ಸಾರಾಂಶ
ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜ್ಯದ ಸಚಿವರ ಮೇಲೆ ಆರೋಪ ಇರುವ ಬಗ್ಗೆ ಈಗಾಗಲೇ ಮಾಹಿತಿ ಹೊರ ಬಿದ್ದಿದೆ.
ಗಂಗಾವತಿ: ರಾಜ್ಯದಲ್ಲಿ ನಡೆದಿರುವ ಹನಿಟ್ರ್ಯಾಪ್ ಪ್ರಕರಣ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜ್ಯದ ಸಚಿವರ ಮೇಲೆ ಆರೋಪ ಇರುವ ಬಗ್ಗೆ ಈಗಾಗಲೇ ಮಾಹಿತಿ ಹೊರ ಬಿದ್ದಿದೆ. ಈ ಪ್ರಕರಣದಲ್ಲಿರುವ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವ ಇದೆ ಎಂದರು.ಸ್ವತ ಗೃಹ ಸಚಿವರೆ ಸಂಖ್ಯೆ ಹೆಚ್ಚಾಗುವ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದ ಅವರು, ಈ ಪ್ರಕರಣದಲ್ಲಿ ಯಾರಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ತಿಳಿದ ವಿಷಯವಾಗಿದೆ. ಕೂಡಲೇ ತನಿಖೆ ನಡೆಸಿ, ಈ ಪ್ರಕರಣದ ಹಿಂದೆ ಇರುವ ಸಚಿವರ ಹೆಸರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಶಾಸಕರನ್ನು ಅಮಾನತುಗೊಳಿಸಿರುವುದು ರಾಜಕೀಯ ಪ್ರೇರಿತವಾಗಿದೆ ಎಂದರು.ಸರ್ಕಾರ ಅನುದಾನ ನೀಡಿದರೆ ಆನೆಗೊಂದಿ ಉತ್ಸವ:
ಸರ್ಕಾರ ಅನುದಾನ ನೀಡಿದರೆ ಮಾತ್ರ ಆನೆಗೊಂದಿ ಉತ್ಸವ ಆಚರಿಸಲು ಸಾಧ್ಯವಾಗುತ್ತದೆ ಎಂದ ಅವರು, ಈಗಾಗಲೇ ಕಳೆದ ಬಾರಿಯ ಬಾಕಿ ಹಣ ₹5 ಕೋಟಿ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಅಲ್ಲದೆ ಈ ಬಾರಿಯ ಉತ್ಸವಕ್ಕೂ ಅನುದಾನ ನೀಡುವಂತೆ ಕೋರಿದೆ. ಅನುದಾನ ನೀಡಿದರೆ ಮಾತ್ರ ಏಪ್ರಿಲ್ ಎರಡನೇ ವಾರದಲ್ಲಿ ಅದ್ಧೂರಿ ಉತ್ಸವ ನಡೆಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮೌಲಾಸಾಬ್ ಇದ್ದರು.