ತೋಟಗಾರಿಕಾ ಇಲಾಖೆ ಜಾಗ ಒತ್ತುವರಿ ತೆರವು ಮಾಡಿ

| Published : Nov 16 2024, 12:38 AM IST

ಸಾರಾಂಶ

ತಾಲೂಕಿನ ತೋಟಗಾರಿಕಾ ಇಲಾಖೆಯ 90 ಎಕರೆ ಜಾಗವನ್ನು ಕೆಲವರು ಒತ್ತುವರಿ ಮಾಡಿರುವ ಆರೋಪವಿದ್ದು, ಕೂಡಲೇ ಅದರ ತೆರವು ಕಾರ್ಯ ನಡೆಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಸಾಗರ

ತಾಲೂಕಿನ ತೋಟಗಾರಿಕಾ ಇಲಾಖೆಯ 90 ಎಕರೆ ಜಾಗವನ್ನು ಕೆಲವರು ಒತ್ತುವರಿ ಮಾಡಿರುವ ಆರೋಪವಿದ್ದು, ಕೂಡಲೇ ಅದರ ತೆರವು ಕಾರ್ಯ ನಡೆಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದರು.ಪಟ್ಟಣದ ಹೊರವಲಯದ ಶಿವಮೊಗ್ಗ ರಸ್ತೆಯ ಯಳವರಸಿಯಲ್ಲಿರುವ ತೋಟಗಾರಿಕೆ ಇಲಾಖೆಯ ಸಸ್ಯೋತ್ಪಾದನಾ ಕ್ಷೇತ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕೂಡಲೇ ಜಾಗದ ಸರ್ವೆಕಾರ್ಯ ನಡೆಸಬೇಕು. ಅದಕ್ಕೆ ಅಗತ್ಯವಿರುವ ದಾಖಲೆಗಳನ್ನು ತೆಗೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾರೇ ಒತ್ತುವರಿ ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.ಇಲಾಖೆಯ ಸಸ್ಯೋತ್ಪಾದನಾ ಕೇಂದ್ರದಲ್ಲಿ ಮಾವು, ತೆಂಗು, ಅಡಕೆ, ಕಾಳಮೆಣಸು, ಮೊದಲಾದ ತೋಟಗಾರಿಕಾ ಬೆಳೆಗಳ ಗಿಡಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ ಈ ಪ್ರದೇಶದ ಉನ್ನತೀಕರಣ ಅಗತ್ಯವಿದ್ದು, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ಮೂಲಸೌಕರ್ಯಗಳಿಲ್ಲದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೂಡಲೇ ಸಚಿವರೊಂದಿಗೆ ಮಾತನಾಡಿ ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಹೇಳಿದರು.ತಾಲೂಕಿಗೆ ಅಗತ್ಯವಿರುವ ರೀತಿಯಲ್ಲಿ ಇಲಾಖೆಯ ಜಾಗವನ್ನು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಶೀಘ್ರದಲ್ಲಿ ತೋಟಗಾರಿಕಾ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ತೋಟಗಾರಿಕಾ ಸಹಾಯಕ ಅಧಿಕಾರಿ ವೆಂಕಟೇಶ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುರೇಶ್ ಬಾಬು, ಪ್ರಮುಖರಾದ ಗಣಪತಿ ಮಂಡಗಳಲೆ, ಡಿ. ದಿನೇಶ್, ಜಯರಾಮ್, ಸಿ.ಎಂ. ಚಿನ್ಮಯ್, ಚೇತನ್ ರಾಜ್ ಕಣ್ಣೂರು, ಸಂತೋಷ್ ಮೊದಲಾದವರಿದ್ದರು.