ಸಿಐಡಿ ವಿಚಾರಣಾ ತಂಡಕ್ಕೆ ತಲೆನೋವಾದ ಸಚಿವ ಕೆ.ಎನ್‌.ರಾಜಣ್ಣ ಹನಿಟ್ರ್ಯಾಪ್‌ ಕೇಸ್‌

| N/A | Published : Apr 03 2025, 12:32 AM IST / Updated: Apr 03 2025, 10:30 AM IST

ಸಿಐಡಿ ವಿಚಾರಣಾ ತಂಡಕ್ಕೆ ತಲೆನೋವಾದ ಸಚಿವ ಕೆ.ಎನ್‌.ರಾಜಣ್ಣ ಹನಿಟ್ರ್ಯಾಪ್‌ ಕೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಒಂದೆಡೆ ತಮ್ಮ ಆಪಾದನೆಗೆ ಸಹಕಾರಿ ಸಚಿವ ಕೆ.ಎನ್‌.ರಾಜಣ್ಣ ಅವರು ಸಾಕ್ಷ್ಯ ನೀಡದೆ, ಮತ್ತೊಂದೆಡೆ ಪೂರಕವಾದ ಪುರಾವೆಗಳು ಪತ್ತೆಯಾಗದೆ ಹನಿಟ್ರ್ಯಾಪ್ ಯತ್ನ ಪ್ರಕರಣವೆಂಬುದು ಸಿಐಡಿ ವಿಚಾರಣಾ ತಂಡಕ್ಕೆ ತಲೆನೋವಾಗಿ ಪರಿಣಿಸಿದೆ. 

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು : ಒಂದೆಡೆ ತಮ್ಮ ಆಪಾದನೆಗೆ ಸಹಕಾರಿ ಸಚಿವ ಕೆ.ಎನ್‌.ರಾಜಣ್ಣ ಅವರು ಸಾಕ್ಷ್ಯ ನೀಡದೆ, ಮತ್ತೊಂದೆಡೆ ಪೂರಕವಾದ ಪುರಾವೆಗಳು ಪತ್ತೆಯಾಗದೆ ಹನಿಟ್ರ್ಯಾಪ್ ಯತ್ನ ಪ್ರಕರಣವೆಂಬುದು ಸಿಐಡಿ ವಿಚಾರಣಾ ತಂಡಕ್ಕೆ ತಲೆನೋವಾಗಿ ಪರಿಣಿಸಿದೆ. ಹೀಗಾಗಿ, ಸಚಿವರ ಹೇಳಿಕೆ ಆಧರಿಸಿ ಮುಂದುವರೆಯಲು ಸಿಐಡಿ ನಿರ್ಧರಿಸಿದೆ ಎನ್ನಲಾಗಿದೆ.

ಪ್ರಕರಣದ ಕುರಿತು ಸಿಐಡಿ ವಿಚಾರಣೆ ಕೈಗೆತ್ತಿಕೊಂಡು ವಾರ ಕಳೆದಿದ್ದು, ಈವರೆಗೆ ಹನಿಟ್ರ್ಯಾಪ್ ಗ್ಯಾಂಗ್‌ನ ಹೆಜ್ಜೆ ಗುರುತುಗಳು ಸಿಗದೆ ಅಧಿಕಾರಿಗಳು ಕೈ-ಕೈ ಹಿಸುಕಿಕೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ರಾಜಣ್ಣರವರನ್ನೇ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕ್ಕೆ ಸಿಐಡಿ ಮುಂದಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣ ಸಂಬಂಧ ಬೆಂಗಳೂರಿನ ಜಯಮಹಲ್ ರಸ್ತೆಯ ಸಚಿವರ ಅಧಿಕೃತ ಸರ್ಕಾರಿ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಆ ಸರ್ಕಾರಿ ಮನೆಗೆ ಸಿಸಿಟಿವಿ ಕ್ಯಾಮರಾಗಳಿಲ್ಲ, ಸಂದರ್ಶಕರ ಪುಸಕ್ತವೂ ಇಲ್ಲ. ಹೀಗಾಗಿ ಸಚಿವರ ನಿವಾಸಕ್ಕೆ ಬಂದು ಹೋದವರ ಲೆಕ್ಕ ಸಿಗುತ್ತಿಲ್ಲ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಇನ್ನು ಸಚಿವರ ಆಪ್ತ ಸಹಾಯಕ ಮಲ್ಲೇಶ್ ಹಾಗೂ ಗನ್ ಮ್ಯಾನ್‌ (ತುಮಕೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೇಬಲ್‌) ಶ್ರೀಧರ್‌ ಅವರನ್ನು ವಿಚಾರಣೆ ನಡೆಸಲಾಯಿತು. ತಮಗೆ ಹನಿಟ್ರ್ಯಾಪ್ ಯತ್ನ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಆ ಇಬ್ಬರು ಹೇಳಿಕೆ ನೀಡಿದ್ದಾರೆ. ಈಗ ಮತ್ತೆ ಸಚಿವರ ವಿಶೇಷಾಧಿಕಾರಿ ಹಾಗೂ ಮತ್ತೊಬ್ಬ ಗನ್‌ ಮ್ಯಾನ್‌ ಅವರಿಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದೇವೆ ಎಂದು ಮೂಲಗಳು ಹೇಳಿವೆ.

ಪ್ರಕರಣ ಕುರಿತು ಬಾಯಿಬಿಡದಂತೆ ಸಚಿವರ ಕಚೇರಿ ಸಿಬ್ಬಂದಿಗೆ ಒತ್ತಡವಿದೆಯೇ ಅಥವಾ ಅವರಿಗೆ ನಿಜವಾಗಿಯೂ ಏನೂ ಗೊತ್ತಿಲ್ಲವೇ ಎಂಬುದು ಖಚಿತವಾಗುತ್ತಿಲ್ಲ. ಪ್ರತಿ ಹಂತದಲ್ಲೂ ವಿಚಾರಣೆಗೆ ಅಸಹಕಾರ ವ್ಯಕ್ತವಾಗುತ್ತಿದೆ. ಹೀಗಾಗಿ ಕೃತ್ಯ ನಡೆದಿದೆಯೇ ಎಂಬುದು ಖಾತ್ರಿಪಡಿಸಲು ಸಾಕ್ಷ್ಯ ಕಲೆ ಹಾಕುವುದು ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಕತೆಗೆ ಸಚಿವರೇ ಸಾಕ್ಷ್ಯ ಕೊಡಲಿ:

ಹನಿಟ್ರ್ಯಾಪ್ ಯತ್ನ ಆರೋಪ ಸಂಬಂಧ ಪ್ರಾಥಮಿಕ ಹಂತವಾಗಿ ಸಚಿವರ ಸಿಬ್ಬಂದಿ ವಿಚಾರಣೆ ಹಾಗೂ ನಿವಾಸ ಪರಿಶೀಲನೆ ನಡೆಸಿ ಸಿಐಡಿ ಮಾಹಿತಿ ಕಲೆ ಹಾಕಿತು. ಆದರೆ ನಿರೀಕ್ಷಿಸಿದ ಮಟ್ಟದಲ್ಲಿ ಪುರಾವೆಗಳು ಸಿಗದೆ ವಿಚಾರಣೆ ಕವಲು ದಾರಿಗೆ ಬಂದು ನಿಂತಿದೆ. ಹೀಗಾಗಿಯೇ ಆರೋಪದ ಬಗ್ಗೆ ಸಚಿವ ರಾಜಣ್ಣ ಅವರಿಂದಲೇ ವಿವರಣೆ ಪಡೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಎರಡು ಬಾರಿ ಸಚಿವರ ವಿಚಾರಣೆಗೆ ಅಧಿಕಾರಿಗಳು ಯತ್ನಿಸಿದ್ದರು. ಆದರೆ ಯುಗಾದಿ, ರಂಜಾನ್‌ ಹಬ್ಬ ಹಾಗೂ ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಗುರುವಂದನಾ ಕಾರ್ಯಕ್ರಮ, ಈಗ ಮುಖ್ಯಮಂತ್ರಿಯವರ ಜತೆ ದೆಹಲಿ ಪ್ರವಾಸ ಹೀಗೆ ಸಚಿವರು ನಿರಂತರವಾಗಿ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದಾರೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಸಚಿವರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದ ಬಳಿಕ ಮುಂದಿನ ಹೆಜ್ಜೆಯಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.