ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪತ್ರಕರ್ತೆ ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ ಮತ್ತು ಚುನಾವಣೆಗಳಲ್ಲಿ ಪಕ್ಷಗಳು ಪ್ರಮುಖ ಜವಾಬ್ದಾರಿ ನೀಡುತ್ತಿರುವುದನ್ನು ಖಂಡಿಸಿ ಶಿವಮೊಗ್ಗದಲ್ಲಿ ಗೌರಿ ಸ್ಮಾರಕ ಟ್ರಸ್ಟ್ ಮತ್ತು ಗೌರಿ ಬಳಗದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಗೌರಿ ಹಂತಕ ಶ್ರೀಕಾಂತ್ ಹೊಂಗಾರ್‍ಕರ್ ಜಾಮೀನಿನ ಮೇಲೆ ಹೊರಬಂದ ಕೂಡಲೇ ಮಹಾರಾಷ್ಟ್ರದ ಚುನಾವಣೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿರುವುದು ಖಂಡನೀಯ. ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳನ್ನು ಕೊಲೆ ಪ್ರಚೋದನೆಯಡಿ ಬಂಧಿಸಬೇಕು. ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು. ಗೌರಿ ಕೊಲೆಯ ವಿಚಾರಣೆ ತ್ವರಿತಗೊಳಿಸಿ ಹಂತಕರಿಗೆ ಶೀಘ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಪ್ರಗತಿಪರ ಚಿಂತಕ ಕೆ.ಎಸ್ ಅಶೋಕ್ ಮಾತನಾಡಿ, ಗೌರಿ ಹಂತಕರಿಗೆ ಶಿಕ್ಷೆಯಾಗಬೇಕು ಎಂದು ದೇಶ, ವಿದೇಶದಲ್ಲಿ ಆಗ್ರಹ ಕೇಳಿ ಬಂದಿತ್ತು. ಬಂಧಿತರ ಪೈಕಿ ಇಬ್ಬರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಈ ಪೈಕಿ ಒಬ್ಬನಿಗೆ ಸನ್ಮಾನ ನಡೆದಿದೆ. ಮತ್ತೊಬ್ಬನಿಗೆ ಚುನಾವಣೆ ಉಸ್ತುವಾರಿ ವಹಿಸಲಾಗಿದೆ. ಕರ್ನಾಟಕದಲ್ಲಿ ವೈಚಾರಿಕ ಭಿನ್ನಾಭಿಪ್ರಾಯ ಇತ್ತು. ಆದರೆ ಈಗ ಒಬ್ಬನಿಗೆ ಸನ್ಮಾನ ಮಾಡಿ ಮತ್ತಷ್ಟು ಕೊಲೆಗಳಿಗೆ ಪ್ರಚೋದನೆ ನೀಡಿದಂತಾಗಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಚಿಂತಕ ಚಂದ್ರೇಗೌಡ ಮಾತನಾಡಿ, ಸಂಚು ರೂಪಿಸಿ ಗೌರಿಯ ಹತ್ಯೆ ಮಾಡಲಾಯಿತು. ಕೊಲೆ ಆರೋಪಿಗಳಿಗೆ ಸನ್ಮಾನ ಮಾಡುವುದು ಸರಿಯಲ್ಲ. ಪ್ರಪಂಚದಲ್ಲಿ ಎಲ್ಲೂ ನಡೆಯದ ಕೃತ್ಯವಿದು. ಗೌರಿಯನ್ನು ಕೊಂದಿರಬಹುದು. ಆದರೆ, ಆಕೆಯ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದರು.
ಸಾಹಿತಿ ಸಾ. ಉಷಾ ಮಾತನಾಡಿ, ನಾವು ಅಹಿಂಸೆ, ಗಾಂಧಿ, ಗೌರಿಯನ್ನು ಪ್ರೀತಿಸುತ್ತೇವೆ. ನಮ್ಮ ಹೋರಾಟವನ್ನು ಸರ್ಕಾರ ಗಮನಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಒತ್ತಾಯಿಸಿದರು.ವಕೀಲ ಕೆ.ಪಿ ಶ್ರೀಪಾಲ್ ಮಾತನಾಡಿ, ಆರೋಪಿಗಳು ನಿರ್ದೋಷಿ ಅಂತಾ ಬಿಡುಗಡೆ ಆಗಿದ್ದಲ್ಲ. ಐದಾರು ವರ್ಷ ಅವರಿಗೆ ಜಾಮೀನು ದೊರೆತಿರಲಿಲ್ಲ. ಮುಖ್ಯ ಸಾಕ್ಷಿಗಳ ವಿಚಾರಣೆ ಮುಗಿದ ಹಿನ್ನೆಲೆ ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಆದರೆ ಇಂತಹವರಿಗೆ ಸನ್ಮಾನ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಸಿದ್ದರಾಮಯ್ಯ ಸರ್ಕಾರ ತಕ್ಷಣ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶೃಂಗೇಶ್, ಎನ್. ರವಿಕುಮಾರ್, ಶಿವಕುಮಾರ್, ಅನಿಲ್, ಹಾಲೇಶಪ್ಪ ಸೇರಿದಂತೆ ಹಲವರು ಇದ್ದರು.