಜೆ ವೇಳೆಗೆ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕ್ರಿಸ್‌ಮಸ್‌ಗಾಗಿ ಮನೆಯನ್ನು ಅಲಂಕರಿಸಲಾಗಿವೆ. ವಿದ್ಯುತ್ ದೀಪಗಳಿಂದ ಕ್ರಿಸ್ಮಸ್ ಟ್ರೀ, ನಕ್ಷತ್ರ, ಕಲರ್ ಬಾಲ್ ಸಿಂಗಾರಗೊಂಡಿವೆ. ಮನೆಯಲ್ಲಿಯೂ ಗೋದಲಿಯನ್ನೂ ಇಟ್ಟು ಜನನ ಕಾಲದ ಚಿತ್ರಣವನ್ನು ರೂಪಿಸಲಾಗಿದೆ. ಏಸು, ಮೇರಿ, ದೇವದೂತರು, ಕುರುಬರು, ಜ್ಞಾನಿಗಳ ಸಣ್ಣ ಸಣ್ಣ ಮೂರ್ತಿಗಳನ್ನು ಇಡಲಾಗಿದೆ. ಕ್ರೈಸ್ತರು ಮಾತ್ರವಲ್ಲದೆ ಇತರೆ ಧರ್ಮಿಯರೂ ಕೂಡ ವರ್ಷಾಂತ್ಯದ ಈ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಹಬ್ಬದ ಪ್ರಯುಕ್ತ ಪ್ಲಮ್ ಕೇಕ್‌ನಿಂದ ಹಿಡಿದು, ಕಲ್ಕಲ್ , ಕುಕೀಸ್, ಕರ್ಜಿಕಾಯಿ, ಅಕ್ಕಿ ಉಂಡೆ, ಎಳ್ಳು ಉಂಡೆ ಹಲವಾರು ಶೈಲಿಯ ಸಿಹಿ ತಿನಿಸನ್ನು ತಯಾರಿಸಿ ಸವಿದರು. ವಿದೇಶಿ ಚಾಕೊಲೆಟ್‌ಗಳನ್ನು ತರಿಸಿಕೊಂಡಿದ್ದಾರೆ. ಕ್ರಿಸ್ಮಸ್ ದಿನ ನೆರೆಯ ಇತರ ಸಮುದಾಯದವರಿಗೆ ಹಂಚಿಕೊಂಡರು.
ಕ್ರಿಸ್‌ಮಸ್ ಪ್ರಯುಕ್ತ ನಗರದ ಪ್ರಮುಖ ಬೀದಿಗಳು, ಮಾಲ್‌ಗಳು ಜಗಮಗಿಸುತ್ತಿವೆ. ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್, ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಮಾಲ್‌ಗಳು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳು, ಕ್ರಿಸ್‌ಮಸ್ ಟ್ರೀ, ಸಾಂತಾಕ್ಲಾಸ್ ಪ್ರತಿಕೃತಿಗಳಿಂದ ಸಿಂಗಾರಗೊಂಡಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ.ಬಹುತೇಕ ಎಲ್ಲ ಮಾಲ್‌ಗಳಲ್ಲೂ ಸಂತಾ ವರ್ಲ್ಡ್ ನಿರ್ಮಾಣ ಮಾಡಲಾಗಿದೆ. ಮಳಿಗೆ, ಹೊಟೆಲ್ ಮಾಲ್‌ಗಳಿಗೆ ಭೇಟಿ ನೀಡುವ ಗ್ರಾಹಕರನ್ನು ಸಂತಾ ಕ್ಲಾಸ್ ವೇಷಧಾರಿಗಳು ಸ್ವಾಗತಿಸುವ ದೃಶ್ಯಗಳು ಎಲ್ಲೆಡೆ ಕಂಡುಬಂದವು. ಮಕ್ಕಳನ್ನು ಎತ್ತಿ ಆಡಿಸಿ, ಚಾಕೊಲೇಟ್ ಮತ್ತು ಕ್ಯಾಂಡಿಗಳನ್ನು ನೀಡಿ ಶುಭ ಕೋರುತ್ತಿದ್ದಾರೆ. ಹೊಸ ವರ್ಷದವರೆಗೂ ಈ ಸಂಭ್ರಮ ಮುಂದುವರಿಯಲಿದೆ.