ಸಂಬಂಧಗಳನ್ನು ಬೆಸೆಯುವ ಹೊಸದ್ಯಾವರ ಹಬ್ಬ

| Published : Nov 11 2024, 01:08 AM IST / Updated: Nov 11 2024, 01:09 AM IST

ಸಾರಾಂಶ

ಅವಿಭಕ್ತ ಕುಟುಂಬಗಳೆ ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಹೊಸದ್ಯಾವರ ಆಚರಣೆ ವೇಳೆ ಕುಟುಂಬದ ಎಲ್ಲರೂ ಒಂದೆಡೆ ಸೇರುವುದೆ ವಿಶೇಷ. ಆ ಕ್ಷಣ ಪೂರ್ವಿಕರ ಕಾಲದಲ್ಲಿದ್ದ ಅವಿಭಕ್ತ ಕುಟುಂಬ ಕಣ್ಮುಂದೆ ಬರಲಿದೆ. ಕುಟುಂಬದ ಸದಸ್ಯರು ಒಂದೆಡೆ ಸೇರಿ ಊಟವನ್ನು ತಯಾರಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಒಕ್ಕಲಿಗ ಮತ್ತು ದಲಿತ ಸಮೂದಾಯಗಳಲ್ಲಿ ಸುಮಾರು ಏಳು ನೂರು ವರ್ಷಗಳಿಗೂ ಹಿಂದಿನಿಂದ ಆಚರಿಸಿಕೊಂಡು ಬರುತ್ತಿರುವ ಹೊಸದ್ಯಾವರ ಹಬ್ಬವನ್ನು ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರಧ್ದಾ ಭಕ್ತಿಯಿಂದ ಆಚರಿಸಲಾಯಿತು.

ದೀಪಾವಳಿ ಮುಗಿದ ನಂತರ ಎಲ್ಲೆಡೆ ಸಂಭ್ರಮ ಸಡಗರದಿಂದ ಹೆಣ್ಣು ಮಕ್ಕಳೆಲ್ಲ ಒಂದೆಡೆ ಸೇರಿ ಹೊಸದ್ಯಾವರ ಹಬ್ಬದ ಆಚರಣೆ ಮಾಡುತ್ತಾರೆ. ಈ ಮೂಲಕ ಬಾಂಧವ್ಯದ ಬೆಸುಗೆ ಮೂಡಿಸಲಾಗುತ್ತದೆ. ದೀಪಾವಳಿ ಮುಗಿದ ಮೊದಲ ಅಥವಾ ಎರಡನೇ ಭಾನುವಾರದಲ್ಲಿ ಹೊಸದ್ಯಾವರ ಹಬ್ಬ ಆಚರಿಸಲಾಗುತ್ತದೆ.ತಲೆಯ ಮೇಲೆ ತಂಬಿಟ್ಟಿನ ದೀಪ

ಹೊಸದ್ಯಾವರ ಹಬ್ಬದಲ್ಲಿ ಭಾಗವಹಿಸುವ ಮಹಿಳೆಯರೆಲ್ಲ ಬಿಳಿಯ ಬಣ್ಣದ ಸೀರೆ ಧರಿಸುತ್ತಾರೆ. ಕೆಲವೆಡೆ, ವಿವಿಧ ಬಣ್ಣದ ಹೊಸ ಸೀರೆಯನ್ನು ತೊಟ್ಟು ಬೆರಳಿಗೆ ಬೆಳ್ಳಿಯ ಉಂಗುರ ಹಾಕಿಕೊಳ್ಳುತ್ತಾರೆ. ತಲೆಯ ಮೇಲೆ ಮಡಿಕೆ ಮತ್ತು ತಂಬಿಟ್ಟಿನ ದೀಪ ಹೊರುವ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕುಟುಂಬದ ಹಿರಿಯ ಅಜ್ಜಿಯಿಂದ ಮೊದಲುಗೊಂಡು, ನವ ವಿವಾಹಿತೆವರೆಗೆ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.

ಶತಾಯುಷಿ ನಾರಾಯಣಮ್ಮ ಭಾಗಿ

ನಾಯನಹಳ್ಳಿ ಗ್ರಾಮದ ರೈತ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ ನವರ ಮನೆಯಲ್ಲಿ ಹೊಸ ದ್ಯಾವರ ಮಾಡಲಾಗಿದ್ದು, 102 ವರ್ಷದ ನಾರಾಯಣಮ್ಮ ಈ ಬಾರಿ ತಲೆಯ ಮೇಲೆ ಮಡಿಕೆ ಮತ್ತು ತಂಬಿಟ್ಟಿನ ದೀಪ ಹೊರುವ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಅವಿಭಕ್ತ ಕುಟುಂಬಗಳೆ ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಹೊಸದ್ಯಾವರ ಆಚರಣೆ ವೇಳೆ ಕುಟುಂಬದ ಎಲ್ಲರೂ ಒಂದೆಡೆ ಸೇರುವುದೆ ವಿಶೇಷ. ಆ ಕ್ಷಣ ಪೂರ್ವಿಕರ ಕಾಲದಲ್ಲಿದ್ದ ಅವಿಭಕ್ತ ಕುಟುಂಬ ಕಣ್ಮುಂದೆ ಬರಲಿದೆ. ಕುಟುಂಬದ ಸದಸ್ಯರು ಒಂದೆಡೆ ಸೇರಿ ಊಟವನ್ನು ತಯಾರಿಸಲಾಗುತ್ತದೆ. ಇದು ಸಮುದಾಯದ ಆಯಾ ಕುಟುಂಬಗಳು ಆಚರಿಸುವುದಾದರೂ, ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿಸುತ್ತದೆ ಎಂದು ತಿಳಿಸಿದರು.