ಹೊನ್ನೂರು ಗ್ರಾಪಂ ೧.೮೭ ಕೋಟಿ ರು. ಕ್ರಿಯಾ ಯೋಜನೆ

| Published : Nov 22 2025, 02:00 AM IST

ಸಾರಾಂಶ

ಹೊನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೨೦೨೫-೨೬ ನೇ ಸಾಲಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ೧.೮೭ ಕೋಟಿ ರು. ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಎಂ. ಗುರುಪ್ರಸಾದ್ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ, ಯಳಂದೂರು

ಹೊನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೨೦೨೫-೨೬ ನೇ ಸಾಲಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ೧.೮೭ ಕೋಟಿ ರು. ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಎಂ. ಗುರುಪ್ರಸಾದ್ ಮಾಹಿತಿ ನೀಡಿದರು.

ಶುಕ್ರವಾರ ಗ್ರಾಪಂ ಕಚೇರಿ ಮುಂಭಾಗ ನಡೆದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಸ್ತೆ, ಚರಂಡಿ, ಕಾಲುವೆ, ಕೊಟ್ಟಿಗೆ ನಿರ್ಮಾಣ, ಜಮೀನು ಅಭಿವೃದ್ಧಿ, ಬದು ನಿರ್ಮಾಣ, ಗಿಡಗಳನ್ನು ನೆಡುವುದು, ವಸತಿ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಅನೇಕ ಸಾಮೂಹಿಕ ಹಾಗೂ ವೈಯುಕ್ತಿಕ ಕಾಮಗಾರಿಗಳು ನಡೆದಿವೆ. ಸಾವಿರಾರು ಮಂದಿ ನರೇಗಾ ಕೂಲಿಯಾಳುಗಳಿಗೆ ಉದ್ಯೋಗವನ್ನು ಸೃಜನೆ ಮಾಡಲಾಗಿದೆ. ಹತ್ತಾರು ಕೋಟಿ ರು. ಇದಕ್ಕಾಗಿ ವಿನಿಯೋಗ ಮಾಡಲಾಗಿದೆ. ಸಾಮಾಗ್ರಿ ಹಾಗೂ ಕೂಲಿ ಮೊತ್ತವನ್ನು ಈಗಾಗಲೇ ಪಾವತಿಸಲಾಗಿದೆ. ಗ್ರಾಮೀಣ ಭಾಗದ ಬಡವರ ಪಾಲಿಗೆ ಈ ಯೋಜನೆ ಅಮೃತ ಸಂಜೀವಿನಿಯಾಗಿದೆ. ಕೂಲಿ ಇಲ್ಲದೆ ಪರ ಊರುಗಳಿಗೆ ಗುಳೆ ಹೋಗುವುದು ಇದರಿಂದ ಬಹುಪಾಲು ತಪ್ಪಿದೆ.

ಅಲ್ಲದೆ ಪಂಚಾಯಿತಿಯ ಅನೇಕ ಅಭಿವೃದ್ಧಿ ಕೆಲಸಗಳಿಗೂ ಕೂಡ ಈ ಯೋಜನೆ ವರದಾನವಾಗಿದೆ. ಬೀಚಹಳ್ಳಿ, ಹೊನ್ನೂರು ಗ್ರಾಮಗಳಲ್ಲಿ ಅನೇಕ ರಸ್ತೆ, ಚರಂಡಿ, ಕಾಲುವೆಗಳು, ಜಮೀನುಗಳಿಗೆ ತೆರಳುವ ರಸ್ತೆ ಅಭಿವೃದ್ಧಿಯಾಗಿದ್ದು ಸಾರ್ವಜನಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ೨೦೨೫-೨೬ ನೇ ಸಾಲಿನಲ್ಲಿ ೧.೮೭ ಕೋಟಿ ರು.ಗಳ ಕ್ರಿಯಾ ಯೋಜನೆ ರೂಪಿಸಲಾಗಿದ್ದು ಇದರಿಂದ ಮತ್ತಷ್ಟು ಕೂಲಿಯಾಳುಗಳಿಗೆ ಕೂಲಿ ನೀಡುವ ಇದರೊಂದಿಗೆ ಗ್ರಾಮಾಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಪಂ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಆರ್. ಪುಟ್ಟಬಸವಯ್ಯ, ಅನಿತಾ ನಿರಂಜನ್, ಎಚ್.ಆರ್. ಕುಮಾರ್, ನಾಗರಾಜು, ಚಿನ್ನಪ್ಪ, ಟಿ.ಎನ್. ರಾಧಾ, ಜಯಮ್ಮ, ಇಂದ್ರಾಣಿ, ನಾಗರತ್ನ ರಾಧಾ ಗುರುಸ್ವಾಮಿ, ಪಿಡಿಒ ನಿರಂಜನ್‌ಕುಮಾರ್, ನೋಡಲ್ ಅಧಿಕಾರಿ ಸಂಪತ್‌ಕುಮಾರ್, ತೋಟಗಾರಿಕಾ ಇಲಾಖೆಯ ಶಿವರಂಜನಿ ಸೇರಿದಂತೆ ಅನೇಕರು ಇದ್ದರು.