ಸಾಮಾನ್ಯವಾಗಿ ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕೆಲವು ಉತ್ತರ ಮತ್ತು ಈಶಾನ್ಯ ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಪಕ್ಷಿ, ಲಕ್ಷ್ಮೇಶ್ವರ ಭಾಗದಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಲಕ್ಷ್ಮೇಶ್ವರ: ತಾಲೂಕಿನ ಹರದಗಟ್ಟಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಪರೂಪದ ಹಾರ್ನ್‌ಬಿಲ್ ಪಕ್ಷಿ ಕಾಣಿಸಿಕೊಂಡಿರುವುದು ಪ್ರಕೃತಿಪ್ರಿಯರಲ್ಲಿ ವಿಸ್ಮಯ ಮೂಡಿಸಿದೆ.

ಈ ಪ್ರದೇಶದಲ್ಲಿ ಹಲವು ಬಗೆಯ ವಿದೇಶಿ ವಲಸೆ ಹಾಗೂ ಸ್ಥಳೀಯ ಪಕ್ಷಿಗಳು ಕಂಡುಬರುತ್ತಿದ್ದು, ಇದೀಗ ಹಾರ್ನ್‌ಬಿಲ್ ಪಕ್ಷಿಯೂ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಇತ್ತೀಚೆಗೆ ಹರದಗಟ್ಟಿ ಅರಣ್ಯ ಪ್ರದೇಶದಲ್ಲಿ ಹಾರಾಡುತ್ತಿದ್ದ ಹಾರ್ನ್‌ಬಿಲ್ ಪಕ್ಷಿಯನ್ನು ಛಾಯಾಗ್ರಾಹಕ ಹಾಗೂ ಪತ್ರಕರ್ತ ಸುರೇಶ ಲಮಾಣಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಸಾಮಾನ್ಯವಾಗಿ ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕೆಲವು ಉತ್ತರ ಮತ್ತು ಈಶಾನ್ಯ ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಪಕ್ಷಿ, ಲಕ್ಷ್ಮೇಶ್ವರ ಭಾಗದಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು, ಲಕ್ಷ್ಮೇಶ್ವರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಾರ್ನ್‌ಬಿಲ್ ಪಕ್ಷಿ ಕಾಣಿಸಿಕೊಳ್ಳುವುದು ಅತ್ಯಂತ ಅಪರೂಪ. ಸಾಮಾನ್ಯವಾಗಿ ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಈ ಪಕ್ಷಿ ಇಲ್ಲಿ ಕಂಡುಬಂದಿರುವುದು ಪ್ರಕೃತಿಯ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಇದರ ಕುರಿತು ಹೆಚ್ಚಿನ ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಹಾರ್ನ್‌ಬಿಲ್ ಪಕ್ಷಿಯು ಉದ್ದವಾದ, ಬಲಿಷ್ಠ ಕೊಕ್ಕು ಹೊಂದಿದ್ದು, ಹಳದಿ, ಕಂದು ಹಾಗೂ ಕಪ್ಪು ಬಣ್ಣಗಳ ಸುಂದರ ಸಂಯೋಜನೆಯಿಂದ ಆಕರ್ಷಕವಾಗಿ ಕಾಣುತ್ತದೆ. ಅದರ ರೆಕ್ಕೆಗಳ ಕೆಳಭಾಗ ಚಾಕೊಲೇಟ್ ಬಣ್ಣದಲ್ಲಿದ್ದು, ಹಾರುವಾಗ ವಿಶಿಷ್ಟ ಸೌಂದರ್ಯವನ್ನು ಮೂಡಿಸುತ್ತದೆ. ಕೊಕ್ಕರೆಯನ್ನು ಹೋಲುವ ಆಕಾರ ಹೊಂದಿದ್ದರೂ ಅದರ ಕೊಕ್ಕಿನ ವಿನ್ಯಾಸ ಮತ್ತು ದೇಹದ ರಚನೆ ಇದನ್ನು ಇತರ ಪಕ್ಷಿಗಳಿಗಿಂತ ಭಿನ್ನವಾಗಿಸುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸೇರಿದಂತೆ ಮಲೆನಾಡಿನ ಅರಣ್ಯ ಪ್ರದೇಶಗಳಲ್ಲಿ ಈ ಪಕ್ಷಿ ಸಾಮಾನ್ಯವಾಗಿ ಕಂಡುಬರುತ್ತದೆ. ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಅರಣ್ಯದಲ್ಲಿ ಹಾರ್ನ್‌ಬಿಲ್ ಪಕ್ಷಿಯ ಆಗಮನ ಪರಿಸರದ ಸಮೃದ್ಧ ಜೀವವೈವಿಧ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ. ಮಾಗಡಿ ಕೆರೆಯು ಪಟ್ಟೆ ತಲೆ ಹಬ್ಬಾತುಗಳಿಗೆ ಪ್ರಸಿದ್ಧಿ ಹೊಂದಿದ ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದರೆ, ಹರದಗಟ್ಟಿ ಅರಣ್ಯ ಪ್ರದೇಶವು ಹಾರ್ನ್‌ಬಿಲ್ ಪಕ್ಷಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಛಾಯಾಗ್ರಾಹಕ ಸುರೇಶ ಲಮಾಣಿ ಹೇಳಿದರು.