ಸಾರಾಂಶ
ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾಷಣ ಮಾಡಲು ಅವಕಾಶ ಕೊಟ್ಟು ಅವರನ್ನು ಸನ್ಮಾನಿಸಿದ ಕಾರ್ಯಕ್ರಮ ಇದೀಗ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಚ್ಚಿಲದ ಮಹಾಲಕ್ಷ್ಮೀ ದೇವಾಲಯದಲ್ಲಿ ನಡೆದ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾಷಣ ಮಾಡಲು ಅವಕಾಶ ಕೊಟ್ಟು ಅವರನ್ನು ಸನ್ಮಾನಿಸಿದ ಕಾರ್ಯಕ್ರಮ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅನಾಪೇಕ್ಷಿತ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.ದೇವಾಲಯದ ಕಾರ್ಯಕ್ರಮದಲ್ಲಿ ಮುಸ್ಲಿಂ ವ್ಯಕ್ತಿಗೆ ಭಾಷಣ ಮಾಡಲು ಅವಕಾಶ ನೀಡಿದ್ದು ಹಿಂದುಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಹಿಂದೂಪರ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈಗ ಇದೇ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ. ಮುಸ್ಲಿಂ ವ್ಯಕ್ತಿಗೆ ಸನ್ಮಾನಕ್ಕೆ ತಾನು ಕಾರಣ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆರೋಪಿಸಿದ್ದಾರೆ. ಆದರೆ ಸನ್ಮಾನಕ್ಕೂ ತನಗೂ ಸಂಬಂಧ ಇಲ್ಲ ಎಂದಿದ್ದಾರೆ.ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ, ಮಸೀದಿಗೆ ಭೇಟಿ ನೀಡಿದ್ದ ತನ್ನ ಫೋಟೋವನ್ನು ಬಳಸಿಕೊಂಡು ತನ್ನನ್ನು ಹಿಂದೂ ವಿರೋಧಿ ಎಂಬಂತೆ ಚಿತ್ರಿಸಿ, ತನ್ನನ್ನು ಸೋಲಿಸಿದ್ದರು ಎಂದವರು ಆರೋಪಿಸಿದ್ದಾರೆ.