ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಹವಾಮಾನ ವೈಪರೀತ್ಯ, ಕೂಲಿಯಾಳುಗಳ ಸಮಸ್ಯೆಗಳಿಂದಾಗಿ ಭತ್ತದ ಕೃಷಿಯನ್ನೇ ಕೈ ಬಿಡುತ್ತಿರುವ ಇಂತಹ ಕಾಲಘಟ್ಟದಲ್ಲಿ ಸುಮಾರು 45 ಎಕರೆ ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಬರೆದ ಕೋಡಿಯ ಗಂಗಾಧರ ಪೂಜಾರಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅರ್ಹವಾಗಿಯೇ ಸಿಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದರು.ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೃಷಿಕ ಗಂಗಾಧರ ಪೂಜಾರಿ ಕೋಡಿ ಅವರಿಗೆ ಇಲ್ಲಿನ ಕೋಡಿಯ ಚಕ್ರಮ್ಮ ಸಭಾಭವನದಲ್ಲಿ ಭಾನುವಾರ ಸಂಜೆ ಜರುಗಿದ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹುಟ್ಟೂರ ಸನ್ಮಾನ ಹೆಮ್ಮೆಯ ಸನ್ಮಾನ. ಹುಟ್ಟೂರ ಸನ್ಮಾನಕ್ಕಿಂತ ಮಿಗಿಲು ಬೇರಾವುದೇ ಸನ್ಮಾನವಿಲ್ಲ. ನಿಷ್ಠೆಯಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಕೋಡಿಯ ಕೃಷಿಕ ಗಂಗಾಧರ ಪೂಜಾರಿ ಸಾಕ್ಷಿ ಎಂದರು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿದರು.ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷಿಕ ಗಂಗಾಧರ ಪೂಜಾರಿ, ನನ್ನ ತಂದೆ ವರ್ಷದ 365 ದಿನವೂ ಕೃಷಿ ಗದ್ದೆಯಲ್ಲಿದ್ದು, ಕೃಷಿ ಚಟುವಟಿಕೆಯನ್ನು ನಡೆಸುತ್ತಾ ಬಂದವರು. ನನ್ನ ಬಾಲ್ಯದ ದಿನಗಳಲ್ಲಿ ತುತ್ತಿನ ಊಟಕ್ಕೂ ಪರದಾಡುತ್ತಿದ್ದೆವು. ತಂದೆಯ ಇಷ್ಟದ ಕ್ಷೇತ್ರ ಕೃಷಿಯನ್ನು ನಾನು ಮುಂದುವರಿಸಿಕೊಂಡು ಬಂದಿದ್ದೇನೆ. ಕೃಷಿ ಕ್ಷೇತ್ರದಲ್ಲಿನ ನನ್ನ ಸಾಧನೆಗೆ ನನ್ನ ತಂದೆಯೇ ಪ್ರೇರಣೆ. ತನಗೆ ಸಿಕ್ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ತಂದೆಗೆ ಅರ್ಪಿಸುತ್ತೇನೆ ಎಂದು ಭಾವುಕರಾಗಿ ಮಾತನಾಡಿದರು.
ಗೋಪಾಲ ಪೂಜಾರಿ ಕೋಡಿ ಅಧ್ಯಕ್ಷತೆ ವಹಿಸಿದ್ದರು.ಉದ್ಯಮಿ ಶ್ರೀನಿವಾಸ ಉಳ್ಳೂರು, ವಿದ್ಯುತ್ ಗುತ್ತಿಗೆದಾರ ಕೆ.ಆರ್ ನಾಯ್ಕ್, ಉದ್ಯಮಿ ರಾಜೇಂದ್ರ ಶೇರಿಗಾರ್, ಪುರಸಭಾ ಮಾಜಿ ಸದಸ್ಯೆ ಲಕ್ಷ್ಮೀ ಮಾತನಾಡಿದರು.
ರಾಘವೇಂದ್ರ ಪೂಜಾರಿ, ಶಂಕರ ಪೂಜಾರಿ, ತಿಮ್ಮಪ್ಪ ಖಾರ್ವಿ, ನಾಗರಾಜ ಕಾಂಚನ್, ಪುರಸಭೆ ಮಾಜಿ ಸದಸ್ಯರಾದ ಅಶ್ಪಕ್ ಕೋಡಿ, ಕಮಲ ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು.ಯೋಗೀಶ್ ಪೂಜಾರಿ ಕೋಡಿ ಸ್ವಾಗತಿಸಿದರು. ಸುನಿಲ್ ಪೂಜಾರಿ ಕೋಡಿ ವಂದಿಸಿದರು. ಸತೀಶ್ ವಡ್ಡರ್ಸೆ ನಿರೂಪಿಸಿದರು.ಕನ್ನಡಪ್ರಭ ವರದಿ ನೆನಪು...ನಮ್ಮ ಮನೆಯ ಕೃಷಿ ಗದ್ದೆಯ ಜೊತೆ ಆರಂಭದ ದಿನಗಳಲ್ಲಿ ಹಡಿಲು ಭೂಮಿಯನ್ನು ಗೇಣಿ ಪಡೆದು ಭತ್ತದ ಕೃಷಿ ಆರಂಭಿಸಿದಾಗ ಕನ್ನಡಪ್ರಭ ಸೇರಿದಂತೆ ವಿವಿಧ ಪತ್ರಿಕೆಗಳು ಪತ್ರಿಕೆ ನನ್ನ ಕೃಷಿ ಕಾಯಕವನ್ನು ಮೆಚ್ಚಿ ವರದಿ ಪ್ರಕಟಿಸಿತ್ತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒದಗಿ ಬರಲು ಮಾಧ್ಯಮಗಳ ವರದಿಗಳೇ ಕಾರಣ ಎಂದು ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದರು.
;Resize=(128,128))