ಸಾರಾಂಶ
ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.
ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್‌ಗಳನ್ನು ತೆರೆದು ನದಿಗೆ 1 ಲಕ್ಷದ 41 ಸಾವಿರ ಕ್ಯುಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿಲಿಂಗ ಸ್ಮಾರಕಗಳು ಜಲಾವೃತವಾಗಿವೆ.
ಈ ಮಧ್ಯೆ ಆಗಸ್ಟ್ 6ರಂದು ಸಿಎಂ ಸಿದ್ದರಾಮಯ್ಯ ತುಂಗಭದ್ರಾ ಜಲಾಶಯದಲ್ಲಿ ಬಾಗಿನ ಅರ್ಪಿಸಲಿದ್ದಾರೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನಾಡದೊರೆ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ.ಯಾವ್ಯಾವ ಸ್ಮಾರಕಗಳು?
ಹಂಪಿಯ ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಪುರಂದರದಾಸರ ಮಂಟಪ, ಕಾಲು ಸೇತುವೆ, ಜನಿವಾರ ಮಂಟಪ, ಸಂಪೂರ್ಣ ಮುಳುಗಡೆಯಾಗಿವೆ. ಕೋದಂಡರಾಮಸ್ವಾಮಿ ದೇವಾಲಯದ ಬಳಿಯ ಮಂಟಪಗಳು ಕೂಡ ಜಲಾವೃತವಾಗಿವೆ. ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದ್ದು, ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ಉಬ್ಬು ಶಿಲ್ಪಗಳು, ಕೋಟಿಲಿಂಗ ಸ್ಮಾರಕಗಳು ಜಲಾವೃತವಾಗಿವೆ. ಹಂಪಿಯಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಬಳಿಯ ತುಂಗಭದ್ರಾ ನದಿಯಿಂದ ವಿರೂಪಾಪುರ ಗಡ್ಡೆ ಭಾಗದ ಕಡೆಗೆ ತೆರಳಲು ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ತಳವಾರಘಟ್ಟ ಸೇತುವೆಯಿಂದ ಆನೆಗೊಂದಿ, ಅಂಜನಾದ್ರಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಬೋಟಿಂಗ್ ಸೇವೆಯನ್ನೂ ಸ್ಥಗಿತಗೊಂಡಿದೆ. ಹಂಪಿಯ ಚಕ್ರತೀರ್ಥದ ಬಳಿ ಹರಿಗೋಲು ಕೂಡ ಬಂದ್ ಮಾಡಲಾಗಿದೆ.ಚಕ್ರತೀರ್ಥ ಪ್ರದೇಶದ ಋಷಿ ಮಂಟಪ, ಕೋಟಿಲಿಂಗ, ವಿಷ್ಣು ಮಂಟಪ, ಲಕ್ಷ್ಮೀ ನರಸಿಂಹ ಮಂಟಪ ಸೇರಿದಂತೆ ವಿವಿಧ ಮಂಟಪಗಳು ಜಲಾವೃತವಾಗಿವೆ. ಕೋದಂಡರಾಮಸ್ವಾಮಿ ದೇವಾಲಯದ ಬಳಿ ಗೂಡಂಗಡಿಯಲ್ಲಿದ್ದ ಸರಂಜಾಮುಗಳನ್ನುಅಂಗಡಿ ಮಾಲೀಕರು ಎತ್ತಿಟ್ಟರು.
ತುಂಗಭದ್ರಾ ಜಲಾಶಯದ ಮಟ್ಟ 1633 ಅಡಿ ಇದ್ದು, 1631.68 ಅಡಿಯವರೆಗೆ ನೀರು ಬಂದಿದೆ. ಜಲಾಶಯದಲ್ಲಿ 100.054 ಟಿಎಂಸಿ ನೀರು ಸಂಗ್ರಹವಾಗಿದೆ. ನದಿಗೆ ಭಾರೀ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ತುಂಗಭದ್ರಾ ಮಂಡಳಿ ಎಚ್ಚರಿಕೆ ಸಂದೇಶ ರವಾನಿಸಿದೆ. ಇನ್ನು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದೆ.ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಲಾಶಯ ಭರ್ತಿಯಾಗಿದೆ. ಆ. 6ರಂದು ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಬಾಗಿನ ಅರ್ಪಿಸಲಿದ್ದಾರೆ. ಇದಕ್ಕೆ ಎಲ್ಲ ಸಿದ್ಧತೆಗಳು ನಡೆದಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್.